ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಪರ–ವಿರುದ್ಧ ಹೇಳಿಕೆ, ಪ್ರತಿ ಹೇಳಿಕೆ, ಸಭೆ–ಪರ್ಯಾಯ ಸಭೆಗಳಿಗೆ ಮಾತ್ರ ಸೀಮಿತವಾಗಿದ್ದ ಹವ್ಯಕ ಸಮಾಜದ ಎರಡು ಬಣಗಳ ನಡುವಣ ಸಂಘರ್ಷ ಈಗ ಪುಸ್ತಕ ಸಮರಕ್ಕೆ ಬಂದು ನಿಂತಿದೆ.
ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ ಶಾಸ್ತ್ರಿ ಅವರು ಅತ್ಯಾಚಾರ ಆರೋಪ ಪ್ರಕರಣ ದಾಖಲಿಸಿದ ನಂತರ ಹವ್ಯಕ ಸಮಾಜದ ಮುಖಂಡರು ಮಠದ ಪರ, ರಾಘವೇಶ್ವರ ಸ್ವಾಮೀಜಿ ಪರ ನಿಂತು ಏಕತೆ ಪ್ರದರ್ಶಿಸಿದ್ದರು.
ನಂತರ ನಡೆದ ಬದಲಾದ ಪರಿಸ್ಥಿತಿಯಲ್ಲಿ ಕೆಲ ಮುಖಂಡರು ಶ್ರೀಗಳ ಪರ ಧ್ವನಿ ಎತ್ತಿದರೆ, ಕೆಲ ಮುಖಂಡರು ಘಟನೆಯ ಸತ್ಯಾಸತ್ಯತೆ ತಿಳಿಯಬೇಕು. ತಪ್ಪು ಮಾಡಿದ ಯಾರೇ ಆದರೂ ಅದು ಅಕ್ಷಮ್ಯ ಎಂದು ಶ್ರೀಗಳ ವಿರುದ್ಧ ಚಾಟಿ ಬೀಸಿದ್ದರು.
ನೇರ ವಾಗ್ದಾಳಿ: ಸಾಗರದಲ್ಲಿ ‘ಸಮಾನ ಮನಸ್ಕ ಹವ್ಯಕ ವೇದಿಕೆ’ ಈಚೆಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮುಖಂಡ ಕೆ. ಎಚ್. ಶ್ರೀನಿವಾಸ್, ಜಿಲ್ಲಾ ಹವ್ಯಕ ಸಮಾಜದ ಅಧ್ಯಕ್ಷ ಅಶೋಕ್ ಜಿ. ಭಟ್ ಇತರರು ‘ಶ್ರೀಗಳ ವಿರುದ್ಧದ ಆರೋಪದಲ್ಲಿ ಹಲವು ಸತ್ಯದ ಅಂಶಗಳು ಕಾಣುತ್ತಿವೆ. ಬಹು ದಿನ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳನ್ನೇ ಪ್ರತಿಪಾದಿಸುತ್ತ ಕುಳಿತರೆ ಸತ್ಯ ಮರೆಮಾಚಲು ಸಾಧ್ಯವಿಲ್ಲ’ ಎಂದು ನೇರವಾಗಿ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದ್ದು ಪ್ರಕರಣದ ಕಾವು ಹೆಚ್ಚಿಸುವಂತೆ ಮಾಡಿತ್ತು.
ಶ್ರೀಗಳು ತಪ್ಪು ಮಾಡಿಲ್ಲ: ಅದಕ್ಕೆ ಪ್ರತಿಯಾಗಿ ಮಠದ ಪರ ಇರುವ ಮತ್ತೊಂದು ಬಣ ‘ಸಚ್ ಕೇ ಸಾಥ್’ ಸಂಘಟನೆ ಹೆಸರಲ್ಲಿ ಡಾ.ಗಜಾನನ ಶರ್ಮ ನೇತೃತ್ವದಲ್ಲಿ ಪರ್ಯಾಯ ಸಭೆಗಳನ್ನು ನಡೆಸಿ ‘ಶ್ರೀಗಳ ಪರ ಇಡೀ ಸಮಾಜ ಇದೆ. ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ. ಅವರ ಜತೆ ನಾವಿದ್ದೇವೆ’ ಎಂಬ ಸಂದೇಶ ನೀಡಿದ್ದರು. ಈಗ ಶ್ರೀಗಳ ಪರ–ವಿರುದ್ಧ ಪುಸ್ತಕ ಸಮರ ಆರಂಭವಾಗಿದೆ.
ಧರ್ಮದ ಸಂರಕ್ಷಣೆ: ಸತ್ಯದ ಪ್ರತಿಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಪರ–ವಿರೋಧ ಎನ್ನುವ ವಾದವೇ ಸುಳ್ಳು. ಸತ್ಯದ ಬಗ್ಗೆ ಮಾತನಾಡಿದರೆ ವಿರೋಧಿ ಬಣ ಎಂದು ಹೇಗೆ ಹೇಳುತ್ತೀರಿ? ಇಂದಿಗೂ ನಮ್ಮ ಹೃದಯ– ಮನಸ್ಸು ಮಠದ ಪರವೇ ಇದೆ. ಮುಂದೆಯೂ ಇರುತ್ತದೆ. |
ಸಮಾನ ಮನಸ್ಕ ಹವ್ಯಕ ವೇದಿಕೆ ‘ಸತ್ಯ ಸಂಗತಿ‘ ಎಂಬ ಪುಸ್ತಕ ಹೊರತಂದಿದೆ. ಆ ಪುಸ್ತಕದಲ್ಲಿ ರಾಘವೇಶ್ವರ ಶ್ರೀಗಳು ಪೀಠಕ್ಕೆ ಬರುವಾಗಲೇ ಹೇಗೆ ವಿವಾದದ ಕೇಂದ್ರ ಬಿಂದುವಾಗಿದ್ದರು, ಪ್ರೇಮಲತಾ ದಂಪತಿ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಬಂಧಿತರಾಗುವ ಸಾಕಷ್ಟು ಮುಂಚೆಯೇ ಸಮಾಜದ ಮುಖಂಡರ ಬಳಿ ಸ್ವಾಮೀಜಿ ತಮಗೆ ಮಾಡಿದ ಅನ್ಯಾಯ ಹೇಳಿಕೊಂಡಿದ್ದರೂ, ಆ ಮುಖಂಡರು ನ್ಯಾಯ ಕೊಡಿಸುವುದಾಗಿ ನಂಬಿಸಿ, ಕಾಲ ವಿಳಂಬ ಮಾಡುತ್ತಾ ಹೇಗೆ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಸಿಲುಕಿಸಿದರು, ನಿರಂತರವಾಗಿ ಅತ್ಯಾಚಾರ ನಡೆದರೂ ಪ್ರೇಮಲತಾ ಅವರು ಏಕೆ ವಿಷಯ ಬಹಿ-ರಂಗಪಡಿಸಲಿಲ್ಲ, ಅವರನ್ನು ಸ್ವಾಮೀಜಿ ಹೇಗೆಲ್ಲ ಬಳಸಿಕೊಂಡರು.
ನಂತರ ಪ್ರಕರಣ ಮುಚ್ಚಿ ಹಾಕಲು ಸ್ವಾಮೀಜಿ, ಮಠದ ರೂವಾರಿಗಳು ಹೇಗೆ ಕಾರ್ಯತಂತ್ರ ರೂಪಿಸಿದರು ಎಂದು ವಿವರಿಸಲಾಗಿದೆ. ಮಠದಲ್ಲಿ ಶ್ರೀಗಳು ಏಕಾಂತವಾಗಿ ನಡೆಸುವ ಕನ್ಯಾ ಸಂಸ್ಕಾರ, ಕುಂಕುಮ ಧಾರಣೆ, ಮಹಿಳೆಯರ ಜತೆಗೆ ಮಧ್ಯರಾತ್ರಿವರೆಗೆ ನಡೆಸುವ ‘ಏಕಾಂತ ಸೇವೆ’ ಕುರಿತು ಪ್ರಶ್ನಿಸಲಾಗಿದೆ.
ಅದಕ್ಕೆ ಪ್ರತಿಯಾಗಿ ಸಚ್ ಕೇ ಸಾಥ್ ಸಂಘಟನೆ ‘ಇದು ಸತ್ಯ!– ಮಾಯಾ ಸಮರಕ್ಕೆ ನ್ಯಾಯದ ಉತ್ತರ’ ಎಂಬ ಪುಸ್ತಕ ಪ್ರಕಟಿಸಿದೆ. ಅದರಲ್ಲಿ ‘ಸತ್ಯ ಸಂಗತಿ’ ಪುಸ್ತಕ ಸುಳ್ಳಿನ ಸರಮಾಲೆ ಎಂದು ಹೀಗಳೆಯಲಾಗಿದೆ.
ರಾಮಚಂದ್ರಾಪುರ ಮಠದ ಐತಿಹ್ಯ, ಸ್ವಾಮೀಜಿ ಸಾಧನೆ, ಮಠದ ಮೇಲೆ ನಡೆದ ಅಕ್ರಮಣಗಳು, ಗೋಕರ್ಣ ಮಠದ ವಿವಾದ, ರಾಮ ಕಥಾದ ಯಶಸ್ಸು, ಪ್ರೇಮಲತಾ ದಂಪತಿಯ ನಡೆ, ಶ್ರೀಗಳ ಜತೆಗಿನ ಮೊಬೈಲ್ ಸಂದೇಶ ವಿನಿಮಯ, ಹಣಕ್ಕಾಗಿ ಇಟ್ಟ ಬೇಡಿಕೆ. ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ ಪ್ರಸಾದ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ, ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ, ಪ್ರೇಮಲತಾ ಬಳಸಿಕೊಂಡು ಶ್ರೀಗಳ ವಿರುದ್ಧ ವಿರೋಧಿಗಳು ಹೆಣೆದ ಷಡ್ಯಂತ್ರ ಕುರಿತಂತೆ ಚರ್ಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.