ಮೈಸೂರು: ‘ಮಠಗಳು ಜಾತಿ-ಮತ ವ್ಯವಸ್ಥೆಯನ್ನು ಪೋಷಿಸುವ ನರ್ಸರಿಗಳಂತೆ ಕೆಲಸ ನಿರ್ವಹಿಸುತ್ತಿವೆ. ಮತಧರ್ಮಗಳ ಆಧಾರದಲ್ಲಿ ಸಮಾಜವನ್ನು ಹೋಳು ಮಾಡಿ, ಸಂವಿಧಾನದ ಮೂಲ ಆಶಯಕ್ಕೆ ಸವಾಲೊಡ್ಡುತ್ತಿವೆ’ ಎಂದು ಹಿರಿಯ ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಆರೋಪಿಸಿದರು.
‘ಮಡೆಸ್ನಾನ– ಪಂಕ್ತಿಭೇದ, ಮಠಮಾನ್ಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಸಾರ್ವಜನಿಕ ಉತ್ತರದಾಯಿತ್ವ’ ಕುರಿತು ನಗರದ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಡೆಸ್ನಾನ, ಎಡೆಸ್ನಾನ, ಪಂಕ್ತಿಭೇದ ಮುಂತಾದ ಮೌಢ್ಯಾಚರಣೆಗಳ ಮೂಲಕ ಸಂವಿಧಾನದ ಸಮಾನತೆ ಮೌಲ್ಯಕ್ಕೆ ಅವಮಾನ ಮಾಡಲಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮೌಢ್ಯಗಳನ್ನು ಸಮರ್ಥಿಸುವುದು ಸರಿಯಲ್ಲ’ ಎಂದು ಹೇಳಿದರು.
‘ಮೌಢ್ಯ ಪ್ರತಿಬಂಧಕ ಕಾಯ್ದೆ ಮತ್ತು ಮಠಗಳಿಗೆ ಆಡಳಿತಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರಂಭದಲ್ಲಿ ನಿಲುವು ತೆಗೆದುಕೊಂಡಿತು. ಆದರೆ, ಕೆಲ ಶಕ್ತಿಗಳ ಒತ್ತಡಕ್ಕೆ ಸಿಲುಕಿ, ಇದೀಗ ಆರಂಭದ ಪೌರುಷ ಕಾಣುತ್ತಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ತಾಕತ್ತಿಲ್ಲವೇ?’ ಎಂದು ಪ್ರಶ್ನಿಸಿದರು.
‘ಗಾಂಧೀಜಿ ಹತ್ಯೆ ಮಾಡಿದ ವ್ಯಕ್ತಿಗೆ ದೇವರ ಸ್ಥಾನ ನೀಡುತ್ತಿರುವುದು ದುರಂತ. ಗೋಡ್ಸೆಯಂತಹ ವ್ಯಕ್ತಿಯನ್ನು ಮೆರೆಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಮತ್ತು ಜನಸಂಸ್ಕೃತಿ ವಿರುದ್ಧದ ತೀರ್ಮಾನವನ್ನು ಪ್ರತಿಯೊಬ್ಬರೂ ವಿರೋಧಿಸಲು ಸಂಕಲ್ಪ ತೊಡಬೇಕು. ದೇಶದ ಭವಿಷ್ಯದ ಬಗ್ಗೆ ಯುವತಲೆಮಾರು ಚಿಂತಿಸಿ, ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ‘ಪುರುಷ ಪ್ರಧಾನ ಸಮಾಜದಲ್ಲಿ ಮೌಢ್ಯ, ಜಾತಿಯತೆಯ ಹೆಸರಿನಲ್ಲಿ ಅಮಾನವೀಯ ಕ್ರೌರ್ಯ ಪ್ರದರ್ಶಿಲಾಗುತ್ತಿದೆ. ಮಡೆಸ್ನಾನ, ಪಂಕ್ತಿಭೇದ ಅನಾಗರಿಕ ಪ್ರವೃತ್ತಿಯಾಗಿವೆ. ಕೆಲವರು ಕಾವಿ ಹಾಕಿಕೊಂಡು ನೆಲದ ಕಾನೂನಿಗೆ ವಿರೋಧವಾಗಿ ವರ್ತಿಸುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು’ ಎಂದು ಅಭಿಪ್ರಾಯಪಟ್ಟರು.
‘ಪೇಜಾವರ ಶ್ರೀಗಳು ತಮ್ಮ ಒಡಲಲ್ಲೇ ಪಂಕ್ತಿಭೇದವನ್ನು ಹೊತ್ತುಕೊಂಡು, ಮೈಸೂರಿನಲ್ಲಿ ದಲಿತಕೇರಿಗಳಿಗೆ ಭೇಟಿ ನೀಡಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ವ್ಯಂಗ್ಯವಾಡಿದರು. ವಿಚಾರವಾದಿ ಡಾ.ನರೇಂದ್ರ ನಾಯಕ್ ಮಾತನಾಡಿ, ‘ಯುವಪೀಳಿಗೆಯಲ್ಲಿ ಒಂದೆಡೆ ವೈಜ್ಞಾನಿಕ ಚಿಂತನೆ ಬೆಳೆಸಿದರೆ, ಮತ್ತೊಂದೆಡೆ ಮೂಢನಂಬಿಕೆಯನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಹೀಗಾಗಿ, ಅವರು ಕೂಡ ಗೊಂದಲದಲ್ಲಿದ್ದಾರೆ. ಅವರು ಮೂಢನಂಬಿಕೆಯ ಗುಲಾಮರಾಗದಂತೆ ಎಚ್ಚರಿಸುವ ಕೆಲಸ ಆಗಬೇಕಿದೆ’ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಶಿವರಾಮು, ಪಿಯುಸಿಎಲ್ ಅಧ್ಯಕ್ಷ ಡಾ.ವಿ. ಲಕ್ಷ್ಮೀನಾರಾಯಣ್ ಮಾತನಾಡಿದರು. ಎಂ. ಬಸವರಾಜು, ಶಶಿಧರ ಸಂಗಾಪುರ, ದೊಡ್ಡುಂಡಿ ಸಿ. ನಾಗಣ್ಣ, ಎಚ್. ಬೀರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.