ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳ ಸಲುವಾಗಿ ಬಿಡುಗಡೆಯಾಗಿದ್ದ ₹1,335 ಕೋಟಿ ಹಣವನ್ನು ಸದ್ಬಳಕೆ ಮಾಡದೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಅಕ್ರಮ ವಾಗಿ ಠೇವಣಿ ಇಟ್ಟಿದ್ದನ್ನು ಈ ಕುರಿತು ಅಧ್ಯಯನ ನಡೆಸಲು ನೇಮಿಸಿದ್ದ ಸಮಿತಿ ಪತ್ತೆ ಮಾಡಿದೆ.
ಹಿರಿಯ ಐಎಫ್‌ಎಸ್ ಅಧಿಕಾರಿ ಪುನ್ನಟಿ ಶ್ರೀಧರ ನೇತೃತ್ವದ ಸಮಿತಿ ಈ ಕುರಿತು ಸೋಮವಾರ ಸಲ್ಲಿಸಿದ ಅಂತಿಮ ವರದಿಯ ವಿವರಗಳನ್ನು ಗ್ರಾಮೀಣಾ ಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಮಂಗಳವಾರ ಸುದ್ದಿಗಾರರಿಗೆ ವಿವರಿಸಿದರು.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಸೇರಿದಂತೆ ಇತರ ಸಂಸ್ಥೆಗಳಲ್ಲಿನ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ನಂತರ ಈ ಅಕ್ರಮಗಳನ್ನು ಪಟ್ಟಿ ಮಾಡಿದೆ.
‘ಅಕ್ರಮ ಠೇವಣಿ ಕುರಿತ ವರದಿ ಕೈಸೇರಿದ್ದು, ಅದರ ಆಧಾರದ ಮೇಲೆ ವಿಶೇಷ ಲೆಕ್ಕಪರಿಶೋಧನೆಗೆ ಆದೇಶಿ ಸಲಾಗಿದೆ. ಎರಡು ತಿಂಗಳಲ್ಲಿ ಈ ಕುರಿತ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಲ್ಲಿಯವರೆಗೆ ಯಾರ‍್ಯಾರ ಪಾತ್ರ ಎಷ್ಟು ಎಂಬುದನ್ನು ಹೇಳಲಾಗದು. ಹಿಂದಿನ ಸರ್ಕಾರಗಳ ವೈಫಲ್ಯ ಕೂಡ ಇದರಲ್ಲಿ ಅಡಗಿದೆ’ ಎಂದು ಪಾಟೀಲರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಮಿತಿಯ ವರದಿಯಲ್ಲಿ ಏನಿದೆ?
*ಬಳಕೆ ಮಾಡದಿರುವ ಹಣವನ್ನು ವಿವಿಧ ಬ್ಯಾಂಕ್‌ಗಳ 1,128 ಖಾತೆಗಳಲ್ಲಿ ಠೇವಣಿ ಇಡಲಾಗಿದೆ. ಠೇವಣಿಗೂ ಬಡ್ಡಿ ಬಂದಿಲ್ಲ. ಇದರಿಂದ ₹50– 60 ಕೋಟಿ ನಷ್ಟ ಆಗಿದೆ.
*ಬಳಕೆಯಾಗದೆ ಉಳಿದಿರುವ ₹1,335 ಕೋಟಿ ಪೈಕಿ ₹505 ಕೋಟಿ ದೀರ್ಘ ಕಾಲದಿಂದ (4–5 ವರ್ಷ) ಬ್ಯಾಂಕ್‌ಗಳಲ್ಲಿಯೇ ಉಳಿದಿದೆ. ಸ್ಥಗಿತಗೊಂಡ ಯೋಜನೆಗಳ ಉಳಿಕೆ ಅನುದಾನವನ್ನು ಹಣಕಾಸು ಇಲಾಖೆಗೆ ವಾಪಸ್ ಮಾಡಬೇಕಿತ್ತು. ಹಾಗೆ ಮಾಡದ ₹58.61 ಕೋಟಿ ಕೂಡ ಬ್ಯಾಂಕ್‌ಗಳಲ್ಲಿಯೇ ಇದೆ.
*ಗ್ರಾಮೀಣ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ₹316 ಕೋಟಿಯನ್ನು ಇಲಾಖೆಯ ಲೆಕ್ಕಪತ್ರದಲ್ಲಿ ತೋರಿಸದೇ ಬ್ಯಾಂಕ್‌ನಲ್ಲಿ ಇಡಲಾಗಿದೆ.
*ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಲ್ಲಿ (ಕೆಆರ್‌ಐಡಿಎಲ್) ಖರ್ಚು ಮಾಡಿರುವ ₹3,008 ಕೋಟಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಹೊಂದಾಣಿಕೆ ಆಗುತ್ತಿಲ್ಲ.
*‘ಒಂದೊಂದು ಯೋಜನೆಗೂ ಒಂದೊಂದೇ ಬ್ಯಾಂಕ್ ಖಾತೆ ಇರಬೇಕು ಎಂಬುದು ನಿಯಮ. ಆದರೆ, ಇಲ್ಲಿ ಒಂದೊಂದು ಯೋಜನೆಗೂ ನೂರಾರು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
*ಕೆಆರ್‌ಐಡಿಎಲ್‌ನ ₹3,690 ಕೋಟಿಯನ್ನು ಕಾಮಗಾರಿಗಳಿಗಾಗಿ ಎಂಜಿನಿಯರ್‌ಗಳಿಗೆ ಮುಂಗಡವಾಗಿ ಕೊಡಲಾಗಿದೆ. ಆದರೆ ಅವರು ಅದರ ಲೆಕ್ಕ ನೀಡಿಲ್ಲ.
*ಕೆಆರ್‌ಐಡಿಎಲ್ ತನ್ನ ಹಣವನ್ನು 2013ರ ಜುಲೈವರೆಗೆ ಮ್ಯುಚುವಲ್ ಫಂಡ್‌ನಲ್ಲಿ ತೊಡಗಿಸಿದ್ದು ಆ ಬಗ್ಗೆಯೂ ತನಿಖೆ ಆಗಬೇಕು.
*ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಮನಸೋಇಚ್ಛೆ ನಿರ್ವಹಿಸಲಾಗಿದೆ. ಬೃಹತ್ ಮೊತ್ತಗಳನ್ನು ಮುಖ್ಯ ವಾಹಿನಿಗಳಲ್ಲಿ ತರದೇ ಇರುವುದು, ಯೋಜನೆಗೆ ಬಿಡುಗಡೆಯಾದ ಅನುದಾನವನ್ನು ಬಿಡುಗಡೆಯಾದ ವರ್ಷ ಅಥವಾ ನಿಗದಿತ ಸಮಯದೊಳಗೆ ಖರ್ಚು ಮಾಡದಿರುವುದು ಬೆಳಕಿಗೆ ಬಂದಿದೆ.
*ನಗದು ಪುಸ್ತಕ, ಅನುದಾನ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಮಾದರಿ ಸಹಿ ಕಡತಗಳನ್ನು ಸಮರ್ಪಕವಾಗಿ ಇಟ್ಟಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.