ಕುಂದಾಪುರ: ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತ, ನಾಟಕ ನಿರ್ದೇಶಕ, ರಂಗಭೂಮಿ ಕಲಾವಿದ ಹಾಗೂ ಹಿರಿಯ ವೃತ್ತಿಪರ ವೈದ್ಯ ಡಾ.ವೈ ಚಂದ್ರಶೇಖರ ಶೆಟ್ಟಿ (72) ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕುಂದಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದುಕೊಂಡಿದ್ದ ಅವರು, ಎಂಬಿಬಿಎಸ್ ಪದವಿಯ ಬಳಿಕ ವೈದ್ಯರಾಗಿ ಸರ್ಕಾರಿ ಸೇವೆಗೆ ಸೇರಿದ್ದರು. ಕಂಡ್ಲೂರು, ಕುಂದಾಪುರ ಸೇರಿದಂತೆ ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ವಿದ್ಯಾರ್ಥಿ ಜೀವನದಲ್ಲಿಯೇ ನಾಟಕ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಒಲವನ್ನು ಹಚ್ಚಿ ಕೊಂಡಿದ್ದ ಅವರು ವೃತ್ತಿ ಬದುಕಿಗೆ ಬಂದ ಬಳಿಕವೂ ತಮ್ಮಲ್ಲಿದ್ದ ಸಾಂಸ್ಕೃತಿಕ ಪ್ರತಿಭೆಗೆ ಕುಂದುಬಾರದಂತೆ ಯಕ್ಷಗಾನ, ನಾಟಕ ಹಾಗೂ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದರು. ಜಿಲ್ಲೆಯ ಪ್ರಸಿದ್ಧ ವೃತ್ತಿಪರ ನಾಟಕ ಸಂಸ್ಥೆಗಳಾದ `ರೂಪಕಲಾ' ಹಾಗೂ `ರೂಪರಂಗ' ಸಂಸ್ಥೆಗಳಲ್ಲಿ ಹಲವು ವರ್ಷಗಳ ಕಾಲ ನಟನಾ ಚಾತುರ್ಯ ತೋರಿದ್ದರು.
ತಾಲ್ಲೂಕಿನ ನೂರಾರು ಕಡೆ ನಾಟಕಗಳಿಗೆ ನಿರ್ದೇಶನ ನೀಡಿದ್ದರು. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ `ತ್ರಿರಂಗ ರಂಗ ಸಜ್ಜಿಕೆ'ಯನ್ನು ಪ್ರದರ್ಶಿಸಿದ್ದ ಅವರು ರಂಗಭೂಮಿಗೆ ಆಕರ್ಷಣೆ ನೀಡುವ ಯಶಸ್ವಿ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.