ಬೆಂಗಳೂರು: ವಿಶ್ವಪರಂಪರೆ ಪಟ್ಟಿಗೆ ರಾಜ್ಯದ ಪಶ್ಚಿಮ ಘಟ್ಟಗಳನ್ನು ಸೇರಿಸಲು ಸರ್ಕಾರ ವಿಳಂಬ ಮಾಡಿದ್ದಕ್ಕೆ ಕಾರಣ, ಆ ಬಗ್ಗೆ ಇರುವ ಮಾಹಿತಿ ಕೊರತೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಮಹಾ ನಿರ್ದೇಶಕ (ವನ್ಯಜೀವಿ) ಜಗದೀಶ್ ಕಿಶ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಗುರುವಾರ ನಡೆದ ಪಶ್ಚಿಮ ಘಟ್ಟಗಳ ನಿರ್ವಹಣಾ ಸಮಿತಿ ಸಭೆಯ ಬಳಿಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಪಶ್ಚಿಮ ಘಟ್ಟ ಸೇರ್ಪಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸೇರ್ಪಡೆಯ ಬಗೆಗಿನ ತಿಳಿವಳಿಕೆಯ ಕೊರತೆಯಿಂದ. ಈ ಬಗ್ಗೆ ಮನವೊಲಿಸಲು ಕೇಂದ್ರ ಸರ್ಕಾರ ಯತ್ನಿಸಿದ್ದರೂ ಅದು ಫಲ ನೀಡದೇ ಇರುವುದು ಇದೇ ಕಾರಣದಿಂದ~ ಎಂದರು.
`ಮೊದಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿವಳಿಕೆಯನ್ನು ನೀಡುವ ಸಲುವಾಗಿ ಸಭೆಯನ್ನು ಏರ್ಪಡಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಮಾತುಕತೆ ನಡೆಸಲು ವೇದಿಕೆಯನ್ನು ಸಿದ್ಧಗೊಳಿಸುವುದೂ ಸಹ ಸಭೆಯ ಉದ್ದೇಶವಾಗಿತ್ತು~ ಎಂದು ಹೇಳಿದರು.
`ಪಶ್ಚಿಮಘಟ್ಟಗಳನ್ನು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸುವುದರಿಂದ ಹೆಚ್ಚುವರಿ ನಿರ್ಬಂಧ ವಿಧಿಸಲಾಗುತ್ತದೆ ಎಂಬ ರಾಜ್ಯ ಸರ್ಕಾರದ ಗ್ರಹಿಕೆ ನಿರಾಧಾರವಾಗಿದ್ದು, ಈ ಬಗ್ಗೆ ಸರ್ಕಾರದ ಮನವೊಲಿಸುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಮಾಡಲಿದೆ~ ಎಂದು ಭರವಸೆ ನೀಡಿದರು.
`ಈ ಸಭೆಯಲ್ಲಿ ಅಧಿಕಾರಿಗಳು ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ. ನಂತರ ಅರಣ್ಯ ಇಲಾಖೆಯ ಕಾರ್ಯದರ್ಶಿಗಳ ಮನ ವೊಲಿಸಲಾಗುವುದು~ ಎಂದರು.
2012ರಲ್ಲಿ ಸಭೆ ಸೇರಲಿರುವ ವಿಶ್ವಪರಂಪರೆ ಸಮಿತಿಯ ಪ್ರಶ್ನೆಗಳಿಗೆ ಕಿಶ್ವಾನ್ ಉತ್ತರಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, `ಸಮಿತಿ ಕೇಳಿದ ಪ್ರಶ್ನೆಗಳಿಗೆ ಈ ವರ್ಷದ ಒಳಗಾಗಿ ಸ್ಪಷ್ಟನೆಗಳನ್ನು ಕಳುಹಿಸಲಿದ್ದೇವೆ~ ಎಂದರು.
ಕೇಂದ್ರ ಸಚಿವೆಯಿಂದ ರಾಜ್ಯಕ್ಕೆ ಪತ್ರ
ವಿಶ್ವಪರಂಪರೆ ಪಟ್ಟಿಗೆ ರಾಜ್ಯದ ಪಶ್ಚಿಮ ಘಟ್ಟಗಳನ್ನು ಸೇರಿಸುವಂತೆ ಅಂದು ಕೇಂದ್ರ ಪರಿಸರ ಸಚಿವರಾಗಿದ್ದ ಜೈರಾಂ ರಮೇಶ್ ಅವರು ರಾಜ್ಯಕ್ಕೆ ಪತ್ರ ಬರೆದಿದ್ದರು. ಆ ನಂತರ ಇದೀಗ ಆ ಖಾತೆ ಸಚಿವೆಯಾಗಿರುವ ಜಯಂತಿ ನಟರಾಜನ್ ಅವರು ಇದೇ ಸೆ.6ರಂದು ಇದೇ ವಿಷಯ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಆ ಪತ್ರದ ಸಾರಾಂಶ ಹೀಗಿದೆ. ಜಾಗತಿಕವಾಗಿ ಒಂದು ಪ್ರದೇಶಕ್ಕೆ ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ದೊರೆಯುವುದು, ಅದನ್ನು ಸಂರಕ್ಷಣೆ ಮಾಡುವ ಅವಶ್ಯಕತೆ ಮತ್ತು ಅದರ ಮಹತ್ವವನ್ನು ತಿಳಿಸುತ್ತದೆ. ಈ ಸೇರ್ಪಡೆಯಿಂದ ಭಾರತದ ಸಾಮರ್ಥ್ಯ ಮತ್ತು ಇಂಥ ಸ್ಥಳಗಳ ಸಂರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ನಾಯಕತ್ವ ಸ್ಥಾನವನ್ನು ಭಾರತ ಗಳಿಸಿಕೊಳ್ಳಲಿದೆ.
ಈ ಸೇರ್ಪಡೆಯಿಂದಾಗಿ ಯುನೆಸ್ಕೊ ಯಾವುದೇ ಕಾನೂನುಗಳನ್ನು ನಮ್ಮ ಮೇಲೆ ಹೇರುವುದಿಲ್ಲ. ಬದಲಾಗಿ ನಮ್ಮ ದೇಶದ ಕಾನೂನುಗಳೇ ಪ್ರಧಾನವಾಗಿರುತ್ತವೆ. ಈ 39 ಸ್ಥಳಗಳಲ್ಲಿರುವ ಬುಡಕಟ್ಟು ಸಮುದಾಯಕ್ಕೆ ಇದರಿಂದ ಯಾವುದೇ ಧಕ್ಕೆಯೂ ಆಗುವುದಿಲ್ಲ. ಆದ್ದರಿಂದ ದೇಶದ 39 ಸ್ಥಳಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ನಿಮ್ಮ ತುಂಬು ಹೃದಯದ ಸಹಕಾರವನ್ನು ಬಯಸುತ್ತೇವೆ~ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಜೈರಾಂ ರಮೇಶ್ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿದ್ದ ಪತ್ರದಲ್ಲಿ, ರಾಜ್ಯ ಸರ್ಕಾರದ ನಿರ್ಧಾರದಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮುಜುಗರದ ಸನ್ನಿವೇಶ ಉಂಟಾಗಲಿದೆ ಎಂದು ಕಟುವಾಗಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.