ಧಾರವಾಡ: ‘ಮುದ್ರಣ ಮಾಧ್ಯಮಗಳಿಗಿಂತ ವಿದ್ಯುನ್ಮಾನ ಮಾಧ್ಯಮ ಹೆಚ್ಚು ಅಪಾಯಕಾರಿ’ ಎಂದು ರಂಗಕರ್ಮಿ, ಲೇಖಕ ಬಿ. ಸುರೇಶ್ ಹೇಳಿದರು.
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ನಡೆದ ‘ಮಾಧ್ಯಮದಲ್ಲಿ ಸತ್ಯ,ನೈತಿಕತೆ, ಸಾಮಾಜಿಕ ಹೊಣೆಗಾರಿಕೆ’ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಪರಾಧ ವರದಿಗಾರಿಕೆಯಲ್ಲಿ ಸುಳ್ಳು ವರದಿ ಮಾಡಿದರೆ ಆಗುವ ಅಪಾಯಗಳ ಬಗ್ಗೆ ಅವರು ಗಮನಸೆಳೆದರು. ‘ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಗ ಆಕೆ ಒಂದು ಸುದೀರ್ಘ ಮರಣಪತ್ರ ಬರೆದಿದ್ದಳು. ಅದರಲ್ಲಿ ‘ನನ್ನ ರಸಾಯನಶಾಸ್ತ್ರ ಉಪಾಧ್ಯಾಯರು ಮೋಸ ಮಾಡಿದರು’ ಎಂಬ ಸಾಲಿತ್ತು. ಆಗ ಇದ್ದ ಎರಡು ಸುದ್ದಿ ವಾಹಿನಿಗಳು ಪೈಪೋಟಿಗೆ ಬಿದ್ದು ಆ ಉಪಾಧ್ಯಾಯ ಆಕೆಗೆ ತೊಂದರೆ ಕೊಟ್ಟಿದ್ದರು ಎಂಬ ಅರ್ಥ ಬರುವಂತೆ ಆತನ ಫೋಟೋ ಸಹಿತ ವರದಿ ಮಾಡಿದ್ದರು.
ವರದಿ ಬಂದ ನಂತರ ಶಾಲೆಯಿಂದ ಆತನನ್ನು ಅಮಾನತು ಮಾಡಲಾಯಿತು. ಇಡೀ ಸಮಾಜ ಬಹಿಷ್ಕಾರ ಹಾಕಿತು. ಇದರಿಂದ ಮನನೊಂದು ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದ. ವಾಸ್ತವದಲ್ಲಿ ಆ ಉಪಾಧ್ಯಾಯ ಆಕೆಗೆ ತೊಂದರೆ ಕೊಟ್ಟಿರಲಿಲ್ಲ. ಆಕೆಗೆ ಮೇಷ್ಟ್ರ ಬಗ್ಗೆ ಪ್ರೀತಿ ಇತ್ತು. ಈ ವಿಚಾರವನ್ನು ಆತ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು ಬುದ್ಧಿ ಬಾಲಕಿಗೆ ಹೇಳಿಸಿದ್ದ. ಆದರೆ, ಹಟಮಾರಿ ಸ್ವಭಾವದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಟಿ.ವಿಯಲ್ಲಿ ಬಂದ ಸುಳ್ಳು ವರದಿಯಿಂದ ಅವಮಾನಕ್ಕೆ ಒಳಗಾದ ಅಮಾಯಕ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಇದು ಸುಳ್ಳು ವರದಿಯಿಂದ ಎಂಥ ಅನಾಹುತವಾಗುತ್ತದೆ ಎಂಬುದಕ್ಕೆ ಉದಾಹರಣೆ’ ಎಂದರು.
ಅಮೀರ್ ಖಾನ್ ಹೇಳಿಕೆಯನ್ನು ಮಾಧ್ಯಮಗಳು ಬಿಂಬಿಸಿದ ರೀತಿಗೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸತ್ಯಕ್ಕೆ ಹತ್ತಾರು ಮುಖಗಳಿರುತ್ತವೆ. ಆದರೆ, ವರದಿಗಾರ ತನಗೆ ತೋಚಿದ್ದಷ್ಟನ್ನೇ ಸತ್ಯ ಎಂದುಕೊಂಡರೆ ಮಾಧ್ಯಮದಲ್ಲಿ ಸತ್ಯ, ನೈತಿಕತೆ, ಸಾಮಾಜಿಕ ಹೊಣೆಗಾರಿಕೆ ಇದೆಯೇ ಎಂಬ ಪ್ರಶ್ನೆ ಏಳುತ್ತದೆ ಎಂದರು.
ಈ-ಟಿವಿಯ ಮುಖ್ಯ ಸಂಪಾದಕ ರಂಗನಾಥ ಭಾರದ್ವಾಜ್ ಮಾತನಾಡಿ, ‘ವ್ಯಾಪಾರ ದೃಷ್ಟಿಯಿಂದ ನೋಡಿದರೆ ಮಾತ್ರ ಮಾಧ್ಯಮ ಉಳಿಯುತ್ತದೆ. ಕರ್ನಾಟಕದಲ್ಲಿ ಎಷ್ಟು ವಾಹಿನಿಗಳು ಸಾಯುವ ಸ್ಥಿತಿಯಲ್ಲಿವೆ, ಎಷ್ಟು ವಾಹಿನಿಗಳಲ್ಲಿ ಉದ್ಯೋಗಿಗಳಿಗೆ ಸಂಬಳ ನೀಡುತ್ತಿಲ್ಲ, ಹೊಸದಾಗಿ ಎಷ್ಟು ವಾಹಿನಿಗಳು ಬರುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿವೆ. ಹಾಗಾಗಿ ನಾವು ವ್ಯಾಪಾರವನ್ನೂ ನೋಡಬೇಕಾಗಿದೆ. ನಮ್ಮದು ಅಡಕತ್ತರಿಯ ಬದುಕು, ಟಿ.ಆರ್.ಪಿ. ಹಿಂದೆ ಓಡುತ್ತಿರುತ್ತೇವೆ. ಪ್ರತಿ ಗುರುವಾರ ನಮ್ಮ ಹಣೆಬರಹ ಬರುತ್ತದೆ. ಆದರೆ, ನಮಗೂ ನೈತಿಕತೆ ಇದೆ. ಎಲ್ಲೋ ಬೆಂಕಿ ಬಿದ್ದರೆ ನಮಗೂ ಉರಿಯಾಗುತ್ತದೆ. ಆದರೆ, ನಮಗೆ ಸಮಯದ ಅಭಾವವಿದೆ’ ಎಂದರು.
ಗೊಂದಲದ ಗೂಡಾದ ಸಂವಾದ
ಚರ್ಚೆಗೆ ಆಹ್ವಾನ ನೀಡುತ್ತಿದ್ದಂತೆ ಸಭಿಕರಿಂದ ಪ್ರಶ್ನೆಗಳ ಮೇಲೆ ಪ್ರಶ್ನೆ ಬಂದು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಒಬ್ಬರು ಮೈಕ್ ಹಿಡಿದು ಪ್ರಶ್ನೆ ಕೇಳುತ್ತಿದ್ದಂತೆ ಮತ್ತೊಂದು ಮೂಲೆಯಿಂದ ಮತ್ತೊಂದು ಪ್ರಶ್ನೆ ಬರುತ್ತಿತ್ತು. ಸಂಘಟಕರು ಎಷ್ಟೇ ಮನವಿ ಮಾಡಿದರೂ ಜನ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಒಂದೇ ಘಟನೆಗೆ ಸಂಬಂಧಿಸಿದ ಪ್ರಶ್ನೆಗಳು ಪುನರಾವರ್ತನೆಯಾದಾಗ ಸಂಘಟಕರು ಮಧ್ಯಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ನಡುವೆ ಅನೇಕರು ಪ್ರಶ್ನೆಗಳ ಚೀಟಿ ಕಳುಹಿಸುತ್ತಿದ್ದರು. ಚೀಟಿಗಳಲ್ಲಿ ನಾಲ್ಕೈದು ಪ್ರಶ್ನೆಗಳಿದ್ದವು. ಚೀಟಿಯ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನವೇ ಮತ್ತೆ ಸಭಿಕರಿಂದ ಪ್ರಶ್ನೆ, ಆಕ್ಷೇಪ ಒಟ್ಟಿಗೆ ವ್ಯಕ್ತವಾಗುತ್ತಿತ್ತು.
ಕಲಬುರ್ಗಿ ಸಂದರ್ಶನದಿಂದ ಆದ ಪ್ರಯೋಜನವೇನು?
ಡಾ.ಎಂ.ಎಂ.ಕಲಬುರ್ಗಿಯವರ ಸಂದರ್ಶನದಿಂದ ನಿಮಗಾದ ಪ್ರಯೋಜನವೇನು ಎಂದು ಪ್ರಶ್ನಿಸಿದ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ, ಉತ್ತರಕ್ಕೆ ಕಾಯದೆ, ‘ನಿಮ್ಮ ಸಂದರ್ಶನದಿಂದಾಗಿ ಕಲಬುರ್ಗಿ ಯವರು ಅಲ್ಲಿ ಇರುವಂತಾಯಿತು’ ಎಂದು ವೇದಿಕೆಯ ಪರದೆಯಲ್ಲಿದ್ದ ಕಲಬುರ್ಗಿ ಚಿತ್ರದತ್ತ ಕೈ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.‘ಅವರ ಸಾವಿಗೆ ನೀವೂ ಕಾರಣ’ ಎಂದರು.
'ಪ್ರಜಾವಾಣಿ'ಗೆ ಹೊಣೆಗಾರಿಕೆ ಇದೆ
ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಸತ್ಯ, ನಿಷ್ಠೆ, ಸಾಮಾಜಿಕ ಹೊಣೆ ಗಾರಿಕೆ ಇದೆ ಎಂಬುದಕ್ಕೆ ಪ್ರಜಾ ವಾಣಿ ಪತ್ರಿಕೆ ಸಾಕ್ಷಿಯಾಗಿದೆ ಎಂದು ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.