ADVERTISEMENT

ಮನಸೂರೆಗೊಂಡ ಜಂಬೂಸವಾರಿ

ಮೈಸೂರು ದಸರಾ: ‘ಅರ್ಜುನ’ನ ಗಜಗಾಂಭೀರ್ಯದ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2015, 13:47 IST
Last Updated 23 ಅಕ್ಟೋಬರ್ 2015, 13:47 IST

ಮೈಸೂರು: ಹತ್ತು ಹಲವು ಜಾನಪದ ಕಲಾಮೇಳಗಳು, ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪಿಸಿ, ಹೂಗಳಿಂದ ಆಲಂಕೃತ ಚಿನ್ನದ ಅಂಬಾರಿ ಹೊತ್ತ ‘ಅರ್ಜುನ’ ಗಜಗಾಂಭೀರ್ಯದ ಹೆಜ್ಜೆ ಹಾಕಿ ಮುನ್ನಡೆಯುತ್ತಿದ್ದಂತೆ ವಿಶ್ವವಿಖ್ಯಾತ ‘ಮೈಸೂರು ದಸರಾ’ದ ಜಂಬೂಸವಾರಿ ದೇಶ, ವಿದೇಶಗಳಿಂದ ಆಗಮಿಸಿದ್ದ ಜನ ಸಮೂಹದ ಮನಸೂರೆಗೊಂಡಿತು.

ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸರಳ ದಸರಾ ನಡೆಸಿತಾದರೂ ಸಾಂಸ್ಕೃತಿಕ ಸೊಬಗು, ಕಲಾ ಮೆರುಗಿಗೆ ಕೊರತೆ ಇದ್ದತೆ ಕಾಣಲಿಲ್ಲ. ನಾಡಿನ ವಿವಿಧ ಮೂಲೆಗಳಿಂದ ಹಾಗೂ ವಿದೇಶಗಳಿಂದ ಬಂದಿದ್ದ ಪ್ರವಾಸಿಗರು ಸಾಂಸ್ಕೃತಿಕ ನಗರಿಯ ಸೊಬಗನ್ನು ಕಣ್ತುಂಬಿಕೊಂಡಿದ್ದಲ್ಲದೆ, ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದ ಮುಖ್ಯಂಮತ್ರಿ ಸಿದ್ದರಾಮಯ್ಯ ಅವರು, ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.

ಅಂಬಾರಿ ಹೊತ್ತ ‘ಅರ್ಜುನ’ ಅರಮನೆ ನಗರಿಯ ಪ್ರಮುಖ ರಸ್ತೆಗಳ ಮೂಲಕ ಬನ್ನಿಮಂಟಪದ ವರಗೆ ಗಾಂಭೀರ್ಯವಾಗಿ ನಡೆದು ತನಗೆ ವಹಿಸಿದ್ದ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ. ಹಿಂದೆ ಅಂಬಾರಿ ಹೊತ್ತು ಯಶಸ್ವಿಯಾಗಿ ಹೆಜ್ಜೆ ಹಾಕಿ ಈ ಜವಾಬ್ದಾರಿಯಿಂದ ನಿವೃತ್ತಿಯಾಗಿದ್ದ ‘ಬಲರಾಮ’ ನಿಶಾನೆ ಧ್ವಜ ಹೊತ್ತು ಮೆರವಣಿಗೆಯ ಸಾರಥ್ಯ ವಹಿಸಿದ್ದ.

ಜಂಬೂಸವಾರಿಗೂ ಮುನ್ನ ವೀರಗಾಸೆ, ಕಂಸಾಳೆ, ಕೊಡಗಿನ ಪೋಷಾಕು ಧರಿಸಿದ್ದ ಪುರುಷ, ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಮೇಳಗಳು ಗಮನ ಸೆಳೆದವು. 23 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಕೃಷಿ ಇಲಾಖೆ ಸಮಗ್ರ ಕೃಷಿ ಪದ್ಧತಿಯನ್ನು ಪ್ರಸ್ತುತಪಡಿಸಿತ್ತು. ಆಯುಷ್ ಇಲಾಖೆ ಆರೋಗ್ಯ ಕುರಿತು, ಮೈಸೂರು ಜಿಲ್ಲಾಡಳಿತ ಸ್ವಚ್ಛತೆ ಕುರಿತು ಸಿದ್ಧಪಡಿಸಿದ್ದ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT