ಹೊಳೆನರಸಿಪುರ (ಹಾಸನ ಜಿಲ್ಲೆ): ಸ್ಥಳೀಯ ಶಾಸಕರು ಯಾರೆಂದು ಗೊತ್ತಿಲ್ಲದೆ ಹೊಳೆನರಸಿಪುರ ಕ್ಷೇತ್ರದ ಉದ್ದಗಲಕ್ಕೆ ಅಡ್ಡಾಡಿದ ಅಪರಿಚಿತರು ಅಲ್ಲಿನ ಶಾಸಕರನ್ನು ಮರು ಆಯ್ಕೆ ಮಾಡುವಂತೆ ಮತದಾರರಿಗೆ ಶಿಫಾರಸು ಮಾಡಲೂ ಬಹುದು. ಪಟ್ಟಣದಲ್ಲಿ ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿಯೂ ಕಾಂಕ್ರೀಟು ರಸ್ತೆಗಳು, ವಿದ್ಯುತ್ ಸಬ್‌ಸ್ಟೇಷನ್‌ಗಳು, ಸುಸಜ್ಜಿತ ಆಸ್ಪತ್ರೆ, ನರ್ಸಿಂಗ್‌ನಿಂದ ಪಾಲಿಟೆಕ್ನಿಕ್ ವರೆಗೆ,ಕಾನೂನಿನಿಂದ ಗೃಹವಿಜ್ಞಾನದ ವರೆಗೆ ಶಿಕ್ಷಣ ಸಂಸ್ಥೆಗಳು, ಕ್ಷೇತ್ರದ ಬಹಳಷ್ಟು ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗ... ಇನ್ನೇನು ಬೇಕು?
ಒಂದು ವಿಧಾನಸಭಾ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬಹುದೆಂಬುದಕ್ಕೆ ಹೊಳೆನರಸಿಪುರ ಮಾದರಿಯಂತಿದೆ. ಇಷ್ಟೆಲ್ಲ ಅಭಿವೃದ್ಧಿಯ ಚಿತ್ರವನ್ನು ನೋಡಿ ಸಂಭ್ರಮ ಪಟ್ಟವರ ಅಭಿಪ್ರಾಯ ಇಲ್ಲಿನ ಶಾಸಕರ ಹೆಸರು ಹರದನಹಳ್ಳಿ ದೇವೇಗೌಡ ರೇವಣ್ಣ ಎಂದು ಗೊತ್ತಾದ ಕೂಡಲೇ ಬದಲಾಗಲೂಬಹುದು.
ತಪ್ಪು ರೇವಣ್ಣ ಅವರದ್ದಲ್ಲ, ದೊಡ್ಡ ರಾಜಕೀಯ ಕುಟುಂಬದಿಂದ ಬಂದ ವ್ಯಕ್ತಿಯ ಹೆಗಲಮೇಲೆ ಆ ಪರಂಪರೆಯ ಹೊರೆ ಇದ್ದೇ ಇರುತ್ತದೆ. ರೇವಣ್ಣ ಅವರು ಹೊಳೆನರಸಿಪುರದ ಶಾಸಕ ಎನ್ನುವುದಕ್ಕಿಂತಲೂ ಮುಖ್ಯವಾಗಿರುವುದು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತಮ್ಮ ಎನ್ನುವುದು.
ಆದುದರಿಂದ ಎಲ್ಲರೂ ಅದೇ ವಂಶಪರಂಪರೆಯ ಕನ್ನಡಕದಲ್ಲಿಯೇ ಅವರನ್ನು ನೋಡುತ್ತಾರೆ. ಮತಹಾಕುವವರ ತಲೆಯಲ್ಲಿ ರೇವಣ್ಣ ಮಾತ್ರ ಇಲ್ಲ ಇಡೀ ದೇವೇಗೌಡರ ಕುಟುಂಬ ಇರುತ್ತದೆ. ಹೊಳೆನರಸಿಪುರ ಎಂಬ ವಿಧಾನಸಭಾ ಕ್ಷೇತ್ರ ಎನ್ನುವುದು ಒಂದು ರೀತಿ ಇಂದಿರಾಗಾಂಧಿ ಕುಟುಂಬಕ್ಕೆ ರಾಯಬರೇಲಿ ಎಂಬ ಲೋಕಸಭಾ ಕ್ಷೇತ್ರ ಇದ್ದ ಹಾಗೆ.
ಸ್ವಾತಂತ್ರ್ಯಾನಂತರ ಈ ಕ್ಷೇತ್ರದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ನಾಲ್ಕು ಬಾರಿ ಬಿಟ್ಟರೆ ಉಳಿದೆಲ್ಲ ಸಲ ಗೆದ್ದದ್ದು ದೇವೇಗೌಡರ ಕುಟುಂಬ. ದೇವೇಗೌಡರು ಆರುಬಾರಿ ಮತ್ತು ರೇವಣ್ಣ ಮೂರು ಬಾರಿ ಗೆದ್ದಿದ್ದಾರೆ. ರಾಜಕೀಯ ಪ್ರವೇಶದ ಪ್ರಾರಂಭದಲ್ಲಿ ದೇವೇಗೌಡರು ಪಕ್ಷೇತರರಾಗಿ ಇಲ್ಲಿ ಎರಡು ಬಾರಿ ಗೆದ್ದಿದ್ದರು.
ಇಷ್ಟು ಸುರಕ್ಷಿತವಾಗಿದ್ದ ಕ್ಷೇತ್ರವನ್ನು ರೇವಣ್ಣ ಅವರು ಬೆಂಗಳೂರಿನಲ್ಲಿಯೇ ಕೂತು ಗೆಲ್ಲಬೇಕಾಗಿತ್ತು. ಆದರೆ ಅವರು ಪತ್ನಿ ಮತ್ತು ಮಗನ ಜತೆ ಬಂದು ಇಲ್ಲಿ ರಾತ್ರಿಹಗಲು ಬೆವರು ಸುರಿಸುತ್ತಿದ್ದಾರೆ. `ಚುನಾವಣೆಯ ಕಾಲದಲ್ಲಿ ಮಾತ್ರವಲ್ಲ ಬಾಕಿ ದಿನಗಳಲ್ಲಿಯೂ ವಾರಕ್ಕೆರಡು ದಿನ ತಪ್ಪದೆ ಇಲ್ಲಿಗೆ ಬರುತ್ತೇನೆ' ಎಂದರು ಹೊಳೆನರಸಿಪುರದ ತಮ್ಮ ಮನೆಯಲ್ಲಿ ಕೂತಿದ್ದ ರೇವಣ್ಣ. ಪತ್ನಿ ಭವಾನಿ ಪಕ್ಷದ ಕಾರ್ಯಕರ್ತರನ್ನು ಉಪಚರಿಸುತ್ತಾ ಮನೆ ತುಂಬಾ ಓಡಾಡುತ್ತಿದ್ದರು.
ಇವರನ್ನು ಕಾಡುತ್ತಿರುವ ಅಸುರಕ್ಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಕ್ಷೇತ್ರದ ರಾಜಕೀಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಅಭಿವೃದ್ಧಿಯ ವಿಷಯ ಈಗಲೂ ಇಲ್ಲಿ ಚುನಾವಣಾ ಚರ್ಚಾ ವಸ್ತು ಅಲ್ಲ. ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಅಭ್ಯರ್ಥಿಗಳಾಗಿರುವ ರೇವಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್.ಜಿ. ಅನುಪಮ ಕೂಡಾ ಪ್ರಧಾನ ಪಾತ್ರಧಾರಿಗಳಲ್ಲ. ಇವರಿಬ್ಬರ ಹಿನ್ನೆಲೆಯಲ್ಲಿ ಕ್ರಮವಾಗಿ ಅವರಿಬ್ಬರ ಅಪ್ಪ ಮತ್ತು ಮಾವನ ರಾಜಕೀಯದ ನೆರಳಿದೆ.
ಪುಟ್ಟಸ್ವಾಮಿಗೌಡರು ಜೀವಂತ ಇರುವ ವರೆಗೆ ಹೊಳೆನರಸಿಪುರ ಕ್ಷೇತ್ರದಲ್ಲಿ ದೇವೇಗೌಡರ ಏಕಚಕ್ರಾಧಿಪತ್ಯಕ್ಕೆ ಸವಾಲೊಡ್ಡುತ್ತಲೇ ಇದ್ದವರು. ಪ್ರಾರಂಭದ ದಿನದ ಸ್ನೇಹವನ್ನು ಕಡಿದುಕೊಂಡು ದೇವೇಗೌಡರಿಂದ ಅವರು ದೂರವಾದ ನಂತರ ಈ ಕ್ಷೇತ್ರದ ಚುನಾವಣೆ ಎಂದರೆ ಇಬ್ಬರು ಗೌಡರ ನಡುವಿನ ಕಾಳಗ ಎಂದೇ ಪರಿಗಣಿಸಲಾಗುತ್ತಿತ್ತು. ಈಗ ಅಪ್ಪನ ಪರವಾಗಿ ಮಗ, ಮಾವನ ಪರವಾಗಿ ಸೊಸೆ ಕದನ ಕಣದಲ್ಲಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡುವವರು ಅನುಪಮಾ ಅವರಿಗಿಂತ ಹೆಚ್ಚಾಗಿ ಪುಟ್ಟಸ್ವಾಮಿಗೌಡರ ಹೆಸರು ಕೂಗಿ ಜೈಕಾರ ಹಾಕುತ್ತಿರುವುದು ಮತ್ತು ರೇವಣ್ಣ ಮಾತೆತ್ತಿದರೆ `ದೊಡ್ಡಗೌಡರ' ನಾಮಸ್ಮರಣೆ ಮಾಡುವುದು ಇದೇ ಕಾರಣಕ್ಕಾಗಿ.
ಪುಟ್ಟಸ್ವಾಮಿಗೌಡರ ಸಾವಿನ ನಂತರ ಗೌಡರ ಕಾಳಗದಲ್ಲಿ ದೇವೇಗೌಡ ಕುಟುಂಬ ಕೈ ಮೇಲಾಗಿರುವುದು ಸ್ಪಷ್ಟ. ಮಾವನನ್ನು ಮಾತ್ರವಲ್ಲ ಗಂಡನನ್ನೂ ಕಳೆದುಕೊಂಡ ಅನುಪಮಾ ಅವರ ಪರವಾಗಿ ಅನುಕಂಪದ ಅಲೆಯ ಜತೆಗೆ ಪುಟ್ಟಸ್ವಾಮಿಗೌಡರ ಕಟ್ಟಾ ಬೆಂಬಲಿಗರ ಪಡೆ ಇರುವುದು ನಿಜ. ಆದರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಕಾಣಿಸುತ್ತಿಲ್ಲ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗಂಡಸಿ ಶಿವರಾಂ ಅವರು ಅನುಪಮಾ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದವರಲ್ಲ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಆಗಿರುವ ನಿರಾಶೆ ಅವರ ಗೈರುಹಾಜರಿಯಲ್ಲಿ ಕಾಣುತ್ತಿದೆ. ಇಷ್ಟೆಲ್ಲ ಪ್ರತಿಕೂಲ ಅಂಶಗಳ ನಡುವೆಯೂ ಅನುಪಮಾ ಮಾವನ ಸಾವಿನ ನಂತರದ ದಿನಗಳಲ್ಲಿ ಗೌಡರ ಕುಟುಂಬದ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದಾರೆ.
`ರೇವಣ್ಣ ಬೆಂಬಲಿಗರು ಕಟ್ಟಾ ನಿಷ್ಠಾವಂತರು ಎನ್ನುವ ಹಾಗಿಲ್ಲ, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರೇವಣ್ಣ ಅವರ ಮಾತು ಸರ್ಕಾರದಲ್ಲಿ ಬೆಲೆ ಇರುವುದು ಗೊತ್ತಾಗಿರುವ ಕಾರಣಕ್ಕೆ ಈ ಬೆಂಬಲಿಗರು ಸುತ್ತುವರಿದಿರಬಹುದು. ಆದರೆ ಅನುಪಮಾ ಬೆಂಬಲಿಗರು ರೇವಣ್ಣ ಒಡ್ಡುತ್ತಲೇ ಇರುವ ಎಲ್ಲ ಬಗೆಯ ಆಸೆ-ಆಮಿಷಗಳನ್ನು ಮೆಟ್ಟಿನಿಂತು ಜತೆಯಲ್ಲಿರುವವರು' ಎಂದು ಹೇಳುತ್ತಾರೆ ತನ್ನನ್ನು ಪಕ್ಷಾತೀತ ಎಂದು ಹೇಳಿಕೊಂಡ ಅಗ್ರಹಾರ-ಚೋಳೇನಹಳ್ಳಿಯ ಶಿವರಾಮೇಗೌಡರು.
ರೇವಣ್ಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಇರುವ ಯಾವ ಚಿಂತೆಯೂ ಇಲ್ಲ. `ತಂದೆ-ಮಕ್ಕಳ ಪಕ್ಷ' ಎಂದೇ ವಿರೋಧಿಗಳು ಗೇಲಿ ಮಾಡುವ ಜೆಡಿ (ಎಸ್)ನಲ್ಲಿ ಕನಿಷ್ಠ ಕ್ಷೇತ್ರದ ಮಟ್ಟಿಗೆ ಅವರದ್ದೇ ಕೊನೆಮಾತು.
ದೇವೇಗೌಡರು ಹಾಸನ ಲೋಕಸಭಾ ಸದಸ್ಯರೂ ಆಗಿರುವುದರಿಂದ ಅವರ ಪರವಾಗಿರುವ ಮತಗಳೂ ಕೂಡಾ ರೇವಣ್ಣ ಬುಟ್ಟಿಗೆ ಬಂದು ಬೀಳಬಹುದು. ಆದರೆ ಅಣ್ಣ ಕುಮಾರಸ್ವಾಮಿ ಅವರಂತೆ ರೇವಣ್ಣ ಅವರದ್ದು ಜನಪ್ರಿಯ ರಾಜಕಾರಣದ ಕಾರ್ಯಶೈಲಿ ಅಲ್ಲ. ಪಕ್ಷದ ಕಾರ್ಯಕರ್ತರು, ನಾಯಕರು ಯಾರೇ ಇರಲಿ ಯಾರೂ ರೇವಣ್ಣ ಮುಂದೆ ಕೂರುವ ಹಾಗಿಲ್ಲ, ಕೈಕಟ್ಟಿಕೊಂಡು ನಿಲ್ಲಲೇ ಬೇಕು. ಇದು ಕುಮಾರಸ್ವಾಮಿಯವ `ಬ್ರದರ್' ರಾಜಕೀಯದಿಂದ ಭಿನ್ನ.
ಮುಖಚಹರೆ, ದೇಹದ ಅಂಗಾಂಗಗಳ ಮೇಲೆ ಕೈಬೆರಳುಗಳ ಚಲನೆ, ಧ್ವನಿಯ ಏರಿಳಿತದಲ್ಲಿ ಮಾತ್ರವಲ್ಲ ಕಾರ್ಯಶೈಲಿಯಲ್ಲಿಯೂ ರೇವಣ್ಣ ಅವರಿಗೆ ಅಪ್ಪನ ಹೋಲಿಕೆ ಇದೆ. ಸರ್ಕಾರಿ ಕಡತಗಳನ್ನು ಓದಿ ಗ್ರಹಿಸುವ ದೇವೇಗೌಡರ ಸೂಕ್ಷ್ಮಬುದ್ದಿ ಓದಿದ್ದು ಕಡಿಮೆಯಾದರೂ ರೇವಣ್ಣ ಅವರಲ್ಲಿಯೂ ಇದೆ. ಇದರಿಂದಾಗಿಯೇ ಸಚಿವರಾಗಿದ್ದಾಗಲೂ ಅಧಿಕಾರಿಗಳ ಮೇಲೆ ಅವರಿಗೆ ನಿಯಂತ್ರಣ ಇತ್ತು. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದದ ಆರೋಪಗಳ ಅನೇಕ ಕಡತಗಳು ಪ್ರಧಾನ ವಿರೋಧಪಕ್ಷದ ನಾಯಕರಿಗೆ ಸಿಗದೆ ರೇವಣ್ಣ ಕೈಸೇರುತ್ತಿದ್ದದ್ದಕ್ಕೆ ಕೂಡಾ ಇದು ಕಾರಣ. ಇದನ್ನೇ ಕೈಯಲ್ಲಿಟ್ಟುಕೊಂಡು ರೇವಣ್ಣ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪವೂ ಇದೆ.
`ಅಜೀರ್ಣವಾಗುವಷ್ಟು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಕ್ಷೇತ್ರದ ಮತದಾರರ ಹಿತದೃಷ್ಟಿಗಿಂತಲೂ ಹೆಚ್ಚಾಗಿ ಬೆಂಬಲಿಗ ಗುತ್ತಿಗೆದಾರರಿಗೆ ನೆರವಾಗಲು ಮಾಡಿದ್ದಾರೆ' ಎನ್ನುವುದೇ ರೇವಣ್ಣ ಅವರ ಮೇಲಿನ ಪ್ರಮುಖ ಆರೋಪ. ಸರಿಯಾಗಿರುವ ರಸ್ತೆಗಳೂ ದುರಸ್ತಿಯಾಗುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಬೀಳುತ್ತದೆ.
`ಅಭಿವೃದ್ಧಿಯ ಅಜೀರ್ಣತೆ' ಬಗ್ಗೆ ಆರೋಪಿಸುವವರು ಪಟ್ಟಣದ ಮಧ್ಯ ಹಾದುಹೋಗುವ ಹೇಮಾವತಿ ನದಿಗೆ 36 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿರುವುದನ್ನು ತೋರಿಸುತ್ತಾರೆ. `ಕಳೆದ 2-3 ದಶಕಗಳಲ್ಲಿ ಹೇಮಾವತಿ ನದಿಯಲ್ಲಿ ನೆರೆ ಬಂದಿಲ್ಲ. ಹೀಗಿದ್ದಾಗ ತಡೆಗೋಡೆ ಯಾಕೆ? ಆ ದುಡ್ಡನ್ನು ಹಳ್ಳಿಗಳಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸುತ್ತಾರೆ ರೇವಣ್ಣ ಅವರ ಪ್ರತಿಸ್ಪರ್ಧಿ ಎಸ್.ಜಿ. ಅನುಪಮಾ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕೂಡಾ ಪಕ್ಷ ರಾಜಕೀಯ ನಡೆದಿದೆ ಎಂದು ಅವರು ಆರೋಪಿಸುತ್ತಾರೆ. ವಿಚಿತ್ರವೆಂದರೆ ಅಭಿವೃದ್ಧಿ ಇಲ್ಲಿನ ಚುನಾವಣೆಯಲ್ಲಿ ಚರ್ಚೆಯಾಗುತ್ತಿರುವುದು ಅಭಿವೃದ್ಧಿ ಆಗಿಲ್ಲ ಎಂದಲ್ಲ, ಅಜೀರ್ಣವಾಗುವಷ್ಟು ಆಗಿದೆ ಎಂದು.
`ಸೋಲು-ಗೆಲುವಿನ ಬಗ್ಗೆ ಅಣ್ಣಾವ್ರ ತಲೆಕೆಡಿಸಿಕೊಂಡಿಲ್ಲ, `ಹೂ ಬಿದ್ದಾಗಿದೆ' ಅವರೇ ಗೆಲ್ಲುತ್ತಾರೆ' ಎನ್ನುತ್ತಾರೆ ಹೆಸರು ಬರೆಯಬೇಡಿ ಎಂದು ಕೇಳಿಕೊಂಡ ರೇವಣ್ಣ ಬೆಂಬಲಿಗರೊಬ್ಬರು. ದೇವೇಗೌಡರಂತೆ ರೇವಣ್ಣ ಅವರಿಗೂ ದೇವರು, ಜ್ಯೋಷಿಗಳ ಮೇಲೆ ಅಪಾರ ನಂಬಿಕೆ. ಗಳಿಗೆ-ಮುಹೂರ್ತ ನೋಡದೆ ಮನೆಯಿಂದ ಹೊರಗೆ ಕಾಲಿಡುವವರಲ್ಲ. ಅವರ ಎಲ್ಲ ಲೆಕ್ಕಾಚಾರಗಳೂ ಜ್ಯೋತಿಷಿಗಳ ಸಲಹೆ ಮೇಲೆ ನಡೆಯುವುದು. ರೇವಣ್ಣನವರು ಬೆವರು ಸುರಿಸುತ್ತಿರುವುದು ಜ್ಯೋತಿಷಿ ನುಡಿದಿರುವ ಭವಿಷ್ಯ ನಿಜಮಾಡುವುದಕ್ಕೋ, ಸುಳ್ಳುಮಾಡುವುದಕ್ಕೋ ಎಂಬುದನ್ನು ಅವರೇ ಹೇಳಬೇಕು, ಹೇಳುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.