ಶಿರಸಿ: ತಾಲ್ಲೂಕಿನ ಉಲ್ಲಾಳದಲ್ಲಿ ಶನಿವಾರ ಮೃತಪಟ್ಟ ಹೆಣ್ಣಾನೆ ಗರ್ಭಧರಿಸಿತ್ತು ಎಂಬ ಸಂಗತಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಶಿವಮೊಗ್ಗದ ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ಮತ್ತು ತಂಡದ ಸದಸ್ಯರು ಭಾನುವಾರ ಮಧ್ಯಾಹ್ನ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.
‘ಆನೆಯ ಹೊಟ್ಟೆಯೊಳಗೆ ಗಂಡು ಮರಿ ಇತ್ತು. ಆನೆ ಆರೋಗ್ಯವಾಗಿದ್ದಿದ್ದರೆ, ಇನ್ನು ನಾಲ್ಕೈದು ತಿಂಗಳುಗಳಲ್ಲಿ ಮರಿ ಹಾಕುವ ಸಾಧ್ಯತೆಯಿತ್ತು. ಮೃತದೇಹದಿಂದ ಅಗತ್ಯ ಮಾದರಿ ಸಂಗ್ರಹಿಸಲಾಗಿದೆ. ಆನೆ ಯಾವ ಕಾರಣಕ್ಕಾಗಿ ಮೃತಪಟ್ಟಿದೆ ಎಂಬುದು ಮುಂದಿನ ಹಂತದ ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಲಿದೆ’ ಎಂದು ವೈದ್ಯರು ತಿಳಿಸಿದರು.
‘ಅನಾರೋಗ್ಯದಿಂದ ಬಳಲುತ್ತಿದ್ದ ಆನೆಯು ಊರಿನ ಅಂಚಿಗೆ ಬಂದಿರುವುದನ್ನು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು. ಆದರೂ ಅಧಿಕಾರಿಗಳು ವಿಳಂಬವಾಗಿ ಸ್ಥಳಕ್ಕೆ ಭೇಟಿ ನೀಡಿದ್ದರು. ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ, ಆನೆಯನ್ನು ಬದುಕಿಸಿಕೊಳ್ಳಬಹುದಿತ್ತು. ಮರಣೋತ್ತರ ಪರೀಕ್ಷೆಗೂ ವೈದ್ಯರು ತಡವಾಗಿ ಬಂದಿದ್ದಾರೆ. ಆನೆಯ ಅಂತ್ಯಸಂಸ್ಕಾರ ನಡೆಸಲು ನಾವು ಉರುವಲು ಸಂಗ್ರಹಿಸಿಟ್ಟುಕೊಂಡು ಭಾನುವಾರ ಮಧ್ಯಾಹ್ನದವರೆಗೂ ಕಾದೆವು’ ಎಂದು ಊರಿನ ಪ್ರಮುಖ ರಾಘವೇಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಅಧಿಕಾರಿಗಳ ಸಮಕ್ಷಮದಲ್ಲಿ, ಧಾರ್ಮಿಕ ವಿಧಾನಗಳೊಂದಿಗೆ ಆನೆಯ ಅಂತ್ಯಸಂಸ್ಕಾರ ನಡೆಯಿತು. ಡಿಸಿಎಫ್ ಎನ್.ಡಿ. ಸುದರ್ಶನ, ಎಸಿಎಫ್ ಡಿ.ರಘು, ಬನವಾಸಿ ಆರ್‌ಎಫ್ಒ ವಿನಯ ಭಟ್ಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.