ADVERTISEMENT

ರಂಗಮಂದಿರಗಳಿಗೆ ಏಕರೂಪದ ಬಾಡಿಗೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2015, 19:30 IST
Last Updated 17 ಆಗಸ್ಟ್ 2015, 19:30 IST

ಬೆಂಗಳೂರು: ‘ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ರಂಗಮಂದಿರಗಳಿಗೆ ಏಕರೂಪದ ಬಾಡಿಗೆ ನಿಗದಿ ಮಾಡಿದ್ದು,  ಹೊಸ ದರ ತಕ್ಷಣದಿಂದ ಜಾರಿಗೆ ಬಂದಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

‘ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಗಳಿಗೆ  ₨ 2ಸಾವಿರ ಬಾಡಿಗೆ ಪಡೆಯಲಾಗುತ್ತಿತ್ತು. ಆದರೆ  ಜಿಲ್ಲಾ ರಂಗಮಂದಿರಗಳಿಗೆ ₨15 ಸಾವಿರದಿಂದ ₨25 ಸಾವಿರದವರೆಗೆ ನಿಗದಿ ಮಾಡಲಾಗಿತ್ತು. ಈ ತಾರತಮ್ಯ ನಿವಾರಿಸಿ ಏಕರೂಪದ ದರ ನಿಗದಿ ಮಾಡಬೇಕು ಎಂಬ ಬೇಡಿಕೆ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲ  ಜಿಲ್ಲಾ ರಂಗಮಂದಿರಗಳಲ್ಲಿ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₨2 ಸಾವಿರ ಬಾಡಿಗೆ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಈ ದರ ರಾಜ್ಯದ ವಿವಿಧ ಜಿಲ್ಲೆಗಳ 16 ಜಿಲ್ಲಾ ರಂಗಮಂದಿರಗಳಿಗೆ ಅನ್ವಯಿಸುತ್ತದೆ. ಇತರ ವಾಣಿಜ್ಯ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತವು ಈ ಹಿಂದೆ ನಿಗದಿಪಡಿಸಿದ್ದ ಬಾಡಿಗೆ ದರಗಳೇ ಅನ್ವಯವಾಗುತ್ತವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.