ಮೈಸೂರು: ರಾಜ್ಯದ ನಾಲ್ಕು ರಂಗಾಯಣಗಳ ನಿರ್ದೇಶಕರ ಹುದ್ದೆಗಳಿಗೆ ಲಾಬಿ ಹೆಚ್ಚಿದೆ. ಮೈಸೂರು, ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಗಳ ಜತೆಗೆ, ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಗುಲ್ಬರ್ಗದ ರಂಗಾಯಣಕ್ಕೂ ನಿರ್ದೇಶಕರ ನೇಮಕವಾಗಬೇಕಿದೆ.
ಸದ್ಯಕ್ಕೆ ರಂಗಸಮಾಜ ರಚನೆಗೊಂಡಿದ್ದು, ರಂಗಸಮಾಜದ ಅಧ್ಯಕ್ಷೆಯಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಸೆ. 3ರ ಸಂಜೆ 4 ಗಂಟೆಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಸಭೆ ನಡೆಯಲಿದೆ. ಇಲ್ಲಿ ಪ್ರತಿ ರಂಗಾಯಣಕ್ಕೆ ಕೆಲ ಹೆಸರುಗಳನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಕಳಿಸುವ ಸೂಚನೆಗಳಿವೆ.
ಮೈಸೂರಿನ ರಂಗಾಯಣಕ್ಕೆ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಸಿನಿಮಾ ನಿರ್ದೇಶಕ ನಾಗಾಭರಣ ಯತ್ನಿಸುತ್ತಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಂಗ ಸಮಾಜದ ಪದನಿಮಿತ್ತ ಸದಸ್ಯರಾಗಿದ್ದರು ಕಪ್ಪಣ್ಣ. ಎರಡು ಅವಧಿಗೆ ನಾಗಾಭರಣ ರಂಗ ಸಮಾಜದ ಸದಸ್ಯರಾಗಿದ್ದರು. ಇವರೊಂದಿಗೆ ಮೈಸೂರಿನವರೇ ಆದ, ರಂಗಕರ್ಮಿ ಜನ್ನಿ (ಜನಾರ್ದನ) ಅವರ ಹೆಸರು ದಟ್ಟವಾಗಿ ಕೇಳಿಬರುತ್ತಿದೆ. ರಂಗಾಯಣದ 18 ಕಲಾವಿದರಲ್ಲಿಯೇ ಒಬ್ಬರನ್ನು ಮೈಸೂರು ರಂಗಾಯಣದ ನಿರ್ದೇಶಕರನ್ನಾಗಿ ನೇಮಿಸಿದರೆ ಇನ್ನೂ ಅನುಕೂಲ ಎನ್ನುವುದು ಕಲಾವಿದರ ಅಭಿಪ್ರಾಯ.
ಇನ್ನು ಶಿವಮೊಗ್ಗ ರಂಗಾಯಣಕ್ಕೆ ಇಕ್ಬಾಲ್ ಅಹ್ಮದ್, ಮಹಾದೇವ ಹಡಪದ ಹಾಗೂ ಸಾಸ್ವೆಹಳ್ಳಿ ಸತೀಶ್ ಹೆಸರುಗಳು ಕೇಳಿಬರುತ್ತಿವೆ. ಧಾರವಾಡ ರಂಗಾಯಣಕ್ಕೆ ಪ್ರಕಾಶ ಗರೂಡ, ವಿಠಲ ಕೊಪ್ಪದ, ಬಸವಲಿಂಗಯ್ಯ ಹಿರೇಮಠ ಹೆಸರುಗಳು ಚಲಾವಣೆಯಲ್ಲಿವೆ. ಅಲ್ಲದೇ ಈಚೆಗೆ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ ಸುಭಾಷ ನರೇಂದ್ರ ಕೂಡಾ ಮರಳಿ ಯತ್ನಿಸುತ್ತಿದ್ದಾರೆ. ನಿರ್ದೇಶಕರಾಗಿ ನೇಮಕಗೊಂಡ ಒಂದು ವರ್ಷದ ಅವಧಿಯಲ್ಲಿ 73 ರಂಗ ಚಟುವಟಿಕೆಗಳನ್ನು ಆಯೋಜಿಸಿದ್ದರ ಕುರಿತು ಪಟ್ಟಿ ಮಾಡಿ ಸಂಬಂಧಿಸಿದವರ ಗಮನ ಸೆಳೆಯುತ್ತಿದ್ದಾರೆ.
ಗುಲ್ಬರ್ಗದ ರಂಗಾಯಣಕ್ಕೆ ಸಮುದಾಯ ಸಂಘಟನೆಯ ಆರ್.ಕೆ. ಹುಡಗಿ, ಶಂಕ್ರಯ್ಯ ಘಂಟಿ ಹಾಗೂ ಹಿರಿಯ ರಂಗಕರ್ಮಿ ಪ್ರಭಾಕರ ಸಾತಖೇಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ಅಸಮಾಧಾನ: ಸಭೆಯನ್ನು ಸಂಜೆ 4 ಗಂಟೆಗೆ ಕರೆಯಲಾಗಿದೆ. ಬೆಳಿಗ್ಗೆ ಹೊತ್ತು ಸಭೆ ಕರೆದರೆ ಹೆಚ್ಚು ಚರ್ಚಿಸಲು ಸಾಧ್ಯವಾಗುತ್ತಿತ್ತು' ಎನ್ನುವ ಅಸಮಾಧಾನ ರಂಗಕರ್ಮಿ, ರಂಗ ಸಮಾಜದ ಸದಸ್ಯ ಮಂಡ್ಯ ರಮೇಶ್ ಅವರದು.
`ಸಾಧ್ಯವಿದ್ದರೆ ಬೆಳಿಗ್ಗೆ ಹೊತ್ತು ಸಭೆ ಕರೆಯಲಿ. ಏಕೆಂದರೆ ಸಭೆಯಲ್ಲಿ ಕಾರ್ಯಕ್ರಮ ಪಟ್ಟಿ ಕುರಿತು ಮಾಹಿತಿಯಿಲ್ಲ. ಹೀಗಾಗಿ ಅನೇಕ ವಿಷಯಗಳ ಜತೆಗೆ ನಿರ್ದೇಶಕರ ನೇಮಿಸುವ ಕುರಿತು ಚರ್ಚೆಯಾಗಿ, ಪ್ರತಿ ರಂಗಾಯಣಕ್ಕೆ ಮೂವರ ಹೆಸರುಗಳನ್ನು ಶಿಫಾರಸು ಮಾಡಬೇಕಿದೆ. ಇದಕ್ಕಾಗಿ ಸಭೆಯನ್ನು ಕಡಿಮೆ ಅವಧಿಗೆ ನಿಗದಿಗೊಳಿಸಬಾರದು' ಎನ್ನುವುದು ಅವರ ಸಲಹೆ.
ನಡೆಯದ ಬೆಳ್ಳಿ ಮಹೋತ್ಸವ: ಮೈಸೂರಿನ ರಂಗಾಯಣ ಆರಂಭಗೊಂಡು 25 ವರ್ಷಗಳಾದವು. ಇದುವರೆಗೆ ಇದರ ಬೆಳ್ಳಿಹಬ್ಬ ಆಚರಣೆ ನಡೆದಿಲ್ಲ. 18 ಕಲಾವಿದರಲ್ಲಿ 12 ಕಲಾವಿದರು ಶಿವಮೊಗ್ಗ ಹಾಗೂ ಧಾರವಾಡಕ್ಕೆ ನಿಯೋಜನನೆಗೊಂಡಿದ್ದರು. ಈಚೆಗೆ ಬ್ರೆಜಿಲ್ ರಂಗ ನಿರ್ದೇಶಕಿ ಎಲಿಸಾ ನಾಟಕವೊಂದನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ಅಭಿನಯಿಸುವ ಸಲುವಾಗಿ ಶಿವಮೊಗ್ಗ ಹಾಗೂ ಧಾರವಾಡದಲ್ಲಿದ್ದ ಕಲಾವಿದರು ವಾಪಸು ಬಂದಿದ್ದಾರೆ.
ಮೈಸೂರಿನಲ್ಲಿ ಒಟ್ಟಿಗೇ ಇದ್ದರೆ ನಾಟಕಗಳನ್ನು ಪ್ರಯೋಗಿಸಲು ಸಾಧ್ಯವಾಗುತ್ತದೆ ಎನ್ನುವುದು ಕಲಾವಿದರ ಮನವಿ. ಹೀಗೆ ಬೆಳ್ಳಿಹಬ್ಬದ ಆಚರಣೆ ಮತ್ತು ಕಲಾವಿದರ ಸಮಸ್ಯೆ ನಿವಾರಣೆ ಹೊಸ ನಿರ್ದೇಶಕರ ನೇಮಕದಿಂದಲಾದರೂ ಬಗೆಹರಿಯಲಿ ಎನ್ನುವುದು ಇಲ್ಲಿಯ ರಂಗಾಸಕ್ತರ ಬಯಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.