ಶಿವಮೊಗ್ಗ:ಮಂಡಗದ್ದೆ ಅರಣ್ಯ ವ್ಯಾಪ್ತಿಯ ತಳಲೆ ಬಾವಿಗದ್ದೆಯ ಹರಿಯಪ್ಪ ನಾಯಕ, ಶೇಡಗಾರ್ ಸುರೇಶ್, 17ನೇ ಮೈಲುಕಲ್ಲಿನ ರವಿ ಎರಡು ತಿಂಗಳಿನಿಂದ ಬೆಂಗಳೂರಿನ ಭೂ ಕಬಳಿಕೆ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.
ಈ ಮೂವರೂ ತಲಾ 10ರಿಂದ 20 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಎಕರೆ ಖರೀದಿಸಬಹುದಾದಷ್ಟು ದುಡ್ಡು ಅಲೆದಾಟಕ್ಕೆ ವೆಚ್ಚ ಮಾಡುತ್ತಿದ್ದಾರೆ.
ಅವಿಭಕ್ತ ಕುಟುಂಬದ ವಿಭಾಗವಾದ ನಂತರ ಪಿತ್ರಾರ್ಜಿತವಾಗಿ ಬಂದ ಒಂದು ಎಕರೆ ಜಮೀನಿನಲ್ಲಿ ಬದುಕು ನಡೆಸಲು ಸಾಧ್ಯವಾಗದೇ ಮಗ್ಗುಲಲ್ಲೇ ಇದ್ದ 25 ಗುಂಟೆ ಸಮತಟ್ಟು ಮಾಡಿಕೊಂಡು ಕೋಳಿಫಾರಂ ಹಾಕಿಕೊಂಡಿದ್ದ ಬಂಗಡಗಲ್ಲು ಯೋಗೀಶ್ ಭೂಕಬಳಿಕೆ ನ್ಯಾಯಾಲಯಕ್ಕೆ ವಕಾಲತ್ತು ಹಾಕಲು ವಕೀಲರು ಕೇಳಿದ ₹ 25 ಸಾವಿರ ಶುಲ್ಕ ಭರಿಸಲು ಸಾಧ್ಯವಾಗದೇ ಭೂಮಿ ಬಿಟ್ಟುಕೊಡುವ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
* ಇದನ್ನೂ ಓದಿ:ಭೂಗಳ್ಳರಿಗೆ ಫಸಲು!
280 ಕುಟುಂಬಗಳು, 640 ಜನ ಸಂಖ್ಯೆ ಇರುವ ತೀರ್ಥಹಳ್ಳಿ ತಾಲ್ಲೂಕಿನ ಚಕ್ಕೋಡಿ ಬೈಲು ಗ್ರಾಮ ಜಂಟಿ ಸರ್ವೆಯ ಪ್ರಕಾರ ಸಂಪೂರ್ಣ ಅರಣ್ಯಭೂಮಿ. ಅಲ್ಲಿನ ಮನೆಗಳು, ಶಾಲೆ, ದೇವಸ್ಥಾನ, ಬಾವಿ, ಕೆರೆಕಟ್ಟೆ ಎಲ್ಲವೂ ಒತ್ತುವರಿಯಾದಂಥವೇ.
–ಇದು ಮಲೆನಾಡಿನಲ್ಲಿ ಭೂ ಕಬಳಿಕೆ ಆರೋಪ ದಾಖಲಾದ ಪ್ರಕರಣಗಳ ಕೆಲವು ಉದಾಹರಣೆಗಳು.
ಮಲೆನಾಡಿನ ಭೂ ಒತ್ತುವರಿ ಸ್ವರೂಪ ಇತರೆ ಭಾಗಗಳಿಗಿಂತ ಸಾಕಷ್ಟು ಭಿನ್ನ. ದಟ್ಟ ಕಾನನದ ಮಧ್ಯೆ ಅನಾದಿಕಾಲದಿಂದಲೂ ಬದುಕು ಕಟ್ಟಿಕೊಂಡಿದ್ದ ಅವಿಭಕ್ತ ಕುಟುಂಬಗಳ ಅವನತಿ, ಮೂರು ದಶಕಗಳಲ್ಲಿ ದುಪ್ಪಟ್ಟಾದ ಜನಸಂಖ್ಯೆ, ಐದಾರು ಜಲಾಶಯಗಳ ನಿರ್ಮಾಣದ ಪರಿಣಾಮ ನೆಲೆ ಕಳೆದುಕೊಂಡ ಸಾವಿರಾರು ಕುಟುಂಬಗಳು ಇಲ್ಲಿವೆ. ಇವಲ್ಲದೆ ಕಾಡಿನ ಉತ್ಪನ್ನಗಳಿಂದ ನಡೆಯುತ್ತಿದ್ದ ಜೀವನ ಸಂಪೂರ್ಣ ಕೃಷಿಯತ್ತ, ವಾಣಿಜ್ಯ ಬೆಳೆಗಳತ್ತ ಹೊರಳಿರುವುದು ಅರಣ್ಯ ಭೂಮಿ ಒತ್ತುವರಿಗೆ ಸಿಗುವ ಪ್ರಮುಖ ಕಾರಣ.
ಅರ್ಜಿ ಕೊಟ್ಟು ಸಂಕಷ್ಟಕ್ಕೆ ಸಿಲುಕಿದರು: ಮಲೆನಾಡಿನಲ್ಲಿ ಇರುವ ಪ್ರಮುಖ ಸಮಸ್ಯೆ ಕಂದಾಯ ಹಾಗೂ ಅರಣ್ಯಭೂಮಿ ಗುರುತಿಸುವಿಕೆ. ತಾವು ಸಾಗುವಳಿ ಮಾಡಿದ ಭೂಮಿ ಕಂದಾಯ ವ್ಯಾಪ್ತಿಯಲ್ಲಿದೆ ಎಂದು ಅಕ್ರಮ ಸಕ್ರಮಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ 50 ಹಾಗೂ 53ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಕಂದಾಯ ಇಲಾಖೆ ಒಪ್ಪಿಗೆಗಾಗಿ ಅರಣ್ಯಾಧಿಕಾರಿಗಳಿಗೆ ಕಳುಹಿಸಿತ್ತು. 1,45,601 ರೈತರು ಸಲ್ಲಿಸಿದ್ದ ಅರ್ಜಿಗಳಲ್ಲಿ 18,383 ಅನ್ನು ಇತ್ಯರ್ಥ ಮಾಡಿ, ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹೀಗೆ ತಿರಸ್ಕೃತ ಅರ್ಜಿಗಳ ಮೇಲೂ ಒತ್ತುವರಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ.
* ಇದನ್ನೂ ಓದಿ:ಬಡವರ ಮೇಲಷ್ಟೇ ಒತ್ತುವರಿ ಪ್ರಹಾರ
ಆದೇಶ ಪಾಲಿಸದ ಅಧಿಕಾರಿಗಳು: 3 ಎಕರೆ ಒಳಗೆ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದ್ದರೂ ದಾಖಲಾದ ಬಹುತೇಕ ಪ್ರಕರಣಗಳು 3 ಎಕರೆಗಿಂತ ಕಡಿಮೆ ವಿಸ್ತೀರ್ಣ ಹೊಂದಿವೆ. ಪಟ್ಟಭದ್ರರು, ರಾಜಕೀಯ ಪ್ರಭಾವಿಗಳು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದರೂ ಅಂಥವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
‘ಕಾಡು ಮಲೆನಾಡಿನ ಜೀವನ ಸಂಸ್ಕೃತಿ. ಹಿಂದೆ ಜನರೇ ಅರಣ್ಯ ಸಂರಕ್ಷಣೆ ಮಾಡುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಭೂಮಿಯ ಅವಶ್ಯ ಇದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 25 ವರ್ಷಗಳಿಂದ ಒಂದೂ ನಿವೇಶನ ನೀಡಿಲ್ಲ. ಜನರು ಎಲ್ಲಿ ಮನೆಕಟ್ಟಿಕೊಳ್ಳಬೇಕು? ಅರ್ಹರಿಗೆ ಸರ್ಕಾರವೇ ಭೂಮಿ ನೀಡಬೇಕು. ನೀಡಿದ ಭೂಮಿಯಲ್ಲಿ ಇಂತಿಷ್ಟು ಅರಣ್ಯ ಇರುವುದು ಕಡ್ಡಾಯಗೊಳಿಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗ ಮಾತ್ರ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎನ್ನುತ್ತಾರೆ ಮೇಗರವಳ್ಳಿಯ ರಾಘವೇಂದ್ರ.
ಮಲೆನಾಡಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಸ್ವರೂಪ ಭಿನ್ನವಾಗಿದೆ. ಒತ್ತುವರಿಯಾಗಿರುವ ಜಮೀನಿನ ಪ್ರಮಾಣವೂ ಕಡಿಮೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸೇರಿದ ಒಟ್ಟು 15ಸಾವಿರ ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. 2ಸಾವಿರ ಎಕರೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವು ಮಾಡಲಾಗಿದೆ.ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ10 ಮಂದಿಯ ವಿರುದ್ಧ ಬೆಂಗಳೂರಿನ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್ ವಿರುದ್ಧವೂ ಮೊಕದ್ದಮೆ
ರಾಜ್ಯ ಮೀಸಲು ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿದ ಆರೋಪದ ಮೇಲೆ ಭದ್ರಾವತಿ ತಹಶೀಲ್ದಾರ್ ಎಂ.ಆರ್. ನಾಗರಾಜ್ ಮತ್ತು ಸರ್ವೆ ಸಿಬ್ಬಂದಿ ಜೆ. ಮನ್ಮಥ್ ಅವರ ವಿರುದ್ಧವೂ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಐದು ಪ್ರಕರಣಗಳು ದಾಖಲಾಗಿವೆ.
ದಾಖಲಾದ ಅರಣ್ಯ ಪ್ರಕರಣಗಳು
ಭದ್ರಾವತಿ ವಿಭಾಗ 405
ಸಾಗರ ವಿಭಾಗ 361
ಶಿವಮೊಗ್ಗ ವಿಭಾಗ 284
ವನ್ಯಜೀವಿ ವಿಭಾಗ 01
ಒಟ್ಟು 1051
ದಾಖಲಾದ ಕಂದಾಯ ಪ್ರಕರಣಗಳು
ಸಾಗರ 31
ಶಿಕಾರಿಪುರ 22
ಹೊಸನಗರ 10
ಸೊರಬ 3
ಶಿವಮೊಗ್ಗ 1
ತೀರ್ಥಹಳ್ಳಿ 1
ಒಟ್ಟು 68
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.