ಬೆಂಗಳೂರು: ‘ಕಾನೂನಿನ ಮುಂದೆ ಎಲ್ಲರೂ ಸಮಾನರು. ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಪ್ರಕರಣ ಇತ್ಯರ್ಥವಾಗುವವರೆಗೆ ಪೀಠ ತ್ಯಾಗ ಮಾಡಬೇಕು. ತನಿಖೆಗೆ ಸಹಕರಿಸಬೇಕು’ ಎಂದು ಸಮಾನ ಮನಸ್ಕ ಹವ್ಯಕರ ವೇದಿಕೆ ಗೌರವಾಧ್ಯಕ್ಷ ನೂಜಿಬೈಲು ಕೃಷ್ಣಭಟ್ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸ್ವಾಮೀಜಿ ಸ್ವಯಂ ಪ್ರೇರಿತರಾಗಿ ತನಿಖೆಗೆ ಒಳಪಡಲಿ. ನಿರಪರಾಧಿ ಎಂದು ಸಾಬೀತಾದ ನಂತರ ಪೀಠವನ್ನು ಅಲಂಕರಿಸಲಿ’ ಎಂದರು. ‘ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಆದರೆ ತನಿಖೆಯ ಪ್ರತಿ ಹಂತದಲ್ಲೂ ಅಡಚಣೆ ಮಾಡಿ, ತನಿಖೆ ವಿಳಂಬಗೊಳಿಸಲು ಹವಣಿಸುತ್ತಿರುವುದು ಸ್ವಾಮೀಜಿಯ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ’ ಎಂದು ಅವರು ಹೇಳಿದರು.
ವೇದಿಕೆಯ ಅಧ್ಯಕ್ಷ ಸತ್ಯಪ್ರಕಾಶ್ ವಾರಣಾಸಿ ಮಾತನಾಡಿ ‘ಈ ಪ್ರಕರಣದಿಂದ ಹವ್ಯಕ ಸಮುದಾಯದಲ್ಲಿ ಒಡಕು ಉಂಟಾಗಿದ್ದು, ಇದು ಪರಸ್ಪರ ವೈಷಮ್ಯ, ದ್ವೇಷ, ಕೋಪ– ತಾಪಕ್ಕೆ ಕಾರಣವಾಗಿದೆ. ರಾಮಕಥಾ ಕೇವಲ ಪ್ರವಚನವಾಗಿ ಮುಂದುವರಿದಿದ್ದರೆ ಇಂತಹ ಪ್ರಸಂಗ ನಡೆಯುತ್ತಿರಲಿಲ್ಲ. ಆದರೆ, ಅದು ಮನರಂಜನೆಯಾಗಿ ಬೆಳೆದು, ರಾಮಕಥಾದ ನಂತರವು ಸ್ವಾಮೀಜಿಯ ಸುತ್ತ ಗಾಯಕರು ಕಾಣಿಸಿಕೊಂಡಿದ್ದು ಇಂದಿನ ರಾದ್ಧಾಂತಕ್ಕೆ ಕಾರಣವಾಗಿದೆ’ ಎಂದು ದೂರಿದರು.
‘ಇಂದು ಹವ್ಯಕ ಸಮಾಜ ಸ್ವಾಮೀಜಿಯವರ ಪರ ನಿಂತಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಗುರುಪೀಠದ ಬಗ್ಗೆ ಅಪಾರ ಭಕ್ತಿ ಇದ್ದರೂ, ಪ್ರಸ್ತುತ ಬೆಳೆವಣಿಗೆಯಿಂದಾಗಿ ಬೇಸರಗೊಂಡು ಮಠದ ನಿಲುವನ್ನು ಖಂಡಿಸುವ, ನ್ಯಾಯ ಹಾಗೂ ಸತ್ಯದ ಪರವಾಗಿ ನಿಲ್ಲುವ ಸಾಕಷ್ಟು ಹವ್ಯಕರಿದ್ದಾರೆ’ ಎಂದರು.
‘ಗಾಯಕರಿಗೆ ಬೆದರಿಕೆ ಹಾಕುವ ಬದಲು ತಾವೇ ಪ್ರಕರಣವನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ, ಪರಸ್ಪರ ಆರೋಪ ಮಾಡಿಕೊಂಡು ಸಮುದಾಯಕ್ಕೆ ಅವಮಾನ ಮಾಡಿದರು. ದಿವಾಕರಶಾಸ್ತ್ರಿ ಅವರ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರ ನಿಧನದ ಸಂದರ್ಭದಲ್ಲಿ ಅವರನ್ನು ಹವ್ಯಕ ಸಮುದಾಯದಿಂದ ಬಹಿಷ್ಕಾರ ಹಾಕಿರುವುದು ಸರಿಯಲ್ಲ’ ಎಂದರು.
‘ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಸ್ವಾಮೀಜಿ ಭಕ್ತರ ಮೂಲಕ ಪ್ರೇಮಲತಾ ದಂಪತಿಗಳ ಮೇಲೆ ಒತ್ತಡ ಹೇರಲು ಮುಂದಾದರು ಎಂಬ ಅನುಮಾನಗಳು ಮೂಡುತ್ತವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.