ADVERTISEMENT

ಮನಸೂರೆಗೊಂಡ ಗೊಂದಲಿಗ್ಯಾರ ಹಾಡು

ಧಾರವಾಡ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ವೆಂಕಪ್ಪ ಅಂಬಾಜಿ ಸುಗತೇಕರ (ಎಡದಿಂದ ಎರಡನೆಯವರು) ಮತ್ತು ತಂಡದವರು ಗೊಂದಲಿಗ್ಯಾರ ಹಾಡುಗಳನ್ನು ಹಾಡಿದರು
ವೆಂಕಪ್ಪ ಅಂಬಾಜಿ ಸುಗತೇಕರ (ಎಡದಿಂದ ಎರಡನೆಯವರು) ಮತ್ತು ತಂಡದವರು ಗೊಂದಲಿಗ್ಯಾರ ಹಾಡುಗಳನ್ನು ಹಾಡಿದರು   

ಧಾರವಾಡ: ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಅಂಬಾಜಿ ಸುಗತೇಕರ ಅವರ ಗೊಂದಲಿಗ್ಯಾರ ಹಾಡುಗಳು ಸಭಿಕರ ಮನಸೂರೆಗೊಂಡವು. ಸಮಯದ ಅಭಾವದಿಂದ ಹಾಡುಗಳನ್ನು ಮೊಟಕುಗೊಳಿಸಬೇಕು ಎಂದು ಕಾರ್ಯಕ್ರಮದ ಸಂಘಟಕರು ಮನವಿ ಮಾಡಿದರು. ಆದರೆ, ಇನ್ನೆರಡು ಹಾಡುಗಳನ್ನು ಹಾಡಲಿ ಎಂದು ಸಭಿಕರು ಒತ್ತಾಯಿಸಿದರು.

ಅಲ್ಲದೆ, ಬಹುಮಾನ ರೂಪವಾಗಿ ಹಣ ನೀಡುವ ಮೂಲಕ ಪ್ರೋತ್ಸಾಹಿಸಿದರು. ರಾಜಕುಮಾರ್‌ ಮಡಿವಾಳ ಎಂಬುವರು ₹ 5 ಸಾವಿರ ನೀಡಿದರು. ಲೇಖಕಿ ಪ್ರತಿಭಾ ನಂದಕುಮಾರ್‌, ಚಂದ್ರಶೇಖರ್‌ ಸೇರಿದಂತೆ ಹಲವರು ಹಣ ನೀಡಿದರು. ಒಟ್ಟು 10 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಯಿತು.

‘ಜಗದಾಂಬ ದೇವಿ ನೋಡಲಿ, ಸೇವೆ ಮಾಡಲಿ’ ಎಂದು ಹಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದ ವೆಂಕಪ್ಪ ಮತ್ತು ತಂಡ, ‘ಭವಾನಿ ಎಲ್ಲರಿಗೆ ಯಲ್ಲಮ್ಮ, ಪರಶುರಾಮ ಕಾಯಮ್ಮ’ ಎನ್ನುವ ಮೂಲಕ ಮಾತೆಯ ಆರಾಧನೆಯನ್ನು ಮಾಡಿದರು. ಕಬೀರದಾಸರ ಜೀವನ ಚಿತ್ರಣವನ್ನು ಪದ್ಯ, ಸಂಭಾಷಣೆ, ಲಯಬದ್ಧ ಸಂಗೀತದ ಮೂಲಕ ಕಟ್ಟಿಕೊಟ್ಟರು. ಅಲ್ಲದೆ, ತತ್ವಪದ, ವಚನಗಳನ್ನು ಸಹ ತಮ್ಮ ಶೈಲಿಗೆ ಅಳವಡಿಸಿಕೊಂಡು ಹಾಡಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಭಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪುಟ್ಟ ಬಾಲಕ ಅಭಯ್‌ ಸುಗತೇಕರ ಹಾಡು ಮತ್ತು ತಮಟೆ ಬಾರಿಸುವ ಮೂಲಕ ತನ್ನ ತಾತ ವೆಂಕಪ್ಪ ಅವರಿಗೆ ಸಾಥ್‌ ನೀಡಿದ್ದು ಗಮನ ಸೆಳೆಯಿತು.
*
ಗೂಢಚಾರಿಕೆ ಗೊಂದಲಿಗರ ಕೆಲಸ
ಕಾರ್ಯಕ್ರಮದ ನಿರ್ದೇಶಕ ಅನಿಲ ದೇಸಾಯಿ ಮಾತನಾಡಿ, ‘ದಕ್ಷಿಣ ಮಹಾರಾಷ್ಟ್ರ, ಉತ್ತರ ಕರ್ನಾಟಕದ ಭಾಗದಲ್ಲಿ ಗೊಂದಲಿಗರು ನೆಲೆಸಿದ್ದಾರೆ. ರಾಜ್ಯದಲ್ಲಿ ಐದು ಲಕ್ಷ ಮಂದಿ ಗೊಂದಲಿಗರಿದ್ದಾರೆ.

ಈ ಹಿಂದೆ ಶಿವಾಜಿ ಅವರ ಬಳಿ ಗೂಢಚಾರಿಕೆ ಮಾಡಿಕೊಂಡಿದ್ದರು. ಶಿವಾಜಿ ವಿರುದ್ಧ ಪಿತೂರಿ ನಡೆಸುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜನಿಗೆ ತಿಳಿಸುವ ಕೆಲಸ ಮಾಡುತ್ತಿದ್ದರು. ಶಿವಾಜಿ ಅಧಿಕಾರ ಕಳೆದುಕೊಂಡ ಬಳಿಕ ಗೊಂದಲಿಗರನ್ನು ಮುಸ್ಲಿಮರು ಊರು ಬಿಟ್ಟು ಓಡಿಸಿದರು. ದೇಶ ಉಳಿಸಲಿಕ್ಕಾಗಿ ರಾಜನ ಪರ ಕೆಲಸ ಮಾಡಿದೆವು ಎಂಬ ಮಾತನ್ನು ಗೊಂದಲಿಗರು ಇಂದಿಗೂ ಹೇಳುತ್ತಾರೆ’ ಎಂದು ತಿಳಿಸಿದರು.
*
ಗೊಂದಲಿಗರು ಮಾತೃ ಆರಾಧಕರು. ಸಮಾಜದಲ್ಲಿ ಎಷ್ಟೇ ದೊಡ್ಡವರಿರಲಿ, ಎಲ್ಲರೂ ಗೊಂದಲಿಗರಿಗೆ ಗೌರವ ನೀಡುತ್ತಿದ್ದರು. ಜಾತಿ, ಮತ ಮೀರಿದ ಸಂಬಂಧ ಇಬ್ಬರ ನಡುವೆ ಇತ್ತು.
ಅನಿಲ ದೇಸಾಯಿ,
ಕಾರ್ಯಕ್ರಮ ನಿರ್ವಾಹಕ, ಧಾರವಾಡ ಆಕಾಶವಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT