ADVERTISEMENT

ರಂಜಿಸಿದ ಅಷ್ಟಾವಧಾನ

ಧಾರವಾಡ ಸಾಹಿತ್ಯ ಸಂಭ್ರಮ 2016

ಹೇಮಾ ವೆಂಕಟ್
Published 22 ಜನವರಿ 2016, 19:47 IST
Last Updated 22 ಜನವರಿ 2016, 19:47 IST
ರಂಜಿಸಿದ ಅಷ್ಟಾವಧಾನ
ರಂಜಿಸಿದ ಅಷ್ಟಾವಧಾನ   

ಧಾರವಾಡ: ಇಲ್ಲಿ ನಡೆಯುತ್ತಿರುವ ‘ಸಾಹಿತ್ಯ ಸಂಭ್ರಮ’ದಲ್ಲಿ ಮಧ್ಯಾಹ್ನ ಭೋಜನದ ನಂತರ ನಡೆದ ಆರ್. ಗಣೇಶ್ ಅವರ ಅಷ್ಟಾವಧಾನ ಕಾರ್ಯಕ್ರಮ ಕಿಕ್ಕಿರಿದ ಸಾಹಿತ್ಯಾಸಕ್ತರನ್ನು ನಿದ್ದೆಗೆ ಜಾರದಂತೆ, ಲವಲವಿಕೆಯಿಂದ ಇರಿಸುವಲ್ಲಿ ಯಶಸ್ವಿಯಾಯಿತು. ಉದ್ಘಾಟನೆ ಮತ್ತು ನಂತರದ ಗೋಷ್ಠಿಯಲ್ಲಿ ಅಸಹಿಷ್ಣುತೆಯ ಬಗ್ಗೆ ನಡೆದ ಬಿಸಿಬಿಸಿ ಚರ್ಚೆಯ ಮೂಡ್ ನಲ್ಲಿದ್ದ ಗಂಭೀರ ಸಾಹಿತಿಗಳನ್ನೂ ತಮ್ಮ ಮಾತುಗಾರಿಕೆ ಮತ್ತು ಪಾಂಡಿತ್ಯದಿಂದ ಆರ್. ಗಣೇಶ್ ರಂಜಿಸಿದರು.

ಸಾಮಾನ್ಯವಾಗಿ ಅಷ್ಟಾವಧಾನ ಕಾರ್ಯಕ್ರಮ ಮೂರು- ನಾಲ್ಕು ಗಂಟೆಗಳ ಕಾಲ ಸುದೀರ್ಘವಾಗಿ ನಡೆಯುತ್ತದೆ. ಆದರೆ, ಸಾಹಿತ್ಯ ಸಂಭ್ರಮದಲ್ಲಿ ಕೇವಲ ಒಂದು ಮುಕ್ಕಾಲು ಗಂಟೆ ಸಮಯ ನೀಡಲಾಗಿತ್ತು. ಅಷ್ಟರಲ್ಲೇ ಗಣೇಶ್  ಅಪ್ರಸ್ತುತ ಪ್ರಶ್ನೆಗಳಿಗೆ ಹಾಸ್ಯಭರಿತ ಉತ್ತರ ನೀಡುತ್ತಲೇ, ಆಶುಕವಿತೆ, ಸಂಖ್ಯಾಬಂಧ, ಸಮಸ್ಯಾಪೂರ್ತಿ, ನಿಷೇಧಾಕ್ಷರಿ ಸವಾಲುಗಳನ್ನು ಸಲೀಸಾಗಿ ನಿರ್ವಹಿಸಿದರು.

ಅಷ್ಟಾವಧಾನ ಕಾರ್ಯಕ್ರಮದ ಆರಂಭದಲ್ಲೇ ‘ಅಪ್ರಸ್ತುತ ಪ್ರಶಂಸೆ’ ಕುರಿತು ಆಶು ಕವಿತೆಗೆ ಹರ್ಷ ಡಂಬಳ  ಬೇಡಿಕೆಯಿತ್ತರು.
ಕಾವ್ಯಂ ಸರ್ವವ್ಯಾಜಂ
ಸೇರ್ವಂ ನಾರುಕ್ತಿಯಿರ್ಕೆ
ಕ್ರೋದಾಗ್ನಿಯೊಳೇಂ ಹವ್ಯಂ ಸವ್ಯ
ಜಸ್ತುತಿ
ಗವ್ಯಂ ತಾನಪ್ಪುದೆಂತು
ಭಾವಿಸಬಹುದೆಂ...
ಎಂಬ ಆಶುಕವಿತೆಯನ್ನು ಹೆಣೆದಾಗ ಪ್ರೇಕ್ಷಕರಿಂದ ಕರತಾಡನದ ಪ್ರಶಂಸೆ ವ್ಯಕ್ತವಾಯಿತು.

ನಿಷೇಧಾಕ್ಷರಿ ಸವಾಲು ನೀಡಿದ ಕೇಯೂರ ಕರಗುದರಿ ಶಿವನ ಸೌಂದರ್ಯವನ್ನು ನಾಲ್ಕು ಸಾಲುಗಳಲ್ಲಿ ವರ್ಣಿಸಲು ಹೇಳಿದರು. ಪ್ರತಿ ಸಾಲಿಗೂ ಒಂದೊಂದು ಅಕ್ಷರ ನಿಷೇಧಿಸಲಾಗಿತ್ತು. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಗಣೇಶ್ ಸವಾಲು ಪೂರ್ಣಗೊಳಿಸಿದ್ದರು.
ಪೂರ್ಣತಾಪ್ತಿಸಲೇ ಲಿಪ್ತಿಗಪ್ಪಲೇಂ
ತೂರ್ಣ ವಲ್ಗುತೇಯೆ ವಾಮನಾಥಾ
ವರ್ಣನೀಯ ಗತಿಯಪ್ಪುದಲ್ತೆ ಪೇಳ್
ಚೂರ್ಣಮಕ್ಕುಂ ಮಿತರಂ
ವಿಕಾರಂ... ಎಂಬ ಕವಿತೆ ಕಟ್ಟಿದರು.

‘ಯಾವ ದಿಕ್ಕಿನಿಂದ ನೋಡಿದರೂ ಶಿವನ ಮುಂದೆ, ಬೇರೆ ಸೌಂದರ್ಯ ಎಂಬುದಿಲ್ಲ. ಶಿವತತ್ವ ತೆಗೆದುಕೊಂಡರೂ ನಮಗೆ ನಾವೇ ಸುಂದರವಾಗಿ ಕಾಣುತ್ತೇವೆ’ ಎಂದು ಕವಿತೆಯ ಭಾವಾರ್ಥ ವಿವರಿಸಿದಾಗ ಹಿರಿ–ಕಿರಿಯ ಸಾಹಿತ್ಯ ಪ್ರೇಮಿಗಳೆಲ್ಲರೂ ತಲೆದೂಗಿದರು. ಶ್ರೀಪಾದ ಹೆಗಡೆ, ಪ್ರಮೋದ ಚಂದಿ, ನಾಗೇಶ ಶಾನಭಾಗ ಭಾಗವಹಿಸಿದ್ದರು.

***
ಸಿಂಗಲ್ ಪೇರೆಂಟ್‌ನ ಮೊದಲ ಪ್ರಾಡಕ್ಟ್  ಭೀಷ್ಮ
ಕುಟುಂಬ ಯೋಜನೆಯ ಸ್ಲೋಗನ್ ಎಪ್ಪತ್ತರ ದಶಕದಲ್ಲಿ ನಾವಿಬ್ಬರು ನಮಗಿಬ್ಬರು ಎಂದಿತ್ತು. ನಂತರ ನಾವಿಬ್ಬರು ನಮಗೊಬ್ಬರು ಎಂದಾಯಿತು.

ಈಗ ಸಿಂಗಲ್ ಪೇರೆಂಟ್ ಇದ್ದರೆ ಹೇಗೆ ಹೇಳುವುದು ? ಎಂಬ ದಿವಾಕರ ಹೆಗಡೆಯವರ ಅಪ್ರಸ್ತುತ ಪ್ರಶ್ನೆಗೆ ಉತ್ತರಿಸಿದ ಗಣೇಶ್, ‘ಭೀಷ್ಮ ಸಿಂಗಲ್ ಪೇರೆಂಟ್ನ ಮೊದಲ ಪ್ರಾಡಕ್ಟ್. ಭೀಷ್ಮನ ಬಗ್ಗೆ ನನಗೆ ಅಂಥ ಗೌರವವಿಲ್ಲ. ಯಾಕೆಂದರೆ ಮೌಲ್ಯವಾಗಿ ಅವನು ಕಾಡುವುದಿಲ್ಲ. ಭೀಷ್ಮ ಯಾವ ಹೆಣ್ಣಿನ ಜೊತೆಯೂ ಬೆರೆಯಲೇ ಇಲ್ಲ. ಅಮ್ಮ, ಅಕ್ಕ-ತಂಗಿ, ಹೆಂಡತಿ ಹೀಗೆ ಯಾರ ಸಂಘವನ್ನೂ ಪಡೆಯಲಿಲ್ಲ. ಮಾನವ ಜಾತಿಯ ಮತ್ತೊಂದು ಮುಖದ ಪರಿಚಯವೇ ಆತನಿಗೆ ಆಗಲಿಲ್ಲ. ತ್ರಿಲೋಕ ಪಾವನಿ ಗಂಗೆ, ಮಗನನ್ನು ಈಗಿನ ಕಾಲದವರಂತೆ ಇಂಟರ್‌ನ್ಯಾಷನಲ್‌ ವಸತಿ ಶಾಲೆಯಲ್ಲಿ ಪರಶುರಾಮ, ಬೃಹಸ್ಪತಿಯರನ್ನು ಮೀರುವ ಗುರು ಗಳಿಂದ ಶಿಕ್ಷಣ ಕೊಡಿಸಿದಳು. ಆದರೆ, ಮಗನ ಅಂತರಂಗವನ್ನು ಮೃದು ಮಾಡಲಾಗಲಿಲ್ಲ’ ಎಂದರು.

***
ನಗೆಗಡಲಲ್ಲಿ  ತೇಲಿಸಿದ ‘ಅಪ್ರಸ್ತುತ ಪ್ರಸಂಗ’
ಆಶುಕವಿತೆಯ ಒಂದು ಸಾಲು ಪೂರ್ಣಗೊಳಿಸುತ್ತಿದ್ದಂತೆ ಬರುತ್ತಿದ್ದ ಅಪ್ರಸ್ತುತ ಪ್ರಶ್ನೆಗೆ ಗಣೇಶ್, ಸ್ವಾರಸ್ಯಕರ ಉತ್ತರ ನೀಡಿ ಮತ್ತೆ ತಾವು ಅರ್ಧಕ್ಕೆ ನಿಲ್ಲಿಸಿದ್ದ ಕವಿತೆಯ ಸಾಲು ಗಳನ್ನು ಪೂರ್ಣಗೊಳಿಸುತ್ತಿದ್ದರು.

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬ  ಮಾತಿದೆ. ಹಾಗಾದರೆ ಮಾಧ್ಯಮದವರ ಕತೆಯೇನು ? ಎಂಬ ಪ್ರಶ್ನೆಗೆ ‘ಪಾಪವನ್ನು ಸಂಸ್ಕೃತದ ಪಾಪ ಎಂದು ಅರ್ಥಮಾಡಿಕೊಳ್ಳುವ ಬದಲು ಕನ್ನಡದ ಪಾಪ ಎಂದುಕೊಂಡರೆ ಅವರ ಸಂತತಿ ಬೆಳೆಯುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು. ಮಾಧ್ಯಮದ ಮಡುವಿನಲ್ಲಿ ರಾಜಕಾರಣಿಯೆಂಬ ಮೊಸಳೆಗೆ ರಕ್ಷಣೆ ನೀಡುವುದು’ ಎಂದರು.

ದ್ವಿಪದಿ, ತ್ರಿಪದಿಗಳ ಸುತ್ತಲೇ ಇರುವ ನೀವು ಯಾಕೆ ಸಪ್ತಪದಿಯ ಹತ್ತಿರ ಹೋಗಿಲ್ಲ ಎಂಬ ಕೆಣಕುವ ಪ್ರಶ್ನೆಗೆ, ‘ನಾನು ಅನೇಕರ ಜೊತೆ ಸಪ್ತಪದಿ ತುಳಿದಿದ್ದೇನೆ. ಏಳನೇ ಹೆಜ್ಜೆ ಇಡುವಾಗ ಸ್ನೇಹದಿಂದ ಇರುತ್ತೇವೆ ಎಂದು ಪ್ರತಿಜ್ಞೆ ಮಾಡುವ ಹೆಚ್ಚಿನ ದಂಪತಿ ಕೊನೆಯವರೆಗೂ ಏಳನೇ ಹೆಜ್ಜೆಗೆ ತಲುಪುವುದೇ ಇಲ್ಲ. ನಾನು ಅನೇಕರ ಸ್ನೇಹ ಗಳಿಸಿದ್ದೇನೆ. ಆ ಅರ್ಥದಲ್ಲಿ ನಾನು ಸಪ್ತಪದಿ ತುಳಿದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT