ADVERTISEMENT

ವಕೀಲರ ತಂಡ ಬದಲಾವಣೆಗೆ ಫಾಲಿ ನಾರಿಮನ್ ವಿರೋಧ

ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಜಲ ವಿವಾದ ವಿಚಾರಣೆ

ಹೊನಕೆರೆ ನಂಜುಂಡೇಗೌಡ
Published 23 ಜನವರಿ 2017, 19:30 IST
Last Updated 23 ಜನವರಿ 2017, 19:30 IST
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್   

ಬೆಂಗಳೂರು: ಕಾವೇರಿ ಜಲ ವಿವಾದ ಕುರಿತು ಕರ್ನಾಟಕದ ಪರ ಸುಪ್ರೀಂ ಕೋರ್ಟ್‌ಗೆ ಹಾಜರಾಗುತ್ತಿರುವ ವಕೀಲರ ತಂಡದ ಕೆಲವು ಸದಸ್ಯರನ್ನು ಬದಲಾವಣೆ ಮಾಡಲು ಫಾಲಿ ನಾರಿಮನ್‌ ಒಪ್ಪಿಗೆ ಸೂಚಿಸಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರ ಈ ಆಲೋಚನೆ ಕೈಬಿಟ್ಟಿದೆ.

ಆದರೆ, ಹಿರಿಯ ವಕೀಲ ಉದಯ್‌ ಹೊಳ್ಳ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕೆಲಸ ಮಾಡುತ್ತಿರುವ ದೇವದತ್‌ ಕಾಮತ್‌, ಹೊರ ರಾಜ್ಯದ ಮತ್ತೊಬ್ಬ ಹಿರಿಯ ವಕೀಲರನ್ನು ತಂಡಕ್ಕೆ ಸೇರ್ಪಡೆ ಮಾಡಲು ಸರ್ಕಾರ ಉದ್ದೇಶಿಸಿದೆ. ಕಾವೇರಿ ಕಾನೂನು ತಜ್ಞರ ತಂಡದಲ್ಲಿ ನಾರಿಮನ್‌,  ಮೋಹನ್‌ ಕಾತರಕಿ ಅವರನ್ನು ಮಾತ್ರ ಉಳಿಸಿಕೊಂಡು ಅನಿಲ್‌ ದಿವಾನ್‌, ಎಸ್‌.ಎಸ್‌. ಜವಳಿ ಮತ್ತಿತರರನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಚಿಂತಿಸಿತ್ತು.

ಎರಡು ಕಾರಣಕ್ಕೆ ಕೆಲವು ವಕೀಲರನ್ನು ಕೈಬಿಡಲು ಆಲೋಚಿಸಲಾಗಿತ್ತು. ಒಂದು-ಅವರಿಂದ ಜಲ ವಿವಾದಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಎರಡನೆಯದು– ದುಬಾರಿ ಶುಲ್ಕ ಪಾವತಿಸುತ್ತಿರುವುದರಿಂದ ಆರ್ಥಿಕ ಹೊರೆ ಆಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಅಲ್ಲದೆ, ವಕೀಲರನ್ನು ಬದಲಾವಣೆ ಮಾಡಬೇಕು ಎಂದು ಸಾರ್ವಜನಿಕರು, ವಿರೋಧ ಪಕ್ಷಗಳ ನಾಯಕರು ಮತ್ತು ಹಿರಿಯ ವಕೀಲರು ಆಗ್ರಹಿಸಿದ್ದರು.

ಕಾವೇರಿ ತಂಡದಿಂದ ಕೆಲವು ವಕೀಲರನ್ನು ಕೈಬಿಡುವ ಕುರಿತು ಚರ್ಚಿಸಲು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಶನಿವಾರ ನಾರಿಮನ್‌ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ನಾರಿಮನ್‌ ‘ತಂಡದಲ್ಲಿ ಈಗಿರುವ ಯಾರನ್ನೂ ಕೈಬಿಡಬಾರದು’ ಎಂಬ ಸಲಹೆ ನೀಡಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಾವೇರಿ ಐತೀರ್ಪು ಪ್ರಶ್ನಿಸಿ ಕರ್ನಾಟಕ ಹಾಗೂ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳು ಫೆ. 7ರಿಂದ ವಿಚಾರಣೆಗೆ ಬರಲಿವೆ. ಈ ಹಂತದಲ್ಲಿ ವಕೀಲರನ್ನು ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ನಾರಿಮನ್‌ ಸಲಹೆ ಮಾಡಿದ್ದಾರೆ.

‘ನಮ್ಮ ತಂಡದಲ್ಲಿರುವ ಪ್ರತಿಯೊಬ್ಬ ವಕೀಲರಿಗೂ ಒಂದೊಂದು ಹೊಣೆಗಾರಿಕೆ ವಹಿಸಿದ್ದೇನೆ. ಎಲ್ಲರೂ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗ ಅವರನ್ನು ಕದಲಿಸಿದರೆ ವಿಚಾರಣೆಗೆ ತೊಂದರೆ ಆಗಲಿದೆ. ಅವರನ್ನು ಮುಟ್ಟದೆ, ನಿಮಗೆ ಬೇಕಾದ ಒಂದಿಬ್ಬರನ್ನು ಸೇರ್ಪಡೆ ಮಾಡಲು ಅಡ್ಡಿಯಿಲ್ಲ’ ಎಂದು  ನಾರಿಮನ್‌ ಹೇಳಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ರಾಧಾಕೃಷ್ಣ ಹೊಳ್ಳ ಮತ್ತು  ದೇವದತ್ತ ಕಾಮತ್‌ ಮತ್ತಿತರರನ್ನು ಸೇರ್ಪಡೆ ಮಾಡಲು ಸರ್ಕಾರ ಆಲೋಚಿಸಿದೆ. ಹೊರ ರಾಜ್ಯದ ಹಿರಿಯ ವಕೀಲರೊಬ್ಬರನ್ನು ತಂಡಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಅವರ ಹೆಸರು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ.

ಗಡಿ ವಿವಾದದಲ್ಲಿ ರಾಜ್ಯದ ಪರ ಉದಯ್‌  ಹೊಳ್ಳ ವಾದಿಸುತ್ತಿದ್ದಾರೆ. ದೇವದತ್ತ ಕಾಮತ್‌ ಒಂದು ವರ್ಷದಿಂದ ರಾಜ್ಯದ  ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಕಾತರಕಿ ಮನವೊಲಿಕೆ ಸಾಧ್ಯತೆ
ನಾರಿಮನ್‌  ಜತೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಸಮಾಲೋಚನೆ ನಡೆಸಿದ ಸಮಯದಲ್ಲಿ ರಾಜ್ಯದ ಪರವಾಗಿ ಹಾಜರಾಗುತ್ತಿರುವ ಯಾವೊಬ್ಬ ವಕೀಲರನ್ನೂ ಆಹ್ವಾನಿಸಿರಲಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ಮೋಹನ್‌ ಕಾತರಕಿ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ವಾಪಸ್‌ ಪಡೆಯುವಂತೆ ಅವರ ಮನವೊಲಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.
ನಾರಿಮನ್ ಜತೆಗಿನ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡು ಕಾತರಕಿ  ಅವರು ಕಾವೇರಿ ವಕೀಲರ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT