ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2012ನೇ ಸಾಲಿನ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ನಿರೀಕ್ಷೆಯಂತೆ ಈ ಬಾರಿಯೂ ಕರ್ನಾಟಕದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ರಾಜ್ಯದ 28 ಮಂದಿ ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಕೆ.ವಿ.ರಾಜೇಂದ್ರ ಅವರು 32ನೇ ರ್‍ಯಾಂಕ್ ಪಡೆದಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಕರ್ನಾಟಕದ ಮಟ್ಟಿಗೆ ಇವರು ಮೊದಲಿಗರು ಎನ್ನಲಾಗಿದೆ.
ರವಿ ಸುಭಾಷ್ ಪಟ್ಟಣಶೆಟ್ಟಿ 47ನೇ ರ್‍ಯಾಂಕ್, ಆರ್. ಯಶಸ್ 75ನೇ ರ್‍ಯಾಂಕ್ ಪಡೆದಿದ್ದಾರೆ. ಇವರಿಬ್ಬರೂ ಈಗಾಗಲೇ ಸೇವೆಯಲ್ಲಿದ್ದಾರೆ. ಯಶಸ್ ಐಪಿಎಸ್‌ಗೆ ಆಯ್ಕೆಯಾಗಿದ್ದು, ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ 77ನೇ ರ್‍ಯಾಂಕ್ ಪಡೆದಿರುವ ಆರ್.ಸ್ನೇಹಲ್ ಅವರು ಕಳೆದ ಬಾರಿ 789ನೇ ರ್‍ಯಾಂಕ್ ಪಡೆದಿದ್ದರು. ಅಂಚೆ ಸೇವೆಯಲ್ಲಿರುವ ಅವರು ಉತ್ತಮ ರ್‍ಯಾಂಕ್ ಗಳಿಸಬೇಕು ಎಂಬ ಉದ್ದೇಶದಿಂದ ಈ ಬಾರಿಯೂ ಪರೀಕ್ಷೆ ತೆಗೆದುಕೊಂಡಿದ್ದರು.
ಆರ್.ಯಶಸ್, ಪ್ರೀತ್ ಗಣಪತಿ ಅವರು ಈಗಾಗಲೇ ಭಾರತೀಯ ಪೊಲೀಸ್ ಸೇವೆಯಲ್ಲಿದ್ದಾರೆ. ಭಾರತೀಯ ಆಡಳಿತ ಸೇವೆಗೆ ಸೇರುವ ಆಸೆಯಿಂದ ಮತ್ತೆ ಪರೀಕ್ಷೆ ಬರೆದಿದ್ದರು. ಇವರಿಬ್ಬರಿಗೂ ಐಎಎಸ್ ಸಿಗುವುದು ಖಚಿತ.
ಈ ಬಾರಿ ಸಂದರ್ಶನಕ್ಕೆ ಹಾಜರಾಗಿದ್ದ ಬೆಂಗಳೂರಿನ ಜೆಎಸ್‌ಎಸ್ ತರಬೇತಿ ಕೇಂದ್ರದ 29 ಅಭ್ಯರ್ಥಿಗಳ ಪೈಕಿ 11 ಮಂದಿ ಆಯ್ಕೆಯಾಗಿದ್ದಾರೆ. ಆರ್.ಸ್ನೇಹಲ್ (77ನೇ ರ್‍ಯಾಂಕ್), ಪ್ರೀತ್ ಗಣಪತಿ (161), ಅಮಿತ್‌ಕುಮಾರ್ (266), ಜಿ.ಆರ್.ಸಂದೀಪ್ (412), ಸಿ.ಟಿ.ಶಿಲ್ಪಾನಾಗ್ (434), ಬಿ.ಆರ್.ವರುಣ್ (590), ರಕ್ಷಿತಾ ಕೆ.ಮೂರ್ತಿ (668), ಕೆ.ಪಿ.ಪ್ರದೀಪ್ (725), ಜೆ.ಲೋಹಿತೇಶ್ವರ್ (783), ಮಂಜುನಾಥ್ ಕನಮಡಿ (900), ಕಲ್ಮೇಶ್ ಸಿಂಗಣ್ಣವರ (937). ಇವರೆಲ್ಲ ಜೆಎಸ್‌ಎಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದವರಾಗಿದ್ದಾರೆ. ಇದಲ್ಲದೆ ಸುಮನ್ ಡಿ.ಪೆನ್ನೆಕಾರ್ (126), ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬೆಳ್ತಂಗಡಿಯ ಅನೂಪ್ ಶೆಟ್ಟಿ (140), ಜಿ.ಲಕ್ಷ್ಮೀಶ (275), ಎಸ್.ಎ.ವಿಜಯಕುಮಾರ್ (432), ವಿವೇಕ್ (642), ಡಾ.ಅಮಿತಾ (468), ಚಂದ್ರಶೇಖರ ನಾಯಕ (470), ಸಂದೀಪ್ ವಿಶ್ವನಾಥ ಸೊಂಟಕ್ಕೆ (643), ರಾಹುಲ್ ರಾಯಚೂರು (659), ಬಿ.ಅರುಣ್ (675), ಸಾಮ್ರಾಟ್ ಗೌಡ (739), ವಿಕ್ರಮ್ ದೊಡ್ಡಮನಿ (957), ಕೆ.ಕಿರಣ್‌ಕುಮಾರ್ (974) ಡಾ.ಕೆ.ಲಕ್ಷ್ಮಿ (805) ರ್‍ಯಾಂಕ್ ಪಡೆದಿದ್ದಾರೆ.
ಆರ್.ಯಶಸ್, ಪ್ರೀತ್ ಗಣಪತಿ, ಡಾ.ಎ.ಜೆ.ಅಮಿತಾ, ಬಿ.ಆರ್.ವರುಣ್, ವಿವೇಕ್, ಲೋಹಿತೇಶ್ವರ್, ಬಿ.ಅರುಣ್, ಲಕ್ಷ್ಮೀಶ, ಕೆ.ಕಿರಣ್‌ಕುಮಾರ್ ಅವರು ಸ್ಪರ್ಧಾಚೈತ್ರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ಇವರಲ್ಲಿ ಕೆಲವರು ಸಂದರ್ಶನಕ್ಕೆ ಜೆಎಸ್‌ಎಸ್ ತರಬೇತಿ ಕೇಂದ್ರದಲ್ಲಿ ಮಾರ್ಗದರ್ಶನ ಪಡೆದಿದ್ದಾರೆ ಎಂದು ಸ್ಪರ್ಧಾಚೈತ್ರ ಕೇಂದ್ರದ ಸಂಯೋಜಕ ಹರಿಪ್ರಸಾದ್ ತಿಳಿಸಿದರು.
ಮಗಳ ಸಾಧನೆಗೆ ಅಪ್ಪನ ಮೆಚ್ಚುಗೆ
ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಆರ್.ಸ್ನೇಹಲ್ 4ನೇ ಪ್ರಯತ್ನದಲ್ಲಿ ಐಎಎಸ್‌ಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ 789ನೇ ರ್‍ಯಾಂಕ್ ಪಡೆದಿದ್ದ ಅವರು ಇಂಡಿಯಾ ಪೋಸ್ಟ್ ಅಂಡ್ ಟೆಲಿಕಮ್ಯೂನಿಕೇಷನ್‌ನಲ್ಲಿ ಗ್ರೂಪ್ `ಎ' ಹುದ್ದೆ ದೊರೆತಿತ್ತು. ಛಲಬಿಡದ ಅವರು ಮತ್ತೊಮ್ಮೆ ಪರೀಕ್ಷೆ ಬರೆದು ನಿರೀಕ್ಷೆಗೂ ಮೀರಿದ (77ನೇ) ರ್‍ಯಾಂಕ್ ಪಡೆದಿದ್ದಾರೆ ಎಂದು ತಂದೆ ಪ್ರೊ.ಎ.ಎಸ್.ರಾಯಮಾನೆ ಸಂತಸ ವ್ಯಕ್ತಪಡಿಸಿದರು.
ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದವರಾದ ಸ್ನೇಹಲ್ ಅವರು ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ, ಪ್ರೌಢಶಿಕ್ಷಣವನ್ನು ಉಳ್ಳಾಲದಲ್ಲಿ ಪಡೆದರು. ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ ಪಿಯುಸಿ, ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ (ಮನಃಶಾಸ್ತ್ರ) ಪಡೆದಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗಿ ಮೂರು ವರ್ಷಗಳ ಕಾಲ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪರೀಕ್ಷೆ ಎದುರಿಸಿ, ಕಳೆದ ವರ್ಷ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದರು.
ಅದೇ ವೇಳೆಗೆ ಯುಪಿಎಸ್‌ಸಿಯಿಂದ ಗ್ರೂಫ್ ಎ ಹುದ್ದೆಗೆ ಆಯ್ಕೆಯಾದ ಕಾರಣ, ಸಹಾಯಕ ಆಯುಕ್ತರ ಹುದ್ದೆ ಕೈಬಿಟ್ಟರು. ಇಂಡಿಯಾ ಪೋಸ್ಟ್ ಹುದ್ದೆ ಆಯ್ಕೆ ಮಾಡಿಕೊಂಡಿರುವ ಸ್ನೇಹಲ್ ಅವರು ಸದ್ಯ ಲಡಾಕ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ರಾಯಮಾನೆ ತಿಳಿಸಿದರು. ಸ್ನೇಹಲ್ ತಾಯಿ ತಾರಾಬಾಯಿ ವಾಘಮೋರೆ ಪ್ರಾಥಮಿಕ ಶಾಲಾ ಶಿಕ್ಷಕಿ. `ನಮ್ಮ ಪುತ್ರಿ ಇಷ್ಟೊಂದು ದೊಡ್ಡಮಟ್ಟದ ಸಾಧನೆ ಮಾಡುತ್ತಾಳೆ ಎಂದು ನಿರೀಕ್ಷಿರಲಿಲ್ಲ' ಎಂದು ಹರ್ಷ ವ್ಯಕ್ತಪಡಿಸಿದರು.
ಪತಿಯೇ ಪ್ರೇರಣೆ - ಶಿಲ್ಪಾನಾಗ್
`ಇದು ನನ್ನ ಮೂರನೇ ಪ್ರಯತ್ನ. 300ರ ಒಳಗೆ ರ್‍ಯಾಂಕ್ ಬಂದಿದ್ದರೆ ಚೆನ್ನಾಗಿತ್ತು. ಆದರೂ ಪರವಾಗಿಲ್ಲ. ಐಆರ್‌ಎಸ್ ಹುದ್ದೆ ದೊರೆಯುವ ವಿಶ್ವಾಸವಿದೆ. ಮತ್ತೊಂದು ಅವಕಾಶ ಇರುವುದರಿಂದ ಮತ್ತೆ ಪರೀಕ್ಷೆ ಬರೆಯುತ್ತೇನೆ' ಎನ್ನುತ್ತಾರೆ 434ನೇ ರ್‍ಯಾಂಕ್ ಪಡೆದಿರುವ ಶಿಲ್ಪಾನಾಗ್. ಎಂಬಿಎ ಪದವೀಧರೆ ಆಗಿರುವ ಅವರಿಗೆ ಉಪನ್ಯಾಸಕರಾಗಿರುವ ಪತಿ ಶಂಕರಲಿಂಗ ಅವರೇ ಪ್ರೇರಣೆ. `ಮದುವೆ ಆದ ನಂತರ ಇಷ್ಟಕ್ಕೇ ಜೀವನ ಮುಗಿಯಿತು ಎಂದು ಸುಮ್ಮನಾಗದೆ ಪತಿಯ ಸಲಹೆಯಂತೆ ಪರೀಕ್ಷೆ ತೆಗೆದುಕೊಂಡು ಯಶಸ್ವಿಯಾಗಿದ್ದೇನೆ' ಎಂದು ಹರ್ಷ ವ್ಯಕ್ತಪಡಿಸಿದರು. `ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ ವಿಷಯವನ್ನು ತೆಗೆದುಕೊಂಡಿದ್ದೆ. ನನಗೆ ಆರು ವರ್ಷದ ಮಗ ಇದ್ದಾನೆ. ಕುಟುಂಬದ ನಿಹಣೆ ಜೊತೆಗೆ ಪರೀಕ್ಷೆಯಲ್ಲೂ ಯಶಸ್ವಿಯಾಗಿರುವುದು ಖುಷಿ ತಂದಿದೆ. ಇದು ಇತರರಿಗೆ ಪ್ರೇರಣೆಯಾಗಲಿದೆ ಎಂದರೆ ತಪ್ಪಾಗಲಾರದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.