ಶಿವಮೊಗ್ಗ: ರಾಜಕೀಯ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದ ಯಡಿಯೂರಪ್ಪ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ. ಕೃಷಿಕರಾದ ಸಿದ್ದಲಿಂಗಪ್ಪ ಹಾಗೂ ಪುಟ್ಟತಾಯಮ್ಮ ತಂದೆ-ತಾಯಿ. ಮುಂದೆ ಕೆಲಸಕ್ಕಾಗಿ ಶಿಕಾರಿಪುರಕ್ಕೆ ಬಂದರು. ಇದೇ ಮುಂದೆ ಅವರ ರಾಜಕೀಯ ಕಾರ್ಯಕ್ಷೇತ್ರ ಆಯಿತು. ಮೈತ್ರಾದೇವಿ ಕೈಹಿಡಿದು ಇದೇ ಊರಿನ ಅಳಿಯನಾದರು.
ಇಪ್ಪತ್ತೆರಡು ವರ್ಷದವರಿದ್ದಾಗ ಆರ್‌ಎಸ್‌ಎಸ್ ಸೇರಿದರು. ಹೋರಾಟ- ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು 1970ರಲ್ಲಿ ಶಿಕಾರಿಪುರ ತಾಲ್ಲೂಕು ಕಾರ್ಯವಾಹಕರಾಗಿ ನೇಮಕಗೊಂಡರು. 1972ರಲ್ಲಿ ಜನಸಂಘದ ತಾಲ್ಲೂಕು ಅಧ್ಯಕ್ಷರೂ ಆದರು.
1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾದರು. ಎರಡೇ ವರ್ಷದಲ್ಲಿ ಅಧ್ಯಕ್ಷ ಪಟ್ಟವೂ ಸಿಕ್ಕಿತು. 1977ರಲ್ಲಿ ಜನತಾ ಪಕ್ಷದ ತಾಲ್ಲೂಕು ಕಾರ್ಯದರ್ಶಿಯಾಗಿ ಆಯ್ಕೆಯಾದರು. 1980ರಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾಗಿ ನೇಮಕವಾದರು.
1983ರಲ್ಲಿ ಶಿಕಾರಿಪುರದಿಂದ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿ, ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಘೋಷಿಸಿ ರೈತರ ಸಾಲ ಮನ್ನಾ ಮಾಡಿಸಲು ಹೋರಾಡಿದ್ದರು. 1985ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು.
1988ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಸಂಘಟನಾ ಕಾರ್ಯ ನೋಡಿ ರಾಷ್ಟ್ರೀಯ ಬಿಜೆಪಿ ಇವರನ್ನು 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತು.
1994ರಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಹೆಸರು ಪಡೆದರು.
1995ರಲ್ಲಿ 2ನೇ ಬಾರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ಯಡಿಯೂರಪ್ಪಗೆ 1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲಾಯಿತು. ಆದರೆ, ಅದೇ ವರ್ಷ ಪಕ್ಷ ಅವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಿತು. 2003ರಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. 2004ರಲ್ಲಿ 2ನೇ ಬಾರಿ ಪ್ರತಿಪಕ್ಷ ನಾಯಕನಾಗುವ ಅವಕಾಶ ಅವರಿಗೇ ಒದಗಿಬಂತು.
2004ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರ 20ತಿಂಗಳಲ್ಲಿ ಪತನವಾದ ನಂತರ ಕುಮಾರಸ್ವಾಮಿ ಜತೆ ದೋಸ್ತಿ ಕುದುರಿಸಿ ಹೊಸ ಸರ್ಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 2006ರಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾದರು. 2008ರಲ್ಲಿ ರಾಜ್ಯದ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.