ADVERTISEMENT

ಬೋಧನಾ ಅವಧಿ ಹೆಚ್ಚಳ ಆದೇಶ ವಾಪಸ್‌?

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಬೆಂಗಳೂರು: ಪದವಿ ಕಾಲೇಜುಗಳ ಪ್ರಾಧ್ಯಾ­ಪಕರ ವಾರದ ಕನಿಷ್ಠ ಬೋಧನಾ ಅವಧಿಯನ್ನು 22 ಗಂಟೆಗೆ ಹೆಚ್ಚಿಸಿರುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳು  ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಗುರುವಾರ ಪ್ರಸ್ತಾವ ಸಲ್ಲಿಸಿದ್ದಾರೆ.

ಒಂದೆರಡು ದಿನಗಳಲ್ಲಿ ಅವರು ಸಹಿ ಮಾಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಪ್ರಾಧ್ಯಾಪಕರು ವಾರದಲ್ಲಿ ಕನಿಷ್ಠ 16 ಗಂಟೆ ಬೋಧನೆ ಮಾಡಬೇಕು ಮತ್ತು ಆರು ಗಂಟೆಗಳನ್ನು ಸಂಶೋಧನೆ, ಅಧ್ಯಯನಕ್ಕಾಗಿ ಮೀಸಲಿಡಬೇಕು ಎಂಬ ನಿಯಮ ಹಿಂದೆ ಜಾರಿಯಲ್ಲಿತ್ತು.

ಸಂಶೋಧನೆ, ಅಧ್ಯಯನದಲ್ಲಿ ನಿರತರಾಗದ ಪ್ರಾಧ್ಯಾಪಕರು ವಾರದಲ್ಲಿ ಕನಿಷ್ಠ 22 ಗಂಟೆ ಬೋಧನೆ ಮಾಡಬೇಕು ಎಂದು ನವೆಂಬರ್‌ 10ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪದವಿ ಕಾಲೇಜುಗಳ ಪ್ರಾಧ್ಯಾಪಕರ ಸಂಘ ವಿರೋಧಿಸಿತ್ತು. ಅತಿಥಿ ಉಪನ್ಯಾಸಕರ ಸಂಘದಿಂದಲೂ ವಿರೋಧ ವ್ಯಕ್ತವಾಗಿತ್ತು. ಬೋಧನಾ ಅವಧಿ ಹೆಚ್ಚಳದ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಪ್ರಾಧ್ಯಾಪಕರು ಒತ್ತಾಯಿಸಿದ್ದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯಕ್ತ ಬಿ.ಜಿ.ನಂದಕುಮಾರ್‌ ಅವರು ಗುರುವಾರ ಸಂಜೆ ಪ್ರಾಧ್ಯಾಪಕರ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಬಳಿಕ ಹೊಸ ಆದೇಶವನ್ನು ಹಿಂದಕ್ಕೆ ಪಡೆಯುವ ಸಂಬಂಧ ಸಚಿವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.    
 
ಎಲ್ಲ ಪ್ರಾಧ್ಯಾಪಕರು 16 ಗಂಟೆ ಬೋಧನೆ ಮತ್ತು ಆರು ಗಂಟೆಗಳ ಕಾಲ ಸಂಶೋಧನೆ, ಅಧ್ಯಯನ ನಡೆಸುತ್ತಿದ್ದಾರೆ ಎಂದು ಪ್ರಾಧ್ಯಾಪಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ವಾದಿಸಿದ್ದಾರೆ. ಈ ಕಾರಣದಿಂದ ಸಂಶೋಧನೆ, ಅಧ್ಯಯನ ನಡೆಸುತ್ತಿರುವ ಪ್ರಾಧ್ಯಾಪಕರ ಪಟ್ಟಿಯನ್ನು ಪಡೆಯಲು ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಚಿವ ದೇಶಪಾಂಡೆ, ‘ಬೋಧನಾ ಅವಧಿ ಹೆಚ್ಚಳದ ಆದೇಶ ಹಿಂದಕ್ಕೆ ಪಡೆಯುವ ಸಂಬಂಧ ಪ್ರಸ್ತಾವ ಬಂದಿದೆ ಎಂದು ಗೊತ್ತಾಗಿದೆ. ಅದನ್ನು ನಾನು ಇನ್ನೂ ಪರಿಶೀಲನೆ ನಡೆಸಿಲ್ಲ. ಪ್ರಸ್ತಾವವನ್ನು ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಶೈಕ್ಷಣಿಕ ವರ್ಷದ ಕೊನೆ ಭಾಗದಲ್ಲಿ ಗೊಂದಲ ಸೃಷ್ಟಿಯಾಗಿ, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಆಗಬಾರದು ಎನ್ನುವ ಕಾರಣಕ್ಕೆ ಸದ್ಯಕ್ಕೆ ಆ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಮೂಲಗಳು ತಿಳಿಸಿವೆ.                       

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.