ತ್ರಿವಳಿ ತಲಾಖ್ ವಿರುದ್ಧ ಹಲವು ದಶಕಗಳಿಂದ ಹೋರಾಡುತ್ತಿದ್ದ ಮುಸ್ಲಿಂ ಮಹಿಳೆಯರಿಗೆ ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂತೋಷ ತಂದಿದೆ. ಮುಸ್ಲಿಂ ಮಹಿಳೆಯರು ಎಷ್ಟೇ ಹೋರಾಡಿದರೂ ಆ ಹೋರಾಟವನ್ನೇ ಮುರಿದು ಹಾಕಿದ, ನಿರ್ಲಕ್ಷಿಸಿದ ಘಟನೆಗಳನ್ನು ಕಂಡು ಬಹಳ ಬೇಸರವಾಗಿತ್ತು. ಆದರೆ ಇದೀಗ ತಲಾಖ್‌ಗೆ ಸಂಬಂಧಿಸಿದಂತೆ ಆರು ತಿಂಗಳೊಳಗೆ ಕಾನೂನು ರೂಪಿಸುವಂತೆ ಕೋರ್ಟ್ ಹೇಳಿರುವುದು ಮುಸ್ಲಿಂ ಮಹಿಳೆಯರ ಒಟ್ಟು ಹೋರಾಟಕ್ಕೆ ಬಲ ದೊರೆತಂತಾಗಿದೆ.
ತ್ರಿವಳಿ ತಲಾಖ್ ಎಂಬ ಅಮಾನವೀಯ ಪದ್ಧತಿಯನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇ ಒಂದು ಸಾಹಸದ ಕೆಲಸ. ಅವರ ಈ ಹೋರಾಟಕ್ಕೆ ಮುಸ್ಲಿಂ ಸಮಾಜದ ಎಲ್ಲ ಮಹಿಳೆಯರು ಬೆಂಬಲ ನೀಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಅಲ್ಲದೆ ಪ್ರಗತಿಪರ ವಲಯದಿಂದಲೂ ಹೆಚ್ಚೇನೂ ಬೆಂಬಲ ಅವರಿಗೆ ದೊರೆತಿಲ್ಲ. ಇದೀಗ ಸುಪ್ರೀಂ ಕೋರ್ಟ್, ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಾದರೂ ಮುಸ್ಲಿಂ ಸಮಾಜದ ಶಿಕ್ಷಿತರು ಸೇರಿದಂತೆ ಪ್ರಗತಿಪರ ವಿಷಯಗಳ ಪರವಾಗಿರುವ ಎಲ್ಲರೂ ಕೈ ಜೋಡಿಸಬೇಕಾಗಿದೆ. ಕಾನೂನಾತ್ಮಕ ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗದಂತಹ ಕಾನೂನನ್ನು ರೂಪಿಸಬೇಕಾಗಿದೆ.
ತ್ರಿವಳಿ ತಲಾಖ್ ಅನ್ನು ಬೆಂಬಲಿಸುವವರು ಅದು ಷರಿಯತ್‌ನ ಪ್ರಕಾರ ಅನುಸರಿಸುವ ನಿಯಮ ಎಂದೇ ವಾದಿಸುತ್ತಾರೆ. ಆದರೆ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿ ಇರುವ ಷರಿಯತ್ ನಿಯಮಗಳನ್ನು ಒಲ್ಲದೆ, ಸಂವಿಧಾನಾತ್ಮಕವಾಗಿಯೇ ನಡೆದುಕೊಳ್ಳುವ ಅವಕಾಶ ಇರುವಾಗ ನಾಗರಿಕ ಜೀವನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯನ್ನು ಒಪ್ಪಿಕೊಳ್ಳುವುದಕ್ಕೂ ಅವಕಾಶ ಇರಲೇಬೇಕಲ್ಲವೇ. ಆದ್ದರಿಂದ ಪಾಕ್, ಬಾಂಗ್ಲಾದೇಶದಲ್ಲಿ ಇರುವಂತೆ ಸಮಾನ ನಾಗರಿಕ ಸಂಹಿತೆಯತ್ತ ನಮ್ಮ ದೇಶ ಹೆಜ್ಜೆ ಹಾಕಲು ಇದು ಸಕಾಲ ಎಂಬುದು ನನ್ನ ಅನಿಸಿಕೆ.
‘ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆ ವರ್ಷಗಟ್ಟಲೆ ನಡೆಯುತ್ತದೆ. ತಲಾಖ್ ಪ್ರಕ್ರಿಯೆ ಶೀಘ್ರದಲ್ಲಿಯೇ ಆಗುತ್ತದೆ’ ಎಂಬ ಮತ್ತೊಂದು ವಾದವನ್ನು ತಲಾಖ್ ಬೆಂಬಲಿಗರು ಮಂಡಿಸುತ್ತಾರೆ. ನ್ಯಾಯಾಲಯದಲ್ಲಿ ನಡೆಯುವ ದೀರ್ಘ ಪ್ರಕ್ರಿಯೆಯಲ್ಲಿ ಮಹಿಳೆಗೆ ತನ್ನ ಅನಿಸಿಕೆ ಹೇಳಲು ಅವಕಾಶ ಇರುತ್ತದೆ. ತಲಾಖ್ ಪ್ರಕ್ರಿಯೆಯಯಲ್ಲಿ ಅಂತಹ ಅವಕಾಶ ಇರುವುದಿಲ್ಲ. ಅಲ್ಲದೆ ನ್ಯಾಯಾಲಯದ ಕಲಾಪ ಶೈಲಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕೇ ವಿನಃ ತಲಾಖ್ ಅನ್ನು ಪುರಸ್ಕರಿಸುವುದು ಸರಿಯಲ್ಲ.
ಅಲ್ಲದೆ ಪ್ರತ್ಯೇಕ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸುವ, ನ್ಯಾಯಾಧೀಶೆಯರನ್ನು ನೇಮಕ ಮಾಡುವ, ಸಮಿತಿಗಳನ್ನು ರಚಿಸಿ ಮನಸ್ತಾಪಗಳನ್ನು ಸರಿಪಡಿಸುವುದು ಸೇರಿದಂತೆ ಸಮಗ್ರ ವ್ಯವಸ್ಥೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮುಸ್ಲಿಂ ಮಹಿಳೆಯರ ಹೋರಾಟ ಇದೀಗ ಒಂದು ಹಂತಕ್ಕೆ ಬಂದಿದೆ. ಅದನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕಾಗಿದೆ.
ಯಾವುದೇ ಸಮಾಜವಾಗಲೀ, ಕಾಲಕಾಲಕ್ಕೆ ನಾಗರಿಕ ಜೀವನ ಶೈಲಿಗೆ ತಕ್ಕಂತೆ ನಿಯಮಗಳನ್ನು ಪರಿಷ್ಕರಿಸುತ್ತ ಸಾಗಬೇಕಾಗುತ್ತದೆ. ಹಿಂದೂ ಧರ್ಮದಲ್ಲಿ ಸತಿ ಪದ್ಧತಿಯಂತಹ ಕ್ರೂರ ಆಚರಣೆಗಳೂ ಸೇರಿದಂತೆ ಎಷ್ಟೋ ಅನಿಷ್ಟ ಪದ್ಧತಿಗಳಿದ್ದವು. ಆದರೆ ಸಮಾಜ ಸುಧಾರಕರ ಪ್ರಯತ್ನದಿಂದ, ಪರವಿರೋಧದ ಚರ್ಚೆಗಳ ಮೂಲಕ ಅವೆಲ್ಲ ಕಾಲಕಾಲಕ್ಕೆ ಬದಲಾಗುತ್ತಾ ಸಾಗಿವೆ.
ಯಾವುದೋ ಪರಿಸ್ಥಿತಿಯಲ್ಲಿ ರೂಪಿತವಾಗಿರುವ ನಿಯಮಗಳು ಕಾಲ ಕಳೆದಂತೆ ಬದಲಾಗಬೇಕಾದ ಅನಿವಾರ್ಯತೆ ಮೂಡುವುದು ಸಹಜ. ಅದರ ವಾಸ್ತವತೆಯನ್ನು ಅರ್ಥಮಾಡಿಕೊಂಡು ನಾಗರಿಕ ಸಮಾಜ ಎಲ್ಲರ ಒಳಿತಿಗಾಗಿ ಸೂಕ್ತ ಕಾನೂನುಗಳನ್ನು ಮಾಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.