ವಿದ್ಯಾಗಿರಿ (ಮೂಡುಬಿದಿರೆ): ಕನ್ನಡ ಭಾಷೆ, ಕನ್ನಡ ಆಡಳಿತ, ಕನ್ನಡ ಜನಜೀವನದ ಮೇಲೆ ವರ್ತಮಾನದ ತಲ್ಲಣಗಳು ಅಪಾಯಕಾರಿಯಾಗಿ ದಾಳಿ ನಡೆಸುತ್ತಿವೆ. ಅತ್ಯಾಚಾರ ಮಾತ್ರವಲ್ಲ ಮೌಢ್ಯಗಳೂ ಸ್ತ್ರೀಯರನ್ನು ನಲುಗಿಸುತ್ತಿವೆ. ಎಲ್ಲ ಜಾತಿ, ಧರ್ಮಗಳಲ್ಲಿನ ಮೌಢ್ಯತೆ ಅಳಿಸಿ ಹಾಕುವ ಮೌಢ್ಯ ವಿರೋಧಿ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂಬ ಒತ್ತಾಯ ಆಳ್ವಾಸ್ ನುಡಿಸಿರಿಯ ವೇದಿಕೆಯಿಂದ ಕೇಳಿಬಂದಿದೆ.
ಇಲ್ಲಿ ಶುಕ್ರವಾರ ಆರಂಭವಾದ 11ನೇ ವರ್ಷದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಯ ಸರ್ವಾಧ್ಯಕ್ಷತೆ ಸ್ಥಾನದಿಂದ ಮಾತನಾಡಿದ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರು ಕನ್ನಡ ನಾಡು, ನುಡಿಗಿಂತಲೂ ಹೆಚ್ಚಾಗಿ, ಕನ್ನಡಿಗರ ಜೀವನ, ಸಂಸ್ಕೃತಿ ಮೇಲೆ ಎದುರಾದ ಸವಾಲುಗಳನ್ನೇ ಉಲ್ಲೇಖಿಸಿ ಹಲವು ಸಲಹೆಗಳನ್ನು ನೀಡಿದರು.
ಭಾಷಾ ಮಾಧ್ಯಮ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕನ್ನಡದ ಗಾಯದ ಮೇಲೆ ಬರೆ ಎಳೆದಂತದ್ದು. ಈ ತೀರ್ಪನ್ನು ವಿರೋಧಿಸಿ ತಕ್ಷಣ ಮೇಲ್ಮನವಿ ಸಲ್ಲಿಸಬೇಕು. ಕೆಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ಆದೇಶ ಕೊಡುವಂತಹ ನಿಯಮ ಜಾರಿಗೆ ಬರಬೇಕು ಎಂಬ ಬೇಡಿಕೆಗಳ ಸಹಿತ ಪ್ರಚಲಿತ ವಿದ್ಯಮಾನಗಳ ಹಲವಾರು ಸಮಸ್ಯೆಗಳಿಗೆ ಸರ್ಕಾರ ಹೇಗೆ ಸ್ಪಂದಿಸಬೇಕು ಎಂಬುದರ ಸ್ಪಷ್ಟ ಸೂಚನೆ ನೀಡಿದರು. ನುಡಿಸಿರಿಯ ಮೆರವಣಿಗೆಯನ್ನು ಅವರು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಹೋಲಿಸಿದರು.
ನುಡಿಸಿರಿ ಉದ್ಘಾಟಿಸಿದ ಹಿರಿಯ ಸಾಹಿತಿ ನಾ.ಡಿಸೋಜ ಅವರು ‘ವರ್ತಮಾನದ ತಲ್ಲಣಗಳಿಗೆ ಪ್ರಮುಖವಾಗಿ ರಾಜಕಾರಣಿಗಳೇ ಕಾರಣ’ ಎಂದು ಆರೋಪಿಸಿದರು. ಇದುವರೆಗೆ ‘ಪವಿತ್ರ’ ಎಂದು ನಂಬಿದ್ದ ಕಾವಿ ಧರಿಸಿದವರೂ ತಮ್ಮ ಘನತೆ ಕಳೆದುಕೊಳ್ಳುತ್ತಿರುವುದನ್ನು ಪ್ರಸ್ತಾಪಿಸಿದರು.
ಸಾಹಿತಿಗಳು ಸಮಾಜವನ್ನು ಎಚ್ಚರಿಸುವಲ್ಲಿ ವಿಫಲರಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಕನ್ನಡ ಮತ್ತು ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಆಳ್ವಾಸ್ ನುಡಿಸಿರಿಯಂತಹ ಹಲವಾರು ಸಂಘ, ಸಂಸ್ಥೆಗಳು, ಸಂಘಟನೆಗಳು ನಡೆಸುತ್ತ ಬಂದಿವೆ. ಇಂಥಲ್ಲಿ ಹುಳುಕು ಹುಡುಕುವ ಪ್ರಯತ್ನ ಮಾಡಬೇಡಿ, ಇದರಿಂದ ಇಂತಹ ಮಾದರಿ ಸಮ್ಮೇಳನಗಳೇ ಸ್ಥಗಿತಗೊಳ್ಳುವ ಆತಂಕ ಇದೆ’ ಎಂದು ಅವರು ಎಚ್ಚರಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 50 ಕಲಾ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ಶುಕ್ರವಾರ ಬೆಳಿಗ್ಗೆ 8.45ಕ್ಕೆ ನುಡಿಸಿರಿಗೆ ಚಾಲನೆ ದೊರೆಯಿತು. ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ವಿವಿಧ ವಿಷಯಗಳಲ್ಲಿ ವರ್ತಮಾನದ ತಲ್ಲಣಗಳನ್ನು ಬಿಂಬಿಸುವ ಗೋಷ್ಠಿಗಳು, ಸಾಹಿತಿಗಳನ್ನು ಪರಿಚಯಿಸುವ ಕವಿ ಸಮಯ ಕನ್ನಡ ನುಡಿಸಿರಿಯನ್ನು ಬೆಳಗಿದವು. ಪ್ರಧಾನ ರತ್ನಾಕರ ವರ್ಣಿ ವೇದಿಕೆಯಲ್ಲದೆ, ಕು.ಶಿ.ಹರಿದಾಸ ಭಟ್ಟ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರ, ಸ್ವರುಣ್‌ರಾಜ್ ವೇದಿಕೆ ಮತ್ತು ಡಾ.ವಿ.ಎಸ್.ಆಚಾರ್ಯ ಸಭಾಂಗಣಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.