ADVERTISEMENT

‘ಭಾವದ ಬೆಳಕಾಗಿ’ ಕಂಡ ಅಂಬೇಡ್ಕರ್...

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:57 IST
Last Updated 14 ಏಪ್ರಿಲ್ 2017, 5:57 IST
‘ಭಾವದ ಬೆಳಕಾಗಿ’ ಕಂಡ ಅಂಬೇಡ್ಕರ್...
‘ಭಾವದ ಬೆಳಕಾಗಿ’ ಕಂಡ ಅಂಬೇಡ್ಕರ್...   

* ಅಂಬೇಡ್ಕರ್ ಮೊದಲ ಬಾರಿಗೆ ನಿಮ್ಮನ್ನು ಪ್ರವೇಶಿಸಿದ್ದು ಯಾವಾಗ ಮತ್ತು ಹೇಗೆ? ಈಗ ಅಂಬೇಡ್ಕರರನ್ನು ನೀವು ಯಾವ ರೀತಿ ಪರಿಭಾವಿಸುತ್ತೀರಿ? ‘ಮುಕ್ತಛಂದ’ದ ಈ ಎರಡು ಪ್ರಶ್ನೆಗಳಿಗೆ ಹೊಸ ತಲೆಮಾರಿನ ಎಲ್ಲ ಪ್ರತಿಕ್ರಿಯೆಗಳನ್ನು ಓದಿ, ಅವುಗಳಿಗೆ ಪ್ರತಿಕ್ರಿಯಿಸುತ್ತಲೇ, ಅಂಬೇಡ್ಕರ್‌ ಕುರಿತ ತಮ್ಮ ಅನಿಸಿಕೆಗಳನ್ನು ಕೆ. ಫಣಿರಾಜ್‌ ಇಲ್ಲಿ ದಾಖಲಿಸಿದ್ದಾರೆ. ಕೆ. ಫಣಿರಾಜ್‌ ಅವರ ಲೇಖನವನ್ನು ಎನ್.ಎ.ಎಂ. ಇಸ್ಮಾಯಿಲ್ ಅವರು ಕನ್ನಡಕ್ಕೆ ಅನುವಾದಿಸುವ ಮೂಲಕ ಓದುಗರಿಗೆ ನೀಡಿದ್ದಾರೆ.
ಅರಿವನ್ನು ಬೆಳಗುವ ಭೀಮ ಬಾಣ 

* ಅಕಾಲದ, ಆ ಕಾಲದ ಬರುವ ಕಾಲದ, ಇರುವ ಕಾಲದ ಕಾಲ ಕಾಲದ ಕೈದಿ, ಕರುಣಾಳುಗಳ ಬೆವರು, ನಿಟ್ಟುಸಿರಿನ ಘನ ನಿಲವು ಇಕೋ... ಎಂದು ಕೆ.ಬಿ. ಸಿದ್ದಯ್ಯ ಅವರ ರಚನೆಯ ಸಾಲುಗಳು ಮುಂದುವರಿದು....

ನಡುರಂಗದ ಆಳಕ್ಕೆ ಇಳಿದು, ‘ಪಾತಾಳ ಗರಡಿ’ ಇಳಿಬಿಟ್ಟು, ಹುಡುಕು, ತಡಕು, ಕೆದಕು, ಬೆದಕು, ಮಡುಗಟ್ಟಿದ ಜಾತಿದ್ವೇಷ ವಿಷವನೆಲ್ಲ, ಬೊಗಸೆಯಲ್ಲಿ ಮೊಗೆದು ಮೊಗೆದು, ನವದ್ವಾರಗಳಾಚೆಗೆ ವಿಸರ್ಜಿಸುವ ಬಗೆಯ, ಬಗೆದು ಬಗೆದು ತೋರಿಸು, ತೋರು ಬೆರಳೇ ತೋರಿಸು, ನಡುರಂಗ ಜ್ಯೋತಿ ಬೆಳಗಿಸು. –ಹೀಗೆ ಕೊನೆ ಗೊಳ್ಳುವ ಮೂಲಕ ಅಂಬೇಡ್ಕರರ ಕುರಿತು ಹೇಳಿದ್ದಾರೆ.

ADVERTISEMENT

* ವೈಚಾರಿಕ ದೃಷ್ಟಿ, ಸ್ವಾಭಿಮಾನ, ಹೋರಾಟ ಎಂಬ ಪದಗಳ ಅರ್ಥವೇ ವಿವಸ್ತ್ರವಾಗುತ್ತಿರುವ ಈ ದಿನಮಾನಗಳಲ್ಲಿ– ಮತ್ತೆ ಬಾಬಾಸಾಹೇಬರ ನೆನಪು, ಓದು, ಆದಾಗ ಮಾತ್ರವೇ ತೋರು ಬೆರಳ ಸಂಕೇತದ ಮುನ್ನಡೆಯುವ ಶಕ್ತಿ ನಮ್ಮೆಲ್ಲರ ಬೆನ್ನುಹುರಿಯಲ್ಲಿ ಜಾಗೃತಗೊಳ್ಳುತ್ತದೆ ಎಂದಿದ್ದಾರೆ ಸತ್ಯಮಂಗಲ ಮಹದೇವ ಅವರು.

* ಅಂಬೇಡ್ಕರ್ ನನ್ನ ಭಾವ ಮತ್ತು ಭವ ಕೋಶವನ್ನು ಪ್ರವೇಶಿಸಿದ್ದು ಶಾಲೆಯ ಇತಿಹಾಸದ ಪುಸ್ತಕಗಳ ಮೂಲಕವೇ. ಆ ದಿನಗಳಲ್ಲೇ ನಾನು ದೂರದರ್ಶನದಲ್ಲಿ ನೋಡಿದ ಅಂಬೇಡ್ಕರರ ಜೀವನಗಾಥೆಯು ನನ್ನನ್ನು ಬಹುವಾಗಿ ಕಾಡಿದೆ. ಶಾಲೆಯಲ್ಲಿ ಸವರ್ಣೀಯರಿಂದ ನೀರನ್ನು ಮೇಲಿನಿಂದ ಹನಿಸಿಕೊಂಡು ಬೊಗಸೆಯೊಡ್ಡಿ ಕುಡಿಯುವ ಅಂಬೇಡ್ಕರ್, ಗಾಡಿಯಿಂದ ಕೆಳಗೆ ದಬ್ಬಿಸಿಕೊಂಡ ಅಂಬೇಡ್ಕರ್, ಬೀದಿ ದೀಪಗಳಲ್ಲಿ ಕುಳಿತು ಓದುತ್ತಿರುವ ಅಂಬೇಡ್ಕರ್– ಈ ತುಣುಕು ತುಣುಕು ಚಿತ್ರಗಳು ಮನಸ್ಸಿನಲ್ಲಿ ಉಳಿದುಬಿಟ್ಟಿವೆ ಎಂಬ ಆಶಯಗಳೊಂದಿಗೆ ಮೌನೇಶ್ ಬಡಿಗೇರ್ ಅವರು ಸಮಾಜ ಭೈರವ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ.  

* ಇತಿಹಾಸದಲ್ಲಿ ಬರುವ ಅನೇಕ ವ್ಯಕ್ತಿಗಳು ಬರೀ ಪರೀಕ್ಷಾ ದೃಷ್ಟಿಯಿಂದ ನೆನಪಾದರೆ, ಕೆಲವರು ಮಾತ್ರ ತಮ್ಮ ಬದುಕು ಮತ್ತು ನಡತೆಯಿಂದಾಗಿ ನಮ್ಮ ಆಲೊಚನಾ ಕ್ರಮವನ್ನೇ ಬದಲಿಸಿ, ಅದರಾಚೆಗೂ ಕಾಡುತ್ತಾರೆ. ಅಂಥವರಲ್ಲಿ ಅಂಬೇಡ್ಕರ್ ಒಬ್ಬರು ಎಂದು ಸ್ಮಿತಾ ಮಾಕಳ್ಳಿ ಅವರು‌ ಚಿರಂಜೀವಿ ಅಂಬೇಡ್ಕರ್ ನಲ್ಲಿ ಹೇಳಿದ್ದಾರೆ.

* ಅಂಬೇಡ್ಕರ್ ಎಂಬ ಈ ಮಹಾನದಿಗೆ ಭಾರತದ ಊರು ಕೇರಿಗಳ ಬೀದಿ ಬೀದಿಗಳಿಗೂ ಮನೆ ಮನೆಗಳಿಗೂ ಸಂಬಂಧವಿದೆ. ಸಂವಿಧಾನ ಎಂಬ ಕಾಲುವೆಯ ಮೂಲಕ ಈ ನದಿಯು ಸದಾ ಹರಿಯುತ್ತಲೇ ಇದೆ. ಯಾವ ನದಿಯೂ ನೀರನ್ನು ನಿರಾಕರಿಸುವುದಿಲ್ಲ, ತಾರತಮ್ಯ ಮಾಡುವುದಿಲ್ಲ. ಹಾಗೆಯೇ ಈ ನದಿಯೂ ಕೂಡ ಯಾರ ಆತ್ಮಗೌರವಕ್ಕೂ ಧಕ್ಕೆಯಾಗದಂತೆ ಕಾಯುತ್ತಲೇ ಇದೆ. ಅಂಬೇಡ್ಕರ್ ಎಂಬ ನದಿಯು ಯಾರ ಜಾತಿಯ ಶ್ರೇಷ್ಟತೆಯನ್ನೂ ಎತ್ತಿ ಹಿಡಿದಿಲ್ಲ ಹಾಗೆಯೇ ಯಾವ ಕೀಳು ಜಾತಿಗಳನ್ನು ಕೀಳೆಂದು ಕಡೆಗಣಿಸಿಲ್ಲ ಎಂಬುದನ್ನು ಡಾ. ಮೊಗಳ್ಳಿ ಗಣೇಶ್ ಅವರು ತಮ್ಮ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ.

* ಇತಿಹಾಸದಲ್ಲಿ ಕಲಾವಿದ ರಾಜಕೀಯ ರಂಗಭೂಮಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಣಿಸಿಕೊಂಡಿದ್ದಾನೆ. ಆದರೆ ಅವನು ಥೇಟ್ ರಾಜಕಾರಣಿಗಳಂತೆ ಬದುಕುವ ಸ್ಥಿತಿಗೆ ಬಿದ್ದರೆ ಅವನಲ್ಲಿರುವ ಕಲಾವಿದ ಓಡಿಹೋಗುತ್ತಾನೆ. ನನ್ನ ದಟ್ಟ ಅನುಭವಗಳು ನಾನು ದಲಿತ ಸಂಘಟನೆಗಳ ಮೂಲಕ ಕಲಿತ ಪಾಠಗಳು ರಂಗಭೂಮಿಯ ಆತ್ಮದೀವಿಗೆ ಹಿಡಿಯಲು ಸಹಾಯ ಮಾಡಿವೆ. ಆಗ ನಾನು ಪರಿಭಾವಿಸಿಕೊಂಡಿದ್ದ ಅಂಬೇಡ್ಕರರ ದಿಟ್ಟ ಪ್ರತಿಮೆ ಇಂದು ನನ್ನೊಳಗೆ ಜೀವಂತಗೊಂಡು ಜಗತ್ತಿನೊಂದಿಗೆ ಮಾತಾಡತೊಡಗಿದೆ ಎಂದು ಡಾ. ಗಣೇಶ ಎಂ. ಹೆಗ್ಗೋಡು ಅವರು ಅಂಬೇಡ್ಕರ್‌ ಅವರನ್ನು ಕಂಡುಕೊಂಡ ಬಗೆ ಇದು.

* ಚಾರಿತ್ರಿಕವಾಗಿ ಅಂಬೇಡ್ಕರ್ ಸಂಶೋಧನೆ ಮತ್ತು ಚಿಂತನೆಗಳು ರೂಪುತಳೆದಿದ್ದೇ ಕಡುವಿರೋಧದ ನಡುವೆ. ಹೀಗಾಗಿ ಅವರನ್ನು ಅವರ ಕಾಲದಲ್ಲಿ ಕಟುವಾಗಿ ನಿರಾಕರಿಸುವವರಿದ್ದರು. ಅವರನ್ನು ‘ಹುಸಿದೈವ’ವೆಂದು ಕರೆಯುವವರು ಈಗಲೂ ಇದ್ದಾರೆ. ಆದರೆ ಅಂಬೇಡ್ಕರ್ ಸಂಶೋಧನೆ ಮತ್ತು ಚಿಂತನೆಗಳಿಗೆ ವಾಗ್ವಾದಕ್ಕೆ ಒಳಪಡಿಸುವ ಮುಖಾಮುಖಿಗಿಂತ ಬದಿಗೆ ಸರಿಸುವ ಮೂಲಕ ಅದರ ಮಹತ್ವವನ್ನು ಮಂಕುಗೊಳಿಸುವ ರಾಜಕಾರಣ ಮಾತ್ರ ಇದಕ್ಕಿಂತ ಕೆಟ್ಟದ್ದು; ಎಂದರೆ ಅಂಬೇಡ್ಕರ್‌ ಅವರ ಸಂಶೋಧನೆ ಮತ್ತು ಚಿಂತನೆಗಳನ್ನು ಗಂಭೀರ ವಾಗ್ವಾದಕ್ಕೆ ಒಳಪಡಿಸುವ ಬದಲು ಅವನ್ನು ಬದಿಗೆ ಸರಿಸುವ ರಾಜಕಾರಣ ಮಾಡುವುದು ಎಂಬ ವಿಷಯದೊಂದಿಗೆ ರಹಮತ್ ತರೀಕೆರೆ ಅವರು ಚಿಂತನೆ ನಡೆಸಿದ್ದಾರೆ.

* ಭಾರತ ಸ್ವತಂತ್ರವಾದ ತರುವಾಯ ಸಂವಿಧಾನದಡಿಯಲ್ಲಿ ಅಖಂಡ ರಾಷ್ಟ್ರವಾದ ಭಾರತದ ಎಲ್ಲ ಸಾಮಾಜಿಕ ನೀತಿ ನಿರೂಪಣೆಗಳು ಅಂಬೇಡ್ಕರ್ ಪ್ರಣೀತ ಸಾಮಾಜಿಕ ಚಿಂತನೆಯ ಕುಲುಮೆಯಲ್ಲಿಯೇ ಅರಳಿವೆ.

ಬಾಬಾ ಸಾಹೇಬರವರ ವ್ಯಕ್ತಿತ್ವದ ಬಗೆಗಿನ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಅವರ ನಿರಂತರ ಅಧ್ಯಯನಶೀಲ ಮನಸ್ಸು, ಪ್ರಖರವಾದ ಪಾಂಡಿತ್ಯ ಮತ್ತು ಅದ್ಭುತ ಎನ್ನಬಹುದಾದ ವಿಶ್ಲೇಷಣಾ ಸಾಮರ್ಥ್ಯ. ‘ಜಾತಿ ವಿನಾಶ’ ಮತ್ತು ‘ಶೂದ್ರರು ಯಾರು?’ ಎಂಬ ಶ್ರೇಷ್ಠ ಕೃತಿಗಳ ಕರ್ತೃವಾಗಿ ದಮನಿತ ವರ್ಗಗಳಿಗೆ ಒಂದು ಘನತೆಯ ಚರಿತ್ರೆಯಿರುವುದನ್ನು ಅವರು ಅನಾವರಣಗೊಳಿಸಿದರು. ಶ್ರೇಷ್ಠವಾದ ಬದುಕು ಬಾಳುತಿದ್ದ ಮೂಲ ನಿವಾಸಿಗಳು ಕನಿಷ್ಠ ಜನರಾಗಿ ಪರಿವರ್ತನೆಗೊಂಡ ಐತಿಹಾಸಿಕ ಅನ್ಯಾಯಗಳನ್ನು ಅವರಷ್ಟು ಅಧ್ಯಯನ ಪೂರ್ಣವಾಗಿ ಬಿಡಿಸಿದವರು ವಿರಳ ಎಂಬ ಸಂಗತಿಗಳನ್ನು ಡಾ. ಕೆ. ಪುಟ್ಟಸ್ವಾಮಿ ತೆರೆದಿಟ್ಟಿದ್ದಾರೆ.

* ನನ್ನೊಳಗಿನ ಅಂಬೇಡ್ಕರ್ ಎನ್ನುವ ಶಿಕ್ಷಣ ಕ್ರಮದ ಪಠ್ಯವನ್ನು ಪರಿಷ್ಕರಿಸಿಕೊಂಡು ಈ ಕಾಲದ ನನ್ನ ಪಾತ್ರಗಳ ನೋವುಗಳಿಗೆ ಸ್ಪಂದಿಸುವಂತಾಗಬೇಕು.

ಸದಾ ನಾನು ನನ್ನೊಳಗೆ ಹೇಳಿಕೊಳ್ಳುವ ಬಗೆ...
ಅಂಬೇಡ್ಕರ್. ಅದೊಂದು,
ಸನ್ಮಾರ್ಗದ ಸರಿದಾರಿ
ಸ್ವಾತಂತ್ರ್ಯದ ಹೆದ್ದಾರಿ
ಸಮಾನತೆಯ ಮಹಾಸಾಗರ
ಅಸಮಾನತೆ ಗೆದ್ದ ಆಕ್ರೋಶ
– ಎನ್ನುವ ಮೂಲಕ ಸಂತೋಷ ಗುಡ್ಡಿಯಂಗಡಿ ಅವರು ಬದುಕು ರೂಪಗೊಂಡ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ.

* ನಾಗರೀಕತೆಯನ್ನು ಆವರಿಸಿರುವ ಶ್ರೇಣೀಕೃತ ವ್ಯವಸ್ಥೆಯನ್ನು ಪ್ರಶ್ನಿಸಿ, ಸಮಾಜವು ಹೇಗೆ ವರ್ಗ ಸಂಘರ್ಷದ ಆಧಾರದ ಮೇಲೆ ಸ್ಥಾಪಿತವಾಗಿದೆ ಎಂಬುದನ್ನು ತಮ್ಮ ಕೃತಿಗಳಲ್ಲಿ ಅವರು ನಿಚ್ಚಳವಾಗಿ ನಿರೂಪಿಸಿದ್ದಾರೆ. ಇಂದಿನ ರಾಜಕೀಯ ಹಾಗೂ ಇತಿಹಾಸ ತಜ್ಞರು ಭಾರತೀಯ ಇತಿಹಾಸ ರಚನೆಗೆ ಐರೋಪ್ಯ ಮಾದರಿಯನ್ನು ತಿರಸ್ಕರಿಸುವ ಬಗ್ಗೆ ಯೋಚಿಸುತ್ತಿರುವಲ್ಲಿ ಅಂಬೇಡ್ಕರ್ ಅವರು ಈ ಮಾರ್ಗಕ್ಕೆ ಈ ಮೊದಲೇ ತಮ್ಮ ಕೃತಿಗಳಲ್ಲಿ ಸ್ಪಷ್ಟವಾದ ಬುನಾದಿಯನ್ನು ಒದಗಿಸಿದ್ದಾರೆನಿಸುತ್ತದೆ ಎಂಬುದನ್ನು ಕೆ. ಅರವಿಂದ ಮಿತ್ರ ಅವರು ತಮ್ಮದೇ ಮಾತುಗಳಲ್ಲಿ ಹೇಳಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.