ADVERTISEMENT

ಭಾಷಾ ಮಾಧ್ಯಮ ‘ಸುಪ್ರೀಂ’ ಮೆಟ್ಟಿಲೇರಿದ್ದು ಹೀಗೆ

​ಪ್ರಜಾವಾಣಿ ವಾರ್ತೆ
Published 6 ಮೇ 2014, 19:30 IST
Last Updated 6 ಮೇ 2014, 19:30 IST

ಬೆಂಗಳೂರು: ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಇರಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿದ್ದು ಹೀಗೆ...

* 1989 ಜೂನ್‌ 19: ಒಂದರಿಂದ ನಾಲ್ಕನೆಯ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶ.

* 1989 ಜೂನ್‌ 22: ಆದೇಶದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ತಂದ ಸರ್ಕಾರ. ‘ಸಾಮಾನ್ಯ ಸಂದರ್ಭಗಳಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ ಆಗಿರಬೇಕು ಎಂದು ನಾವು ಅಪೇಕ್ಷಿಸುತ್ತೇವೆ’ ಎಂದು ಸರ್ಕಾರದ ಹೇಳಿಕೆ.

* 1993 ಡಿಸೆಂಬರ್‌ 8: ಸರ್ಕಾರದ ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ, ಈ ಆದೇಶ ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ ಎಂದು ಹೇಳಿತು.

* 1994 ಏಪ್ರಿಲ್‌ 29: ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ­ದಂತೆ ತಾನು ನೀಡಿದ ಹಿಂದಿನ ಆದೇಶಗಳನ್ನು ರದ್ದುಪಡಿಸಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿತು. ‘ರಾಜ್ಯ ಸರ್ಕಾ­ರ­ದಿಂದ ಮಾನ್ಯತೆ ಪಡೆದಿರುವ ಎಲ್ಲ ಶಾಲೆಗಳು 1994 –95ನೇ ಶೈಕ್ಷಣಿಕ ವರ್ಷದಿಂದ ಒಂದರಿಂದ ನಾಲ್ಕನೆಯ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು’ ಎಂದು ಆದೇಶಿಸಲಾಯಿತು.

* ಮಾತೃಭಾಷೆ ಇಂಗ್ಲಿಷ್‌ ಆಗಿರುವ ವಿದ್ಯಾರ್ಥಿಗಳು ಒಂದನೆಯ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿತು. ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ 1994 ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

* 2008 ಜುಲೈ 2: ಸರ್ಕಾರಿ ಶಾಲೆಗಳು ಮತ್ತು  ಅನುದಾನಿತ ಶಾಲೆಗಳಲ್ಲಿ ಒಂದರಿಂದ ನಾಲ್ಕನೆಯ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬ ನಿಯಮ ತಪ್ಪಲ್ಲ. ಆದರೆ ಇತರ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಪಡೆಯಬೇಕು ಎಂಬ ನಿಯಮ ಸಂವಿಧಾನದ ಉಲ್ಲಂಘನೆ ಎಂದು ರಾಜ್ಯ ಹೈಕೋರ್ಟ್‌ ಪೂರ್ಣಪೀಠ ಆದೇಶಿಸಿತು.

* 2009 ಜುಲೈ 3: ಪೂರ್ಣಪೀಠ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸುವಂತೆ ಹೈಕೋರ್ಟ್‌ನ ವಿಭಾಗೀಯ ಪೀಠ ಸರ್ಕಾರಕ್ಕೆ ಆದೇಶಿಸಿತು.

* ಪೂರ್ಣಪೀಠ ನೀಡಿದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.

* 2013 ಜುಲೈ 5: ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ, ‘ಪಂಚ ಪ್ರಶ್ನೆ’ಗಳಿಗೆ ಉತ್ತರ ಕಂಡುಕೊಳ್ಳುವಂತೆ ಸೂಚಿಸಿ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತು.
.....

‘ರಾಜ್ಯ ಸರ್ಕಾರ ಇನ್ನಾದರೂ ಸುಮ್ಮನಿರಲಿ’
ಸಾಂವಿಧಾನಿಕ ಪೀಠದ ತೀರ್ಪು ಸ್ವಾಗತಾರ್ಹ. ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಎಲ್ಲ ಬಗೆಯ ಕಿರುಕುಳಗಳಿಗೆ ಈ ತೀರ್ಪು ಅಂತ್ಯ ಹಾಡಲಿದೆ.

ಭಾಷಾ ಮಾಧ್ಯಮ ಕುರಿತ ನೀತಿಯನ್ನು ಸಮರ್ಥಿಸಿ­ಕೊಳ್ಳು­ವಲ್ಲಿ ರಾಜ್ಯ ಸರ್ಕಾರ ತನ್ನಿಂದಾದ ಎಲ್ಲ ಪ್ರಯತ್ನ ನಡೆ­ಸಿತ್ತು. ಭಾಷಾ ಮಾಧ್ಯಮ ನೀತಿಯನ್ನು ಪುನಃ ಹೇರಲು ಹೊಸ ಹಾದಿಗಳನ್ನು ಹುಡುಕುವ ಬದಲು ಸರ್ಕಾರ ಇನ್ನು ಮುಂದೆ ಸುಮ್ಮನಿರುವುದು ಒಳಿತು. ಸಾಂವಿಧಾನಿಕ ಪೀಠ ಅನೂ­ರ್ಜಿತಗೊಳಿಸಿರುವ ಭಾಷಾ ನೀತಿಗೆ ಮತ್ತೆ ಜೀವ ನೀಡಲು ಸರ್ಕಾರ ಯಾವ ಪ್ರಯತ್ನ ನಡೆಸಿದರೂ ಫಲವಿಲ್ಲ.
ಹಾಗೆ ನೋಡಿದರೆ, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಕನ್ನಡ ಭಾಷೆಗೆ ಆಗಿರುವ ಹಿನ್ನಡೆ ಅಲ್ಲ. ರಾಜ್ಯ­ದಲ್ಲಿ­ರುವ ಶಾಲೆಗಳ ಪೈಕಿ ಶೇಕಡ 80ರಷ್ಟು ಸರ್ಕಾರದ ಅಧೀನ­ದಲ್ಲಿವೆ. ಶೇ 4ರಷ್ಟು ಶಾಲೆಗಳು ಸರ್ಕಾರದಿಂದ ಅನುದಾನ ಪಡೆಯುತ್ತಿವೆ.

ಅಂದರೆ, ಒಟ್ಟು ಶೇ 84ರಷ್ಟು ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬಹುದು. ಇನ್ನುಳಿದ ಶೇಕಡ 16ರಷ್ಟು ಶಾಲೆಗಳು ಮಾತ್ರ ಭಾಷಾ ನೀತಿಯ ವ್ಯಾಪ್ತಿ­ಯಿಂದ ಹೊರಗಿರುತ್ತವೆ. ದೇಶದ 27 ರಾಜ್ಯಗಳಲ್ಲಿ ಭಾಷಾ ಮಾಧ್ಯಮ ನೀತಿ ಇಲ್ಲ. ಅಲ್ಲೆಲ್ಲ ಯಾವುದೇ ಸಮಸ್ಯೆ ಎದುರಾಗಿಲ್ಲ.

ಪ್ರತಿಯೊಂದು ಸರ್ಕಾರಕ್ಕೂ ತನ್ನದೇ ಆದ ಸಾಂವಿಧಾನಿಕ ಮಿತಿ­ಗಳಿವೆ. ರಾಜ್ಯ ಸರ್ಕಾರ ರೂಪಿಸಿದ್ದ ಭಾಷಾ ನೀತಿ ದೇಶದ ಯಾವುದೇ ನ್ಯಾಯಾಲಯದ ಮಾನ್ಯತೆ ಪಡೆಯು­ವಂಥ­ದ್ದಾಗಿ­ರಲಿಲ್ಲ. ಹಾಗಾಗಿ, ಈ ತೀರ್ಪು ಸರ್ಕಾರದ ವೈಫಲ್ಯ ಎನ್ನುವಂತಿಲ್ಲ. ನಮ್ಮ ಸಂವಿಧಾನವು ಕೊಡಲು ಸಾಧ್ಯವಿಲ್ಲದ ಏನೋ ಒಂದನ್ನು ಸರ್ಕಾರ ಕೇಳುತ್ತಿತ್ತು. ಇದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇನ್ನು ಮುಂದೆ ತಮ್ಮ ಮಾಧ್ಯಮವನ್ನು ಅಳುಕಿಲ್ಲದೆ ಘೋಷಿಸಿಕೊಳ್ಳ­ಬ­ಹುದು. ‘ಕುಸ್ಮಾ‘ ಸಂಸ್ಥಾಪದ ಅಧ್ಯಕ್ಷ ಜಿ.ಎಸ್‌. ಶರ್ಮ ಅವರು ಈಗ ನಮ್ಮೊಂದಿಗೆ ಇದ್ದಿದ್ದರೆ, ಈ ತೀರ್ಪು ಕೇಳಿ ಸಂತ­ಸ­ಪಡುತ್ತಿದ್ದರು. ಭಾಷಾ ಮಾಧ್ಯಮ ನೀತಿಯ ವಿರುದ್ಧ ‘ಕುಸ್ಮಾ’ ನಡೆಸಿದ ಹೋರಾಟದ ಶ್ರೇಯಸ್ಸು ಅವರಿಗೇ ಸಲ್ಲಬೇಕು.
– ಕೆ.ವಿ. ಧನಂಜಯ, ‘ಕುಸ್ಮಾ’ ಪರ ವಕೀಲ

‘ಭಾಷೆಯಾಗಿ ಕನ್ನಡ ಕಲಿಸುತ್ತೇವೆ’
ತಮ್ಮ ಮಗುವಿನ ಶಿಕ್ಷಣದ ಕುರಿತು ಪಾಲಕರೇ ನಿರ್ಧರಿಸಬೇಕು. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡು­ವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಐತಿಹಾಸಿಕ.

ADVERTISEMENT

ಕೋರ್ಟ್‌ ತೀರ್ಪು ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯ­ವಾಗುವುದರಿಂದ ಇನ್ನು ಮುಂದೆ ದೇಶದ ಯಾವುದೇ ರಾಜ್ಯಗಳಲ್ಲಿ ಭಾಷಾ ಮಾಧ್ಯಮದ ಕುರಿತು ಗೊಂದ­ಲವಿರುವುದಿಲ್ಲ. ಕನ್ನಡ ಮಾಧ್ಯಮವಾಗದೆ ಇದ್ದರೂ, ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ­ವಾಗಿ ಕಲಿಸಲಾಗುವುದು.
–ಅಜಿತ ಪ್ರಭು, ಖಜಾಂಚಿ, ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ (ಕುಸ್ಮಾ)

ಮುಂದೇನು ಮಾಡಬಹುದು?

ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡು­ವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಊರ್ಜಿತವಾಗದಂತೆ ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತರಬಹುದು. ಆ ಮೂಲಕ ಮಾತೃಭಾ­ಷೆಯೇ ಪ್ರಾಥಮಿಕ ಶಿಕ್ಷಣದ ಮಾಧ್ಯಮ ಎಂಬ ನಿಯಮ ರೂಪಿಸಬಹುದು.

ಅಥವಾ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವಂತೆ ಮಾಡಬಹುದು. ಅಲ್ಲದೆ, ಸುಪ್ರೀಂ ಕೋರ್ಟ್‌ ಈಗ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಮಾಧ್ಯಮವು ಶೈಕ್ಷಣಿಕ ಗುಣಮಟ್ಟದ ಮೇಲೆ ಯಾವುದೇ ಪರಿಣಾಮ ಬೀರು­­ವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಪುನರ್‌ ಪರಿ­ಶೀಲ­ನೆಗೆ ಯೋಗ್ಯ. ನ್ಯಾಯಾಲಯ ನೀಡಿರುವ ಈ ತೀರ್ಪು ಆಘಾತ ತಂದಿದೆ. ಇದರಿಂದ ದೇಶದ ಯಾವುದೇ ಪ್ರಾದೇಶಿಕ ಭಾಷೆ ಬೆಳವಣಿಗೆ ಕಾಣದು.
– ಪ್ರೊ. ರವಿವರ್ಮ ಕುಮಾರ್‌, ರಾಜ್ಯದ ಅಡ್ವೊಕೇಟ್‌ ಜನರಲ್‌

‘ಕನ್ನಡಕ್ಕೆ ಗಂಡಾಂತರವಿಲ್ಲ’
ಭಾಷಾ ನೀತಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಕನ್ನಡಕ್ಕೆ ಗಂಡಾಂತರವಿಲ್ಲ. ನಮ್ಮ ಶಾಲೆಗಳಲ್ಲಿ ಕನ್ನಡವನ್ನು ಆದ್ಯತೆ ಮೇರೆಗೆ ಕಲಿಸುತ್ತೇವೆ.

ಶಿಕ್ಷಣ ಮಾಧ್ಯಮ ಯಾವುದಿರ­ಬೇಕೆಂಬುದನ್ನು ಪೋಷ­ಕರ ನಿರ್ಧಾ­ರಕ್ಕೆ ಬಿಟ್ಟಿರುವ ಕೋರ್ಟ್‌, ಆ ಮೂಲಕ ಪ್ರಜಾತಾಂತ್ರಿಕ ಮೌಲ್ಯ­ವನ್ನು ಎತ್ತಿ ಹಿಡಿದಿದೆ.
–ಸೂಡಿ ಸುರೇಶ್‌, ಟಿ.ಕೆ.ನರಸೇಗೌಡ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳು

ಶಿಕ್ಷಣ ತಜ್ಞರ ಅಭಿಪ್ರಾಯ
ಸುಪ್ರೀಂಕೋರ್ಟ್‌ ತೀರ್ಪು ಆಘಾತಕಾರಿ. ಕೋರ್ಟ್‌ ಈ ತೀರ್ಪಿನಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಯೋಚಿ­ಸಿಲ್ಲ. ಈ ತೀರ್ಪಿನಿಂದ ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾ­ರೀ­ಕರಣ ಜಾಸ್ತಿ ಆಗಲಿದೆ. ಪೋಷಕರ ಇಂಗ್ಲಿಷ್‌ ವ್ಯಾಮೋಹಕ್ಕೆ ಕಾರಣ ಏನು ಎಂಬ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಸದೆ ಈ ತೀರ್ಪು ನೀಡಲಾಗಿದೆ. ಈ ತೀರ್ಪಿನಿಂದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ಧಕ್ಕೆ ಉಂಟಾಗಲಿದೆ.

–ಡಾ.ವಿ.ಪಿ.ನಿರಂಜನಾರಾಧ್ಯ, ರಾಷ್ಟ್ರೀಯ ಕಾನೂನು ಶಾಲೆ, ಕಾನೂನು ಕೇಂದ್ರದ ಫೆಲೊ

ಕಲಿಕೆ ಮಾಧ್ಯಮವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ­ ಪೋಷಕರಿಗೆ ನೀಡಿರುವುದು ಸರಿಯಲ್ಲ. ಪೋಷಕರಿಗೆ ಮಗು ಚೆನ್ನಾಗಿ ಕಲಿಯಬೇಕು ಎಂಬ ಆಕಾಂಕ್ಷೆ ಇರುತ್ತದೆ. ಆದರೆ, ಬಹುತೇಕ ಪೋಷಕರಿಗೆ ಶಾಲಾ ವ್ಯವಸ್ಥೆಯ ಸಮಗ್ರ ಮಾಹಿತಿ ಇರುವುದಿಲ್ಲ. ಇದಲ್ಲದೆ ಈ ತೀರ್ಪಿನಿಂದ ಕಡ್ಡಾಯ ಶಿಕ್ಷಣ ಕಾಯ್ದೆಯಂತಹ ಸರ್ಕಾರದ ನೀತಿಗಳು  ಬುಡಮೇಲು ಆಗುವ ಸಾಧ್ಯತೆ ಇರುತ್ತದೆ. ಪೋಷಕರ ಆಕಾಂಕ್ಷೆಗೆ ತಕ್ಕಂತೆ ಶಾಲೆ ನಡೆಸಬೇಕಾಗುತ್ತದೆ. ಇದು ಅವಸರದ ತೀರ್ಪು.
–ಡಾ.ಅ.ಶ್ರೀಧರ್‌, ಮನೋವಿಜ್ಞಾನಿ

ದುರದೃಷ್ಟಕರ
‘ಕೋರ್ಟ್‌ ತೀರ್ಪು ದುರ ದೃಷ್ಟಕರ. ಆದರೆ ಇದರಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗ ವಾಗಿದೆ ಎಂದು ಯಾರೂ ಪರಿಗಣಿಸ ಬಾರದು.  ಸರ್ಕಾರದ ಮುಂದೆ ಇನ್ನೂ ಹಲವು ಆಯ್ಕೆ ಗಳಿವೆ. ಸಾಹಿತಿ ಗಳು, ಕನ್ನಡಪರ ಹೋರಾಟ­ಗಾರರು, ಕಾನೂನು ತಜ್ಞರ ಜತೆ  ಸಮಾ­ಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗು­ವುದು. ಈ ತೀರ್ಪು ಜಾರಿಯಾದರೆ ಭಾಷೆಯೇ ನಾಶವಾ­ಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡಲ್ಲ.
– ಕಿಮ್ಮನೆ ರತ್ನಾಕರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ
 

ಎಲ್ಲ ಮಾತೃ ಭಾಷೆ ಹಾಗೂ ರಾಜ್ಯ ಭಾಷೆಗಳಿಗೂ ತೀವ್ರ ಹಿನ್ನೆಡೆಯಾಗಿದೆ.  ಭಾಷಾವಾರು ಪ್ರಾಂತ್ಯ ರಚನೆ ಮತ್ತು ಒಕ್ಕೂಟ ವ್ಯವಸ್ಥೆಯ ಆದರ್ಶಕ್ಕೆ ಕೊಡಲಿ ಏಟು ಹಾಕಿದಂತಾಗಿದೆ. ವ್ಯಕ್ತಿಯ ಹಕ್ಕಿನ ಕಾರಣ ನೀಡಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರಲಾಗಿದೆ. ಇದು ಶಿಕ್ಷಣದ ಪ್ರಶ್ನೆ ಮಾತ್ರವಲ್ಲ. ಪತ್ರಿಕೆ, ದೃಶ್ಯ ಮಾಧ್ಯಮ, ಸಿನಿಮಾ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷಾ ಮಾಧ್ಯಮಗಳೂ ಮೂಲೆಗುಂಪಾಗುವ ಅಪಾಯವಿದೆ.

ಅದಕ್ಕಾಗಿ ಸಂವಿಧಾನ ತಿದ್ದುಪಡಿ ಹಾಗೂ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ರಾಷ್ಟ್ರದಾದ್ಯಂತ ಸಮಾನ ಮನಸ್ಕರ ಸಂಘಟನೆ ಕಟ್ಟಿ ಹೋರಾಡಬೇಕಾಗಿದೆ. 
–  ಪ್ರೊ. ಬರಗೂರು ರಾಮಚಂದ್ರಪ್ಪ, ಸಾಹಿತಿ

ಮಾತೃ ಭಾಷಾ ಮಾಧ್ಯಮ ಆರೋಗ್ಯಕಾರಿ ಹಾಗೂ ಸೃಜನಶೀಲವಾಗಿರುತ್ತದೆ. ಪರಭಾಷಾ ಮಾಧ್ಯಮದ ಮೂಲಕ ಶಿಕ್ಷಣ ನೀಡಿದರೆ ಮಕ್ಕಳ ಪ್ರತಿಭೆ ನಾಶವಾಗುತ್ತದೆ. ಪರಭಾಷೆಯ ಭಯದಿಂದ ಮಕ್ಕಳು ಗಿಳಿಗಳಂತೆ ಆಗುತ್ತಾರೆ. ಅವರಲ್ಲಿ ಸ್ವಂತಿಕೆ ಉಳಿಯುವುದಿಲ್ಲ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್‌ ಅನಿವಾರ್ಯ. ಅದಕ್ಕಾಗಿ ಮಾತೃ ಭಾಷಾ ಮಾಧ್ಯಮದ ಮೂಲಕವೇ ಇಂಗ್ಲಿಷ್‌ ಭಾಷೆಯನ್ನೂ ಚೆನ್ನಾಗಿ ಕಲಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಈ ಸಂಬಂಧ ವ್ಯಾಪಕವಾಗಿ ಚರ್ಚೆ ಮಾಡಿ, ಹೊಸ ಶಾಸನವನ್ನು ಜಾರಿಗೆ ತರಬೇಕು.
–  ಕಾಳೇಗೌಡ ನಾಗವಾರ, ಸಾಹಿತಿ

ಇದು ಒಂದು ವರ್ಗದ ಜನರ ಆಸಕ್ತಿಯನ್ನು ರಕ್ಷಣೆ ಮಾಡಿದಂತೆ ಇದೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ದೇಶದಲ್ಲಿ 1400 ಭಾಷೆಗಳಿದ್ದು, ಎಲ್ಲ ಭಾಷೆಗಳ ಮೂಲಕ ಶಿಕ್ಷಣ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಆಯಾ ರಾಜ್ಯಗಳ ಭಾಷೆಗಳಲ್ಲಿ ಶಿಕ್ಷಣ ನೀಡುವುದು ಉತ್ತಮ ಎಂದು ಭಾಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಆಯಾ ರಾಜ್ಯಗಳು ರಾಜ್ಯ ಭಾಷೆಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರ ಹಿತಕ್ಕಾಗಿ ಪ್ರತಿಯೊಬ್ಬರ ಅಭಿಪ್ರಾಯವನ್ನೂ ತೆಗೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು.  
–  ಡಾ. ಚಂದ್ರಶೇಖರ ಕಂಬಾರ, ಸಾಹಿತಿ

ಇದು ಕನ್ನಡದ ಬುಡಕ್ಕೆ ಹಾಕಿದ ಕೊಡಲಿ ಏಟು. ಇದರಿಂದ ಕನ್ನಡ ಮಾತ್ರವಲ್ಲ ಎಲ್ಲ ಪ್ರಾಂತೀಯ ಭಾಷೆಗಳೂ ಸೊರಗಿ ಸಾಯುವುದು ಖಚಿತ. ಭಾಷೆಯೊಂದಿಗೆ ದೇಶೀಯ ಸಂಸ್ಕೃತಿಗೂ ಚಪ್ಪಡಿ ಎಳೆದಂತಾಗಿದೆ.

ಸುಪ್ರೀಂಕೋರ್ಟಿನ ತೀರ್ಪು ಭಾರತೀಯ ಭಾಷೆಗಳ ಮರಣ ಶಾಸನ. ಒಲೆ ಹತ್ತಿಉರಿದರೆ ನಿಲ್ಲಬಹುದು, ಧರೆ ಹತ್ತಿಉರಿದರೆ ಹೇಗೆ ಬದುಕುವುದು? ಸುಪ್ರೀಂಕೋರ್ಟ್‌ ಕೊಟ್ಟಿರುವುದು ತೀರ್ಪು ಅಲ್ಲ; ಅದು ವಿಷ. ತಾಯ  ಹಾಲೇ ನಂಜಾದರೆ, ಇನ್ನು ಯಾರಿಗೆ ದೂರುವುದು? ನಮ್ಮ ಹೋರಾಟದ ಮುಂದಿನ ಹೆಜ್ಜೆಗಳು ಸಬಲವಾಗಲು ಒಗ್ಗಟ್ಟಿನಿಂದ ಚಿಂತಿಸಬೇಕಾಗಿದೆ.
– ಹಂಪ ನಾಗರಾಜಯ್ಯ

ಶಿಕ್ಷಣದ ಮಾಧ್ಯಮ ಯಾವುದು ಇರಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಗೊಂದಲವನ್ನುಂಟು ಮಾಡಿದೆ. ರಾಜ್ಯದ ಭಾಷೆಯೇ ಮಾತೃಭಾಷೆಗೆ ಸಮೀಪವಾದುದು. ಆದರೆ, ಇಂಗ್ಲಿಷ್‌ ಒಂದು ಭಾಷೆಯಾಗಿ ನಮಗೆ ಬೇಕೇ ಹೊರತು ನಮ್ಮ ಶಿಕ್ಷಣದ ಮಾಧ್ಯಮವಾಗಬಾರದು. ಇದು ಕನ್ನಡಿಗರ ಪಾಲಿಗೆ ಪರೀಕ್ಷಾ ಕಾಲ. ಇದಕ್ಕೆ ಪರಿಹಾರ ಇದೆ.
–ಪಾಟೀಲ ಪುಟ್ಟಪ್ಪ, ಪತ್ರಕರ್ತ

ಭಾಷಾ ನೀತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುನಿಂದ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಿಗೂ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ಮಾತೃ ಭಾಷಾ ಮಾಧ್ಯಮದ ಬದಲು ರಾಜ್ಯ ಭಾಷಾ ಮಾಧ್ಯಮ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ನ್ಯಾಯಾಲಯದ ತೀರ್ಪು ಬೇರೆ ರೀತಿಯೇ ಇರುತ್ತಿತ್ತು.

ಆದರೆ ಈ ತೀರ್ಪಿನಿಂದ ಧೃತಿಗೆಡುವ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಭಾಷೆಯನ್ನು ಶಿಕ್ಷಣದಲ್ಲಿ ಉಳಿಸಿಕೊಳ್ಳುವಂತೆ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಯಾವ ರಾಜ್ಯ ಭಾಷೆಗಳೂ ಶಿಕ್ಷಣದಲ್ಲಿ ಉಳಿಯುವುದಿಲ್ಲ.   
– ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ಭಾಷಾ ನೀತಿಗಾಗಿ ಸಂಸತ್‌ ಸೂಕ್ತ ಕಾನೂನು ತಿದ್ದುಪಡಿ ತರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು.
ನ್ಯಾಯಾಲಯದ ತೀರ್ಪು ದುರದೃಷ್ಟಕರ. ಇದು ಕನ್ನಡ ಭಾಷೆಗೆ ಮರಣ ಶಾಸನವಾಗಲಿದೆ. ಭಾಷಾವಾರು ಪ್ರಾಂತ್ಯಗಳ ರಚನೆ, ಒಕ್ಕೂಟ ವ್ಯವಸ್ಥೆಯನ್ನು ನ್ಯಾಯಾಲಯ ಪರಿಗಣಿಸಿದಂತಿಲ್ಲ. ತೀರ್ಪು ಮರುಶೀಲನೆ ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು.
– ಡಾ.ಸಿದ್ದಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ತೀರ್ಪಿನ ಪ್ರತಿ ಸರ್ಕಾರದ ಕೈಸೇರಿದ ನಂತರ ಪ್ರತಿಕ್ರಿಯೆ ನೀಡಲಾ ಗುವುದು. ಮುಂದೇನು ಮಾಡ ಬೇಕು ಎಂಬುದರ ಬಗ್ಗೆ ಚರ್ಚಿಸ ಲಾಗುವುದು
– ಸಿದ್ದರಾಮಯ್ಯ, ಮುಖ್ಯಮಂತ್ರಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.