ADVERTISEMENT

ರೂ. 1 ಲಕ್ಷ ಲಂಚ ಸಿಕ್ಕಿಬಿದ್ದ ಜಡ್ಜ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 20:16 IST
Last Updated 23 ಡಿಸೆಂಬರ್ 2014, 20:16 IST

ಬೀದರ್: ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಕುರಿತ ವಿವಾದ ಪ್ರಕರಣದಲ್ಲಿ ಅರ್ಜಿ­ದಾರರ ಪರ ತೀರ್ಪು ನೀಡುವ ಭರ­ವಸೆ ನೀಡಿ ರೂ. 1 ಲಕ್ಷ ಲಂಚ ತೆಗೆದು­ಕೊಳ್ಳುತ್ತಿದ್ದ  ಬಸವ­ಕಲ್ಯಾಣ ಅಧೀನ ಕೋರ್ಟ್‌ನ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾ­ಧೀಶ ಶರಣಪ್ಪ ಸಜ್ಜನ್‌ ಅವರು ಸೋಮ­ವಾರ ಸಂಜೆ 7 ಗಂಟೆಗೆ ಹೈಕೋರ್ಟಿನ ಜಾಗೃತ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಬಸವಕಲ್ಯಾಣ ತಾಲ್ಲೂಕು ಹುಲ­ಸೂರಿನ ಗುರುಬಸವೇಶ್ವರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಕುರಿತಂತೆ ಕಾಶೀನಾಥ ವೀರ­ಭದ್ರಪ್ಪ ಪೋಸ್ತೆ ಮತ್ತು ಶಿವಾನಂದ ಸ್ವಾಮೀಜಿ ಅವರ ನಡುವೆ ವ್ಯಾಜ್ಯ ನಡೆ­ಯುತ್ತಿದೆ. ಈ ಪ್ರಕರಣದಲ್ಲಿ ಅರ್ಜಿ­ದಾರರ ಪರ ಅವರ ಪುತ್ರ ಕೀರ್ತಿರಾಜ ಪೋಸ್ತೆ ಅವರೇ ವಕಾಲತ್ತು ವಹಿಸಿದ್ದರು.

‘ನ್ಯಾಯಾಧೀಶರು ರೂ. 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನ್ಯಾಯಾಧೀಶರ ಸೂಚನೆಯ ಮೇರೆಗೆ ಬಸವ­ಕಲ್ಯಾಣದ ಬಸವಣ್ಣ­ನವರ ಮೂರ್ತಿ ಬಳಿ ಹಣದ ಜತೆಗೆ ತೆರಳಿದ್ದೆ’.

ನ್ಯಾಯಾಧೀಶರು ತಮ್ಮದೇ ಖಾಸಗಿ ಕಾರಿನಲ್ಲಿ ಬಂದು ಕಾಯು­ತ್ತಿದ್ದರು. ಒಬ್ಬರೇ ಇದ್ದರು. ಅವರಿಗೆ ರೂ. 1 ಲಕ್ಷ ಹಣ ನೀಡಿದೆ. ಮುಂಚೆಯೇ ದೂರು ನೀಡಿದ್ದರಿಂದ ಸನಿಹದಲ್ಲಿದ್ದ ಹೈಕೋರ್ಟಿನ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದರು’ ಎಂದು ಕೀರ್ತಿರಾಜ ಪೋಸ್ತೆ ಹೇಳಿದರು.

ಮಂಗಳವಾರ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ಅವರು, ‘ನ್ಯಾಯಾಧೀಶರ ಪರವಾಗಿ ಮಧ್ಯವರ್ತಿಗಳಾಗಿ ಮೊದಲು ಕೌಶಿಕ್‌ ಜಹಗೀರ್‌ದಾರ್‌ ಮತ್ತು ಬಾಬುರಾವ್‌ ಎಂಬವರು ನನ್ನ ತಂದೆಯನ್ನು ಸಂಪರ್ಕಿಸಿ ಹಣ ನೀಡಲು ಕೋರಿದ್ದರು. ಬಳಿಕ, ನಿಮ್ಮ ತಂದೆಗೆ ವಯಸ್ಸಾಗಿದೆ. ಅವರಿಗೆ ವಿಚಾರ ಅರ್ಥವಾಗುವುದಿಲ್ಲ. ನೀನೇ ನೇರವಾಗಿ ನನ್ನನ್ನು ಸಂಪರ್ಕಿಸು ಎಂದು ಸ್ವತಃ  ನ್ಯಾಯಾ­ಧೀಶರೇ ತಿಳಿಸಿದ್ದರು’ ಎಂದು ಕೀರ್ತಿರಾಜ ವಿವರಿಸಿದರು.

‘ನ್ಯಾಯಾಧೀಶರು ಮಧ್ಯವರ್ತಿಗಳ ಮೂಲಕ ಹಣ ನೀಡುವಂತೆ ಸೂಚಿಸು­ತ್ತಿದ್ದಾರೆ ಎಂದು ಇದಕ್ಕೂ ಮುನ್ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ಲಿಖಿತ ದೂರು ಸಲ್ಲಿಸಿದ್ದೆ. ಅವರು ದೂರನ್ನು ಹೈಕೋರ್ಟಿನ ಜಾಗೃತ ದಳಕ್ಕೆ ಬೆಂಗ­ಳೂರಿಗೆ ಕಳುಹಿಸಿಕೊಟ್ಟಿದ್ದರು. ಜಾಗೃತ ದಳದ ಅಧಿಕಾರಿಗಳು ಬಳಿಕ ಈ ಕುರಿತು ನನ್ನನ್ನು ಸಂಪರ್ಕಿಸಿ ಹೆಚ್ಚಿನ ವಿವರ ಪಡೆ­ದಿದ್ದರು’ ಎಂದು ಮಾಹಿತಿ ನೀಡಿದರು.

ಮೊಬೈಲ್‌ ಕರೆ: ಹೈಕೋರ್ಟಿನ ಜಾಗೃತದಳದ ಡಿವೈಎಸ್‌ಪಿ ರಾಮಲಿಂಗೇಗೌಡ ನೇತೃತ್ವ­ದಲ್ಲಿ ಸುಮಾರು 5–6 ಮಂದಿಯ ತಂಡ ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿತ್ತು. ಜಾಗೃತದಳದ ಸಿಬ್ಬಂದಿ ಮೊದಲು ಹಣದ ಕಟ್ಟು, ನೋಟಿನ ಸಂಖ್ಯೆಗಳನ್ನು ಪರಿಶೀಲಿಸಿದ್ದರು.

ಹಣದ ಕಟ್ಟು ನೀಡಿದ ಬಳಿಕ ಅದರ ಮಾಹಿತಿ ನೀಡುವುದರ ಸೂಚನೆಯಾಗಿ ನಾನು ಹಾಕಿದ್ದ ಟೋಪಿಯನ್ನು ಒಮ್ಮೆ ತೆಗೆದು, ಹಾಕಿಕೊಳ್ಳಬೇಕು ಎಂದು ತಿಳಿಸಿದ್ದರು. ಆದರೆ, ಹಣ ನೀಡಿದ ಅವಧಿಯಲ್ಲಿ ಕತ್ತಲು ಆವರಿಸಿತ್ತು. ನ್ಯಾಯಾಧೀಶರ ಕಾರಿನಲ್ಲಿಯೇ ಕುಳಿತು ಹಣ ನೀಡಿದ್ದರಿಂದ ಟೋಪಿ ತೆಗೆದು ಹಾಕಿ­ದರೂ ಜಾಗೃತ ದಳದ ಅಧಿಕಾರಿಗಳಿಗೆ ತಿಳಿಯುವ ಸಾಧ್ಯತೆ ಕಡಿಮೆ ಇತ್ತು. ಹಾಗಾಗಿ ಉಪಾಯ­ದಿಂದ ಕರೆ ಮಾಡಿ ಅವರಿಗೆ ಮಾಹಿತಿ ಮುಟ್ಟಿಸಿದೆ ಎಂದರು.

‘ನಾನು ನೀಡಿದ ಹಣದ ಕಟ್ಟನ್ನು ಪಡೆದ ನ್ಯಾಯಾಧೀಶರು ನೋಟು ಎಣಿಸದೇ ಅದನ್ನು ಸೀಟಿನ ಮೇಲೆ ಪಕ್ಕಕ್ಕೆ ಇಟ್ಟುಕೊಂಡಿದ್ದರು’ ಎಂದು ಕೀರ್ತಿರಾಜ ತಿಳಿಸಿದರು.

ಪ್ರಕರಣದ ವಿವರ: ಹುಲಸೂರಿನ ಗುರುಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಶೀನಾಥ ವೀರಭದ್ರಪ್ಪ ಪೋಸ್ತೆ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅಧಿಕಾರಿಗಳ ಬೆಂಬಲ ಪಡೆದು ಶಿವಾನಂದ ಸ್ವಾಮೀಜಿ ಎಂಬವರು ಆಡಳಿತ ಮಂಡಳಿಯ ಸದಸ್ಯರಲ್ಲ­ದಿದ್ದರೂ ಅಧ್ಯಕ್ಷ­ರಾಗಿ ನೇಮಕ­ಗೊಂಡಿದ್ದರು. ಇದನ್ನು ಪ್ರಶ್ನಿಸಿ ಕಾಶೀನಾಥ ಅವರು ದಾವೆ ಹೂಡಿದ್ದು, ಪ್ರಕರಣ ವಿಚಾರಣೆಯಲ್ಲಿತ್ತು.

ಅರ್ಜಿದಾರ ಕಾಶೀನಾಥ ಪೋಸ್ತೆ ಅವರು ಮಾತನಾಡಿ, ‘ಈ ಪ್ರಕರಣದ ಸಂಬಂಧ ನನಗೆ ಜೀವ ಬೆದರಿಕೆಯೂ ಇತ್ತು. ಶಿಕ್ಷಣ ಸಂಸ್ಥೆ ಹೆಸರಿನಲ್ಲಿರುವ ಭೂಮಿಯನ್ನು ಮಠಕ್ಕೆ ಬರೆದುಕೊಡು ಎಂದು ಒತ್ತಾಯಿಸಿದಾಗ ನಿರಾಕರಿಸಿದ್ದೆ. ನಾನು ನೇಮಿಸಿದ ವಕೀಲರ ಜೊತೆಗೇ ಪ್ರತಿವಾದಿಗಳು ಮಾತಾಡುತ್ತಾರೆ ಎಂದು ಅರಿತಾಗ, ಮಗನನ್ನೇ ವಕೀಲನಾಗಿ ಮಾಡಿದೆ’ ಎಂದು ಹೇಳಿದರು. ಈ ಪ್ರಕರಣವು 1986–87ರಿಂದಲೇ ನ್ಯಾಯಾಲಯ­ದಲ್ಲಿ ವಿಚಾರಣೆ­ಯಲ್ಲಿದೆ.

ರಿಜಿಸ್ಟ್ರಾರ್‌ಗೆ ವರದಿ ರವಾನೆ
ಈ ಕುರಿತು ಸಂಪರ್ಕಿಸಿದಾಗ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾ­ಧೀಶರಾದ ಸಂಜೀವ್‌­ಕುಮಾರ್‌ ಹಂಚಾಟೆ ಅವರು ಪ್ರಕರಣ ದೃಢಪಡಿ­ಸಿದ್ದಾರೆ. ಹೈಕೋರ್ಟ್‌ನ ವಿಚಕ್ಷಣಾ ದಳದ ರಿಜಿಸ್ಟ್ರಾರ್‌ ಅವರಿಗೆ ವರದಿ ಕಳಿಸಲಾಗಿದೆ. ಲಂಚ ಪಡೆದಿರುವ ನ್ಯಾಯಾಧೀಶ ಸಜ್ಜನ್‌ ಅವರು ರಾಜೀನಾಮೆ ಸಲ್ಲಿಸಿದ್ದು, ಅದನ್ನೂ ಹೈಕೋರ್ಟ್‌ಗೆ ರವಾನಿಸಲಾಗಿದೆ  ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT