ADVERTISEMENT

ಮೈಸೂರು ಸಿಲ್ಕ್‌, ಮದುವೆ, ಶೋಭನ...

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಸುವರ್ಣ ವಿಧಾನಸೌಧ (ಬೆಳಗಾವಿ): ಮೈಸೂರು ರೇಷ್ಮೆ ಸೀರೆಯ ಬಗ್ಗೆ ವಿಧಾನ ಪರಿಷತ್‌ನಲ್ಲಿ ಗುರುವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ರೇಷ್ಮೆ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಈ ಚರ್ಚೆಯಲ್ಲಿ ಭಾಗವಹಿಸಿ ಸದನದಲ್ಲಿ ನಗುವಿನ ಅಲೆ ಎಬ್ಬಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಪಟೇಲ್‌ ಶಿವರಾಂ ಅವರು ರಾಜ್ಯದಲ್ಲಿನ ರೇಷ್ಮೆ ಕೃಷಿಯ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿ ಮುಖ್ಯಮಂತ್ರಿ ಅವರಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾ­ಮಯ್ಯ, ರೇಷ್ಮೆ ಕೃಷಿ ಉತ್ತೇಜನಕ್ಕೆ ಬಜೆಟ್‌ನಲ್ಲಿ ರೂ 30 ಕೋಟಿ ಮೀಸಲಿಡ­ಲಾಗಿದೆ. ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ ಎನ್ನುತ್ತಲೇ ಮಾತನ್ನು ಮೈಸೂರು ರೇಷ್ಮೆ ಸೀರೆಯತ್ತ ಹೊರಳಿಸಿದರು.

‘ಜಾಗತಿಕ ಮಟ್ಟದಲ್ಲಿ ಮೈಸೂರು ರೇಷ್ಮೆ ಸೀರೆಗೆ ಖ್ಯಾತಿ ಇದೆ. ಈ ಸೀರೆ ಗುಣಮಟ್ಟದಲ್ಲಿ ಉತ್ಕೃಷ್ಟವಾ­ದುದು’ ಎಂದು ಹೇಳಿದ ಅವರು, ‘ಏನಮ್ಮಾ ತಾರಾ... ಮೈಸೂರು ಸಿಲ್ಕ್‌ ಸೀರೆ ತಗೊಂಡಿದ್ದಿಯೇ­ನಮ್ಮಾ’ ಎಂದು ಪ್ರಶ್ನಿಸಿದಾಗ ಸದನದಲ್ಲಿ ನಗುವಿನ ಅಲೆ. ಅಷ್ಟಕ್ಕೇ ಸುಮ್ಮನಿರದೆ ಸೀರೆಯ ಗುಣಮಟ್ಟಕ್ಕೆ ಉದಾಹರಣೆ ಯೊಂದನ್ನು ನೀಡಿದ ಅವರು, ‘ಈ ಸೀರೆ 50ರಿಂದ 60 ವರ್ಷ ಬಾಳಿಕೆ ಬರು­ತ್ತದೆ’ ಎಂದರು. ‘ಮದುವೆ, ಶೋಭ­ನಕ್ಕೆ ಈ ಸೀರೆಯನ್ನು ಕೊಡುವ ಸಂಪ್ರ­ದಾಯ­ವಿದೆ’ ಎಂದು ಮಾತು ಮುಂದು­ವರಿಸಿದ ಸಿದ್ದರಾಮಯ್ಯ, ‘ಶೋಭನ ಅಂದ್ರೆ ಏನು ಗೊತ್ತಾ...?’ ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿ­ದಾಗಲೂ ಸಭೆಯಲ್ಲಿ ನಗು ಉಂಟಾಯಿತು.

‘ಇಲ್ಲ ಸರ್‌, ನೀವೇ ವಿವರಿಸಿ’ ಎಂದು ಬಿಜೆಪಿ ಸದಸ್ಯರೊಬ್ಬರು ಸಿದ್ದರಾಮಯ್ಯ ಅವರನ್ನು ಕೇಳಿದರು. ‘ಹಳ್ಳಿಯಲ್ಲಿ ಹುಟ್ಟಿದವನಿಗೆ ಶೋಭನ ಅಂದ್ರೆ ಏನು ಅಂತ ಗೊತ್ತಿಲ್ಲದಿದ್ದರೆ....? ಸಭಾಪತಿ­ಗಳಿಗೆ ಇದು ಅರ್ಥವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದಾಗ ಸದನದಲ್ಲಿ ಮತ್ತೆ ನಗೆ ಬುಗ್ಗೆ ಸ್ಫೋಟಿಸಿತು.

ಚೀನಾ ರೇಷ್ಮೆ ನಿಷೇಧಿಸಿ: ಚೀನಾ ರೇಷ್ಮೆ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿ­ರು­ವುದರಿಂದ ರಾಜ್ಯದ ರೇಷ್ಮೆ ಬಟ್ಟೆಗಳಿಗೆ ಬೇಡಿಕೆ ಸಿಗುತ್ತಿಲ್ಲ. ಚೀನಾ ರೇಷ್ಮೆ ಆಮದಿಗೆ ನಿಷೇಧ ಹೇರಬೇಕು ಎಂದು ಜೆಡಿಎಸ್‌ನ ಸಂದೇಶ್‌ ನಾಗರಾಜ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.