ಬೆಂಗಳೂರು: ‘ಪ್ರಭಾಕರ ಜೋಶಿ ಅವರು ಯಕ್ಷಗಾನದ ಮಾಹಿತಿಯ ಕಣಜ’ ಎಂದು ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಬಣ್ಣಿಸಿದರು.
ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಮತ್ತು ಚಿತ್ಪಾವನ ಸಮಾಜದ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಯಕ್ಷಗಾನ ವಿದ್ವಾಂಸ, ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ಅವರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ನುಡಿಗಳನ್ನಾಡಿದರು.
‘ವಿದ್ಯಾರ್ಥಿ ದಿಸೆಯಿಂದಲೇ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಜೋಶಿ ಅವರು, ಮೂರೂವರೆ ದಶಕಗಳಿಂದ ಅರ್ಥಧಾರಿಯಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ ಈ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳುವುದೆಂದರೆ, ಯಕ್ಷಗಾನ– ತಾಳಮದ್ದಲೆಯ ಇತಿಹಾಸವನ್ನು ಅರಿತಂತೆ’ ಎಂದು ಹೇಳಿದರು.
‘ಪಾರಂಪರಿಕ ತಾಳಮದ್ದಲೆಯಲ್ಲಿ ಕಾವ್ಯಾತ್ಮಕ ಪದಗಳು ಇರಲಿಲ್ಲ. ಜೋಶಿ ಅವರು ಕಾವ್ಯಾತ್ಮಕವಾದ ಪದಗಳ ಪರಿಚಯ ಮಾಡಿಸಿದವರು. ಯಕ್ಷಗಾನದ ಒಂದೇ ಪಾತ್ರವನ್ನು ಹಲವು ಆಯಾಮಗಳಲ್ಲಿ ಅಭಿವ್ಯಕ್ತಿಸುವುದನ್ನು ತೋರಿಸಿಕೊಟ್ಟವರು. ಅವರ ವ್ಯಾಪಕ ಓದು, ದಾರ್ಶನಿಕ ಒಳನೋಟಗಳಿಂದ ಮಾತ್ರ ಇದು ಸಾಧ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಕೆ.ಇ.ರಾಧಾಕೃಷ್ಣ, ‘ಪ್ರಭಾಕರ ಜೋಶಿ ಅವರು ಅರ್ಜುನ, ವಾಲಿ, ಸುಗ್ರೀವ, ಕರ್ಣ, ರಾವಣ– ಹೀಗೆ ಯಾವುದೇ ಪಾತ್ರ ಮಾಡಿದರೂ ಅದರ ಚಿತ್ರಣವನ್ನು ನೀಡುತ್ತಾ ಪಾತ್ರದೊಂದಿಗೆ ಅಂತರ ಕಾಯ್ದುಕೊಳ್ಳುತ್ತಾರೆ. ಕರ್ಣನ ದುರಂತದ ತಲ್ಲಣಗಳನ್ನು ಮನಮುಟ್ಟುವಂತೆ ಅಭಿವ್ಯಕ್ತಿಸುತ್ತಾರೆ’ ಎಂದು ಹೇಳಿದರು.
ಅರ್ಥಧಾರಿಗಳ ಪಾತ್ರ ದೊಡ್ಡದು
‘ದಾಸಕೂಟ, ವ್ಯಾಸಕೂಟ ಮಾಡಿದಷ್ಟೇ ಕೆಲಸವನ್ನು ಯಕ್ಷಗಾನದ ಅರ್ಥಧಾರಿಗಳು ಮಾಡಿದ್ದಾರೆ’ ಎಂದು ಪ್ರಭಾಕರ ಜೋಶಿ ಹೇಳಿದರು.
‘ಯಕ್ಷಗಾನ ಹಾಗೂ ಚಿತ್ರ ಸಾಹಿತ್ಯಕ್ಕೆ ಸಿಗಬೇಕಾದ ಮಹತ್ವ ಸಿಕ್ಕಿಲ್ಲ. ಚಿತ್ರ ಸಾಹಿತ್ಯವನ್ನು ಸಾಹಿತ್ಯದ ವ್ಯಾಪ್ತಿಗೆ ಸೇರಿಸಿಕೊಳ್ಳುತ್ತಿಲ್ಲ. ಯಕ್ಷಗಾನ ಕಲಾವಿದರ ಬಗ್ಗೆ ಬೆಳಕು ಚೆಲ್ಲುವಲ್ಲಿ ಮಾಧ್ಯಮಗಳು ಸಹ ವಿಫಲವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಯಕ್ಷಗಾನದ ಬಗ್ಗೆ ಪರಿಚಯಾತ್ಮಕ ಕೃತಿಗಳನ್ನು ರಚಿಸುವ ಉದ್ದೇಶವಿದೆ. ತಾಳಮದ್ದಲೆಗೆ ಭವಿಷ್ಯ ಇದೆ. ಆದರೆ, ಈಗಿನ ಕಲಾವಿದರು ಅವಸರದಲ್ಲಿದ್ದಾರೆ. ಇದು ಅವರ ದೌರ್ಬಲ್ಯ’ ಎಂದರು.
‘ನಾನು ದನ ಕಾದಿದ್ದೇನೆ. ಗೊಬ್ಬರ ಹಾಕಿದ್ದೇನೆ. ಗೇರು ಬೀಜ ಬಿಡಿಸಿದ್ದೇನೆ. ದೇವಸ್ಥಾನದಲ್ಲಿ ಪೂಜೆಯನ್ನೂ ಮಾಡಿದ್ದೇನೆ. ಬಡತನದ ಅರಿವು ನನಗಿದೆ. ಯಕ್ಷಗಾನದ ಬಗ್ಗೆ ವಿಮರ್ಶೆ ಬರೆದಿದ್ದೇನೆ. ಅದರಂತೆ ನಡೆದುಕೊಳ್ಳುವ ಪ್ರಯತ್ನ ಮಾಡಿದ್ದೇನೆ’ ಎಂದು ಜೋಶಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.