ADVERTISEMENT

ಲೇವಾದೇವಿ ಸಂಘಗಳಾದ ‘ಸ್ತ್ರೀ ಶಕ್ತಿ’

ರಾಜ್ಯಮಟ್ಟದ ರೈತ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:35 IST
Last Updated 13 ಫೆಬ್ರುವರಿ 2017, 19:35 IST
ಮದ್ದೂರಿನಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿ ಅನಾವರಣ ಹಾಗೂ ರೈತ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು.
ಮದ್ದೂರಿನಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿ ಅನಾವರಣ ಹಾಗೂ ರೈತ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು.   
ಮದ್ದೂರು: ರಾಜ್ಯದಲ್ಲಿರುವ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಲೇವಾದೇವಿ ನಡೆಸುವ ಸಂಘಗಳಾಗಿದ್ದು, ಈ ವ್ಯವಸ್ಥೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಾಹಿತಿ ದೇವನೂರ ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು.
 
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿ ಅನಾವರಣ ಹಾಗೂ ರಾಜ್ಯಮಟ್ಟದ ರೈತ ಸಮಾವೇಶವನ್ನು ರೈತ ಮಹಿಳೆಯರ ಮಡಿಲಿಗೆ ದೇಸಿ ಬಿತ್ತನೆ ಬೀಜಗಳನ್ನು ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
 
ಸ್ತ್ರೀ ಶಕ್ತಿ ಸಂಘಗಳಿಂದ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಪಕ್ಕದ ಆಂಧ್ರಪ್ರದೇಶದ ಮಾದರಿಯಲ್ಲಿ ಸ್ವಯಂ ಸೇವಾ ಸಂಘಗಳನ್ನು ಗ್ರಾಮದ ಅಭಿವೃದ್ಧಿ ಸಂಘಗಳನ್ನಾಗಿ ಪರಿವರ್ತನೆ ಮಾಡಬೇಕಿದೆ. ಸರ್ಕಾರದ ಎಲ್ಲ ಅಭಿವೃದ್ಧಿ ಕೆಲಸಗಳು ಈ ಸಂಘಗಳ ಉಸ್ತುವಾರಿಯಲ್ಲಿ ನಡೆಯುವಂತೆ ಮಾಡಬೇಕಿದೆ. ಹೀಗಾದಾಗ ಕಳ್ಳ ಬಿಲ್‌ ವ್ಯವಹಾರಗಳು ತಗ್ಗಲಿವೆ. ಪಾರದರ್ಶಕವಾಗಿ ಕೆಲಸಗಳು ನಡೆಯಲಿದ್ದು, ಇಡೀ ಗ್ರಾಮಗಳೇ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತವೆ ಎಂದು ಸಲಹೆ ನೀಡಿದರು.
 
ನಡುಬಗ್ಗಿಸಿ ನಡೆಯುತ್ತಿದ್ದ ರೈತರನ್ನು ತಲೆ ಎತ್ತುವ ಹಾಗೇ ಮಾಡಿದ್ದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಾಧನೆ. ಅವರು ಹಾಕಿಕೊಟ್ಟ ಸ್ವಾಭಿಮಾನದ ಪಥದಲ್ಲಿ ತಲೆ ಎತ್ತಿರುವ ರೈತರು, ದೃಢವಾದ ಹೆಜ್ಜೆಗಳನ್ನಿಡುವ ಮೂಲಕ ರಚನಾತ್ಮಕ ಕಾರ್ಯಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಅವರು ಹೇಳಿದರು.
 
ಭಾರತೀಯ ರಾಷ್ಟ್ರೀಯ ರೈತ ಸಂಘಟನೆಗಳ ಸಮನ್ವಯ ಸಮಿತಿ ಮುಖ್ಯಸ್ಥ ಯದುವೀರ್‌ಸಿಂಗ್‌ ಮಾತನಾಡಿ, ದೇಶದ ಜನರನ್ನು ಸಾಲದ ಸುಳಿಗೆ ತಳ್ಳಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ದೇಶದ 143 ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾಮಾಡುವ ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ವಿಚಾರದಲ್ಲಿ ಜಾಣತನ ಪ್ರದರ್ಶಿಸುತ್ತ ಕಾಲ ನೂಕುತ್ತಿದೆ ಎಂದು ಅವರು ಹೇಳಿದರು.
 
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರೈತ ಸಂಘದ ವರಿಷ್ಠ ಮಂಡಳಿ ಸದಸ್ಯ ಕೆ.ಸಿ.ಬಸವರಾಜು, ಹಸಿರು ಸೇನೆ ಅಧ್ಯಕ್ಷ ಕೆ.ಟಿ.ಗಂಗಾಧರ್, ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಪಾಲ್ಗೊಂಡಿದ್ದರು.
 
**
ದೇವನೂರರ ಬೀಡಿಗೆ ಬೆಂಕಿ ಹಚ್ಚಿದ ಕಥೆ
ಮದ್ದೂರು: ‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ನನ್ನ ಭೇಟಿಯ ಹಿಂದೆ ಬೀಡಿಗೆ ಬೆಂಕಿ ಹಚ್ಚಿದ ರೋಚಕ ಪ್ರಸಂಗವಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
 
‘ಅದು ನಾನು ವಿದ್ಯಾರ್ಥಿಯಾಗಿದ್ದ ಕಾಲ. ನಂಜನಗೂಡಿನ ನ್ಯಾಯಾಲಯದ ಆವರಣದಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಸಿಗರೇಟು ಸೇದುತ್ತ ನಿಂತಿದ್ದರು. ಅವರನ್ನು ಮೇಲಿಂದ ಕೆಳಕ್ಕೆ ನೋಡಿದ ನಾನು ನನ್ನ ಕಿಸೆಯೊಳಗಿದ್ದ ಬೀಡಿ ತುಟಿಗಿಟ್ಟು ಬೆಂಕಿ ಕಡ್ಡಿಗಾಗಿ ತಡಕಾಡಿದೆ. ಆದರೆ, ಕಡ್ಡಿ ದೊರಕಲಿಲ್ಲ. ಅವರ ಬಳಿ ಬೆಂಕಿ ಕಡ್ಡಿ ಕೇಳಿದೆ. ನನ್ನನ್ನು ನೋಡಿ, ಹುಬ್ಬುಗಟ್ಟಿದ ಹಣೆ ನಿರ್ಮಲವಾಯಿತು. ತಮ್ಮ ಕಿಸೆಯಿಂದ ಬೆಂಕಿ ಪೆಟ್ಟಿಗೆ ತೆಗೆದು ಕಡ್ಡಿ ಕೆರೆದು ನನ್ನ ಬೀಡಿಗೆ ಹಚ್ಚಿದರು. ಇದರಿಂದ ಒಂದು ಕ್ಷಣ ಅವಾಕ್ಕಾದ ನಾನು ಅವರ ಸ್ನೇಹ ಪ್ರೀತಿಗೆ ಅಲ್ಲಿಯೇ ಅವರ ವ್ಯಕ್ತಿತ್ವಕ್ಕೆ ಮಾರುಹೋದೆ’ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.