ಬಾಗಲಕೋಟೆ: ‘ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ‘ಮಧ್ಯಪಂಥ’ದ ಬಗ್ಗೆ ಪ್ರಸ್ತಾಪಿಸಲಾಗಿದೆ. ‘ಮಧ್ಯ’ ಎಂದರೆ ಚಲಿಸಲಾಗದೇ ಇರುವಲ್ಲಿಯೇ ಕೊಳೆತು ಹೋಗುವ ಸ್ಥಿತಿ’ ಎಂದು ಲೇಖಕ ಕುಂ.ವೀರಭದ್ರಪ್ಪ ಲೇವಡಿ ಮಾಡಿದರು.
ಇಲ್ಲಿನ ‘ಅನುಗ್ರಹ’ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಕಾಶ ಶಿ.ಡಂಗಿ ಅವರ ‘ಅವಳ ನೆನಪಲ್ಲೇ’ ಹಾಗೂ ಕೆ.ಟಿ. ಹಳ್ಳಿ ರಾಮು ಅವರ ‘ನೀನೆಂಬ ಮಾಯೆ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ಬಲ ಪಂಥ ಚಲಿಸಬಲ್ಲದಾದರೂ ಅದಕ್ಕೆ ಸನಾತನತೆ ಅಂತಿಮ ನಿಲ್ದಾಣವಾಗಿದೆ. ಆದರೆ ನಿರಂತರವಾಗಿ ಚಲನಶೀಲವಾಗಿರುವುದು ಹಾಗೂ ಬರಹಗಾರನಲ್ಲಿ ಜಂಗಮಶೀಲತೆಗೆ ಕಾರಣವಾಗುವುದು ಎಡಪಂಥ. ಇಲ್ಲಿಯವರೆಗೂ ಶ್ರೇಷ್ಠ ಸಾಹಿತ್ಯ ರಚಿಸಿ, ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕರಲ್ಲಿ ಬಹುತೇಕರು ಎಡಪಂಥೀಯರೇ ಆಗಿದ್ದಾರೆ’ ಎಂದರು.
ಕತ್ತೆ ರಾಷ್ಟ್ರೀಯ ಪ್ರಾಣಿಯಾಗಲಿ: ‘ಜೀವನದಲ್ಲಿ ಒಮ್ಮೆಯೂ ಹಸುವಿನ ಸಗಣಿ, ಗಂಜಳ ಬಳಿಯದ ಸನ್ಯಾಸಿಯೊಬ್ಬರು ಗೋ ಸಂರಕ್ಷಣೆ ಹೆಸರಿನಲ್ಲಿ ಹಸುವನ್ನು ರಾಷ್ಟ್ರೀಯ ಪ್ರಾಣಿ ಮಾಡುವಂತೆ ಹೇಳುತ್ತಿದ್ದಾರೆ. ಅದು ಸರಿಯಲ್ಲ. ಶ್ರಮಸಂಸ್ಕೃತಿಯ ಪ್ರತೀಕವಾದ ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲಿ’ ಎಂದು ಆಗ್ರಹಿಸಿದರು.
‘ಮೋದಿ ಸಮರ್ಥಕರು’
‘ಲೇಖಕರು ರಾಜಕಾರಣಿಗಳು ತೋರಿಸಿದ ದಾರಿಯಲ್ಲಿ ಸಾಗಬೇಡಿ ಎನ್ನುವ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಸ್ವತಃ ಅವರೇ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಇದ್ದಾರೆ’ ಎಂದು ಕುಂ.ವೀರಭದ್ರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.