ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ, ಲೇಖಕ ಪ್ರಭುಶಂಕರ್ (89) ಭಾನುವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಕುವೆಂಪು ಅವರ ಶಿಷ್ಯರಾಗಿದ್ದ ಪ್ರಭುಶಂಕರ್ ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಕುರಿತು ಪಿಎಚ್.ಡಿ ಪಡೆದಿದ್ದರು. ಇದು ಮೈಸೂರು ವಿ.ವಿ.ಯ ಮೊದಲ ಕನ್ನಡ ಪಿಎಚ್.ಡಿ. ಚಾಮರಾಜನಗರದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಆನರ್ಸ್ ಹಾಗೂ ಕನ್ನಡ ಎಂ.ಎ ಪದವಿಯನ್ನು ಮೊದಲ ರ‍್ಯಾಂಕ್‌ನೊಂದಿಗೆ ಪಡೆದರು. ಆಮೇಲೆ ಬೆಂಗಳೂರು, ಕೋಲಾರದಲ್ಲಿ ಅಧ್ಯಾಪಕರಾಗಿದ್ದ ಅವರು, ಮಹಾರಾಜ ಕಾಲೇಜಿಗೆ ವರ್ಗಾವಣೆಗೊಂಡರು. ನಂತರ ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ನಿವೃತ್ತರಾದರು. ಇದಕ್ಕೂ ಮೊದಲು ಅವರು ಪ್ರಸಾರಾಂಗದ ನಿರ್ದೇಶಕರಾಗಿದ್ದರು.
17ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದ ಅವರು ಪಡುಬಿದ್ರಿ ಅಮ್ಮ, ಕನ್ನಡದಲ್ಲಿ ಭಾವಗೀತೆ, ಕಾವ್ಯಯೋಗ ಆಮ್ರಪಾಲಿ (ನಾಟಕ), ಖಲೀಲ್ ಗಿಬ್ರಾನ್ ಕುರಿತ ಪರಿಚಯ ಗ್ರಂಥ, ಭಾರತೀಯ ತತ್ವಶಾಸ್ತ್ರ ರೂಪರೇಖೆಗಳು, ಉಪನಿಷತ್ತುಗಳ ಸಂದೇಶಗಳು, ಸಿಸ್ಟರ್ ನಿವೇದಿತಾ, ಅಮೆರಿಕದಲ್ಲಿ ನಾನು, ಶಾಂತಿ, ನೂರೊಂದು ವಚನಗಳು ಮೊದಲಾದವು.
ಅವರ ಸಮಗ್ರ ಸಾಹಿತ್ಯವನ್ನು 9 ಸಂಪುಟಗಳಲ್ಲಿ ಪ್ರಕಟಿಸಲು ಬೆಂಗಳೂರಿನ ಅಭಿನವ ಪ್ರಕಾಶನ ಮುಂದಾಗಿದ್ದು, ಇನ್ನೊಂದು ತಿಂಗಳಲ್ಲಿ ಮೊದಲ ಸಂಪುಟ ಬಿಡುಗಡೆಗೊಳ್ಳಲಿದೆ. ಗೊರೂರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅತ್ತಿಮಬ್ಬೆ ಪ್ರತಿಷ್ಠಾನದ ಮನುಶ್ರೀ ರಾಷ್ಟ್ರೀಯ ದತ್ತಿ ಪುರಸ್ಕೃತರಾಗಿದ್ದರು.
ಇಲ್ಲಿನ ಯಾದವಗಿರಿಯ ರಾಮಕೃಷ್ಣ ಆಶ್ರಮದ ಹಿಂಭಾಗದಲ್ಲಿರುವ 4ನೇ ಅಡ್ಡರಸ್ತೆಯ ಶ್ರೀವರಕೃಷ್ಣ ಅಪಾರ್ಟ್‌ಮೆಂಟ್‌ನ ಜಿ 2 ಫ್ಲ್ಯಾಟಿನಲ್ಲಿ ಸೋಮವಾರ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದೆ.
ಅವರ ಅಂತ್ಯಸಂಸ್ಕಾರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗೋಕುಲಂನ ಚಿರಶಾಂತಿಧಾಮದಲ್ಲಿ ನಡೆಯಲಿದೆ. ಮಾಹಿತಿಗೆ ಡಾ.ಸಿ.ಕೆ.ರೇಣುಕಾರ್ಯ ಮೊ: 9845460047 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.