ಮೈಸೂರು: ಕೇಂದ್ರದ ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್‌ಆರ್ಇ) ಮೈಸೂರು ಸೇರಿದಂತೆ ದೇಶದಲ್ಲಿನ 50 ನಗರಗಳನ್ನು ಸೌರನಗರಗಳನ್ನಾಗಿ ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಿದ್ದು, ಈ ನಿಟ್ಟಿನಲ್ಲಿ ಮೈಸೂರು ‘ಮಾದರಿ ಸೌರನಗರ’ವಾಗುವತ್ತ ದಾಪುಗಾಲು ಇಟ್ಟಿದೆ.
ಇದಕ್ಕಾಗಿ ಮಹಾ ಯೋಜನೆ (ಮಾಸ್ಟರ್ ಪ್ಲಾನ್) ತಯಾರಿಸಿ ನವೀಕರಿಸಬಹುದಾದ ಇಂಧನ ಸಚಿವಾಲಯದ ಒಪ್ಪಿಗೆ ಪಡೆಯಲಾಗಿದೆ. ಇದರಲ್ಲಿ 5 ಪ್ರಾಯೋಗಿಕ ಉಪಯೋಜನೆಗಳು ಒಳಗೊಂಡಿವೆ.
ಈಗಾಗಲೇ ಕುಪ್ಪಣ್ಣ ಉದ್ಯಾನದಲ್ಲಿ ತಲಾ 8 ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಈ ಘಟಕವು ₹ 15.20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ವಾರ್ಷಿಕ ಸುಮಾರು 11,520ರಿಂದ 14,400 ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದ ಉದ್ಯಾನದಲ್ಲಿ ಅಳವಡಿಸಿರುವ ವಿದ್ಯುತ್‌ದೀಪಗಳು ಉರಿಯಲಿದ್ದು, ವಾರ್ಷಿಕ ₹ 86,400ರಿಂದ ₹ 1.80 ಲಕ್ಷ ಉಳಿತಾಯವಾಗಲಿದೆ.
ಹೀಗೆಯೇ, ಚೆಲುವಾಂಬ ಉದ್ಯಾನದಲ್ಲಿ 8 ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ವಿದ್ಯುತ್ ಘಟಕಕ್ಕೆ ಸಂಬಂಧಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಇದು ₹ 15.20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಜತೆಗೆ, ಇಲ್ಲಿನ ಮಹಾನಗರ ಪಾಲಿಕೆ ಮುಖ್ಯ ಕಟ್ಟಡದ ಮೇಲೆ 60 ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ಪ್ಲಾಂಟ್ ಅನ್ನು ₹ 60 ಲಕ್ಷ ವೆಚ್ಚದಲ್ಲಿ ಅಳವಡಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ.
ಇದರೊಂದಿಗೆ ಮಹಾನಗರ ಪಾಲಿಕೆಯ 7 ವಲಯ ಕಚೇರಿಗಳ ಕಟ್ಟಡದ ಮೇಲೆ 45 ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ಪ್ಲಾಂಟ್ ಅಳವಡಿಸಲು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
ಇದಕ್ಕಾಗಿ ₹ 45 ಲಕ್ಷ ವೆಚ್ಚವಾಗಲಿದೆ. ಅಲ್ಲದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಟ್ಟಡದ ಮೇಲೆ 75 ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ಪ್ಲಾಂಟ್ ಅಳವಡಿಸುವ ಸಲುವಾಗಿ ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರ ವೆಚ್ಚ ₹ 75 ಲಕ್ಷ. ಈ ಎಲ್ಲ ಕಾಮಗಾರಿಗಳ ಒಟ್ಟು ವೆಚ್ಚ ₹ 2.10 ಕೋಟಿ. ಇದರಲ್ಲಿ ಎಂಎನ್‌ಆರ್ಇ ವತಿಯಿಂದ ನೀಡಲಾಗುವ ಅನುದಾನದ ಮೊತ್ತ ₹ 63.12 ಲಕ್ಷ. ಜತೆಗೆ, ಫಲಾನುಭವಿ ಸಂಸ್ಥೆ ಹಾಗೂ ಇತರೆ ಅನುದಾನದ ಮೊತ್ತದಿಂದ ₹ 1.47 ಕೋಟಿ ಅನುದಾನ ಲಭ್ಯವಾಗಲಿದೆ.
ಇದಲ್ಲದೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮುಖ್ಯ ಕಚೇರಿ, ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಕಚೇರಿ, ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ, ನಗರ ಪೊಲೀಸ್ ಕಮಿಷನರ್ ಆಡಳಿತ ಕಚೇರಿ, ಲೋಕೋಪಯೋಗಿ ಇಲಾಖೆಯ ಕಟ್ಟಡ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಸತಿನಿಲಯ ಹಾಗೂ ಕಚೇರಿ, ಜಿಲ್ಲಾ ಪಂಚಾಯಿತಿ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಅತಿಥಿಗೃಹ ಹಾಗೂ ದಾಸೋಹ ಭವನ, ಶ್ರೀ ಚಾಮರಾಜೇಂದ್ರ ಮೃಗಾಲಯದ ವಸ್ತುಸಂಗ್ರಹಾಲಯ, ಕುಪ್ಪಣ್ಣ ಉದ್ಯಾನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ‘ಎನರ್ಜಿ ಪಾರ್ಕ್’ ಹಾಗೂ ಮೈಸೂರು– ಊಟಿ ರಸ್ತೆಯಲ್ಲಿನ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವಾದ ‘ಶಕ್ತಿಧಾಮ’ –ಹೀಗೆ ಮೈಸೂರಿನ 16 ಸರ್ಕಾರಿ ಕಟ್ಟಡಗಳಿಗೆ ಸೌರಶಕ್ತಿ ಪ್ಲಾಂಟ್ ಅಳವಡಿಸಲು ಯೋಜಿಸಲಾಗಿದೆ.
ಈಗಾಗಲೇ ಎಂಎನ್‌ಆರ್ಇ ವತಿಯಿಂದ 5 ಪ್ರಾಯೋಗಿಕ ಉಪಯೋಜನೆಗಳಿಗೆ ₹ 79.80 ಲಕ್ಷ ಬಿಡುಗಡೆಗೊಂಡಿದೆ. ಸದ್ಯ ಶೇ 15ರಷ್ಟು ಅನುದಾನ ಬಿಡುಗಡೆಗೊಂಡಿದ್ದು, ಉಳಿದ ಶೇ 15ರಷ್ಟು ಅನುದಾನ ಬಳಕೆ ಪ್ರಮಾಣಪತ್ರವನ್ನು ಎಂಎನ್‌ಆರ್ಇ ಕಳುಹಿಸಿದ ಮೇಲೆ ಬಿಡುಗಡೆಯಾಗಲಿದೆ.
ಎನರ್ಜಿ ಪಾರ್ಕ್: ನಜರ್‌ಬಾದ್‌ನ ಕುಪ್ಪಣ್ಣ ಉದ್ಯಾನದಲ್ಲಿ ಸೋಲಾರ್ ಪಿ.ವಿ ಪ್ಯಾನಲ್ ಅಳವಡಿಸಲಾಗಿದೆ. ಜತೆಗೆ, ಕೊಠಡಿಯೊಂದರಲ್ಲಿ ಸೋಲಾರ್ ಬ್ಯಾಟರಿ ಸಂಗ್ರಹಿಸಿಡಲಾಗಿದೆ. ಇದರೊಂದಿಗೆ ‘ಎನರ್ಜಿ ಪಾರ್ಕ್’ ₹ 52.24 ಲಕ್ಷ ವೆಚ್ಚದಲ್ಲಿ ಸಿದ್ಧಗೊಳ್ಳಲಿದೆ.
ಸೌರಶಕ್ತಿಯನ್ನು ಉತ್ಪಾದಿಸುವುದು ಹೇಗೆ? ಬಳಸುವುದು ಹೇಗೆ? ವಿದ್ಯುತ್ ಉತ್ಪಾದಿಸುವುದು ಹೇಗೆ? ಮೊದಲಾದ ವಿಷಯಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಹೀಗೆ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಿಂದ ಮುಂದಿನ 5 ವರ್ಷಗಳಲ್ಲಿ ಬಳಕೆಯಾಗುವ ವಿದ್ಯುತ್ ಪ್ರಮಾಣವನ್ನು ಶೇ 10ರಷ್ಟು ಉಳಿಸಬಹುದಾಗಿದೆ.
* ಮೈಸೂರನ್ನು ‘ಸೌರ ನಗರ’ವನ್ನಾಗಿ ಅಭಿವೃದ್ಧಿಪಡಿಸಲು ಸಕಲ ಸಿದ್ಧತೆಗಳು ನಡೆದಿವೆ. ಜಯನಗರದಲ್ಲಿ ‘ಸೌರಶಕ್ತಿ ಕೋಶ’ ಕಚೇರಿಯನ್ನು ಈಗಾಗಲೇ ತೆರೆಯಲಾಗಿದೆ
-ಡಾ.ಸಿ.ಜಿ. ಬೆಟಸೂರಮಠ,
ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.