ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಲಿಖಿತ ಪರೀಕ್ಷೆಯಲ್ಲಿಯೂ ಅಂಕಗಳ ಬದಲಾವಣೆ ಮಾಡಲಾಗಿದೆ ಎನ್ನುವುದರ ಬಗ್ಗೆಯೂ ತನಿಖೆ ನಡೆದಿದೆ.
ಲಿಖಿತ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಮೊದಲೇ ತಿಳಿದುಕೊಳ್ಳುವ, ಖಾಲಿ ಉತ್ತರ ಪತ್ರಿಕೆಗಳಿಗೂ ಅಂಕ ನೀಡುವ, ಮೌಲ್ಯಮಾಪಕರು ನೀಡಿದ ಅಂಕಗಳನ್ನು ಬದಲಾಯಿಸುವ ಕ್ರಿಯೆ ಕೂಡ ನಡೆದಿದೆ. ಇದು ಈ ಬಾರಿಯ ಪರೀಕ್ಷೆಯಲ್ಲಿ ಮಾತ್ರ ಅಲ್ಲ. ಕಳೆದ ಕೆಲವು ಪರೀಕ್ಷೆ ಸಮಯದಲ್ಲಿಯೂ ಇಂತಹ ಅವ್ಯವಹಾರಗಳು ನಡೆದಿವೆ. ಇಂತಹ ಅಕ್ರಮ ನಡೆಸಲು ಒಂದು ತಂಡವೇ ಸಕ್ರಿಯವಾಗಿದೆ. ಖಜಾನೆಯಲ್ಲಿ ಇಡುವ ಪ್ರಶ್ನೆ ಪತ್ರಿಕೆಗಳನ್ನು ಮೊದಲೇ ನೋಡಿ ಉತ್ತರಗಳನ್ನು ತಿಳಿದುಕೊಂಡು ಅಭ್ಯರ್ಥಿಗಳಿಗೆ ಸಹಾಯ ಮಾಡುವವರೂ ಇದ್ದಾರೆ. ಈ ಕಾರಣಕ್ಕಾಗಿಯೇ ಒಂದು ಕೋಣೆಯಲ್ಲಿ ಪರೀಕ್ಷೆ ಬರೆದ ಎಲ್ಲರಿಗೂ ಕೆಲಸ ಸಿಕ್ಕಿರುವ ಉದಾಹರಣೆ ಕೂಡ ಇದೆ. ತಪ್ಪು ಉತ್ತರಗಳಿಗೂ ಸರಿ ಉತ್ತರದ ಅಂಕ ನೀಡುವುದು, ವಿಷಯದ ತಜ್ಞರಲ್ಲದವರು ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡುವುದು ಕೂಡ ನಡೆದಿದೆ ಎಂದು ಕೆಪಿಎಸ್‌ಸಿ ಮೂಲಗಳೇ ಹೇಳುತ್ತವೆ.
ಖಾಲಿ ಉತ್ತರ ಪತ್ರಿಕೆಯೊಂದಕ್ಕೆ 270 ಅಂಕ ನೀಡಿದ ಉದಾಹರಣೆ ಕೂಡ ಇದೆ ಎನ್ನುತ್ತವೆ ಈ ಮೂಲಗಳು.
1998, 1999 ಮತ್ತು 2004ರ ಪರೀಕ್ಷೆಗಳಲ್ಲಿ ಕೂಡ ಇಂತಹ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆಗ ಈ ಬಗ್ಗೆ ತನಿಖೆ ನಡೆಸಿದ ಸಿಐಡಿಗೆ 1999ರ ಉತ್ತರ ಪತ್ರಿಕೆಗಳು ಸಿಗಲೇ ಇಲ್ಲ. ನೇಮಕಾತಿ ಪ್ರಕ್ರಿಯೆ ಮುಗಿದಿದ್ದರಿಂದ ಎಲ್ಲ ವನ್ನೂ ನಾಶ ಮಾಡಲಾಗಿದೆ ಎಂದು ಕೆಪಿಎಸ್‌ಸಿ ಹೇಳಿತ್ತು. 1998 ಮತ್ತು 2004ರ ಪರೀಕ್ಷೆಯ ಕೆಲವು ಉತ್ತರ ಪತ್ರಿಕೆಗಳನ್ನು ಸಿಐಡಿ ಪರಿಶೀಲಿ ಸಿತ್ತು. ನೋಂದಣಿ ಸಂಖ್ಯೆ, ಅಭ್ಯರ್ಥಿಯ ಸಹಿ ಇರುವ ಉತ್ತರ ಪತ್ರಿಕೆಯನ್ನು ಸಿಐಡಿಗೆ ನೀಡಲು ಕೆಪಿಎಸ್‌ಸಿ ವಿಫಲವಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಪ್ರಕ್ರಿಯೆ ಮುಗಿ ದಿದೆ ಎಂಬ ಕಾರಣ ನೀಡಿ ಉತ್ತರ ಪತ್ರಿಕೆ ನಾಶ ಮಾಡಿದ ಕೆಪಿಎಸ್‌ಸಿ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಸಿಐಡಿ ಶಿಫಾರಸು ಮಾಡಿತ್ತು.
ಒಂದು ಉತ್ತರ ಪತ್ರಿಕೆಯನ್ನು ಮೌಲ್ಯಮಾ ಪಕರು ಮೊದಲು ನೋಡುತ್ತಾರೆ. ನಂತರ ಅದನ್ನು ಮುಖ್ಯ ಮೌಲ್ಯಮಾಪಕರು ಪರಿಶೀಲಿಸುತ್ತಾರೆ. ಆ ನಂತರ ಅದು ಪ್ರಧಾನ ಮೌಲ್ಯಮಾಪಕರ ಬಳಿಗೆ ಹೋಗುತ್ತದೆ.
ಈ ಸಂದರ್ಭದಲ್ಲಿ ಮೌಲ್ಯಮಾಪ ಕರು ನೀಡಿದ ಅಂಕವನ್ನು ಮುಖ್ಯ ಅಥವಾ ಪ್ರಧಾನ ಮೌಲ್ಯಮಾಪಕರು ಬದಲಾವಣೆ ಮಾಡುತ್ತಾರೆ. ಮರು ಮೌಲ್ಯ ಮಾಪನ ಮಾಡಿದ ಸಂದರ್ಭದಲ್ಲಿ 20ಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ ಬಂದರೆ ಮೊದಲ ಮೌಲ್ಯಮಾಪಕರ ಅಂಕವನ್ನೇ ಪರಿಗಣಿಸ ಬೇಕು. ಆದರೆ ಬೇಕಾದವರಿಗೆ ಅಂಕಗ ಳನ್ನು ಕಡಿಮೆ ಅಥವಾ ಹೆಚ್ಚು ಮಾಡಲಾಗಿದೆ. ಇದರಿಂದ ಫಲಿ ತಾಂಶದಲ್ಲಿಯೂ ಏರುಪೇರಾಗುತ್ತವೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸುತ್ತವೆ.
ಇದೇ ರೀತಿಯ ಅಕ್ರಮ 1998, 1999 ಮತ್ತು 2004ರ ಪರೀಕ್ಷೆಗಳಲ್ಲೂ ನಡೆದಿತ್ತು. ಆಗ ತನಿಖೆ ನಡೆಸಿದ ಸಿಐಡಿ, 349 ಅಭ್ಯರ್ಥಿಗಳ ಅಂಕ ಬದಲಾವಣೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಈಗಲೂ ಕೂಡ ಅಂತಹ ವ್ಯತ್ಯಾಸವನ್ನು ಮಾಡಲಾಗಿದೆ. ಈ ಬಗ್ಗೆ ಕೂಡ ಸಿಐಡಿ ಪರಿಶೀಲನೆ ನಡೆಸುತ್ತಿದೆ.
ಈ ನಡುವೆ ಸಿಐಡಿ ಮಂಗಳವಾರವೂ ತನ್ನ ತನಿಖೆಯನ್ನು ಮುಂದುವರಿಸಿದೆ. ಸದಸ್ಯರು, ಕೆಲವು ಏಜಂಟರು, ಕೆಪಿಎಸ್‌ಸಿ ಸಿಬ್ಬಂದಿಗಳ ಮೊಬೈಲ್ ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಸಿಸಿಟಿವಿಯಲ್ಲಿ ಸೆರೆ ಸಿಕ್ಕ ಕಾರುಗಳ ನಂಬರ್ ಪಡೆಯಲಾಗಿದ್ದು ಅವುಗಳನ್ನೂ ತಪಾಸಣೆ ಮಾಡಲಾಗುತ್ತಿದೆ.
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಗಳವಾರಕ್ಕೆ ಅಂತ್ಯವಾಗಿದೆ. ಈ ಕುರಿತ ವಿಚಾರಣೆ ಬುಧವಾರ ಹೈಕೋರ್ಟ್ ಮುಂದೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.