ಧಾರವಾಡ: `ಶ್ರಮಿಕರ ನಂಬಿಕಸ್ಥ ಪ್ರಾಣಿ ಕತ್ತೆಗೂ ಬ್ರಾಹ್ಮಣರು ಪೂಜಿಸುವ ಗೋವಿನಷ್ಟೇ ಪವಿತ್ರಸ್ಥಾನ ಕಲ್ಪಿಸುವ ಕೆಲಸವನ್ನು ಹೊಸ ತಲೆಮಾರಿನ ದಲಿತ ಮತ್ತು ಬಂಡಾಯ ಸಾಹಿತಿಗಳು ಬರಹದ ಮೂಲಕ ಮಾಡಬೇಕಿದೆ' ಎಂದು ಮರಾಠಿ ದಲಿತ ಲೇಖಕ ಲಕ್ಷ್ಮಣ ಗಾಯಕವಾಡ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭನದಲ್ಲಿ ಶನಿವಾರ ಆರಂಭವಾದ ಕರ್ನಾಟಕ ಜನಸಾಹಿತ್ಯ ಸಮಾವೇಶದಲ್ಲಿ ಆಶಯ ನುಡಿಗಳನ್ನಾಡಿದ ಅವರು, `ವಾಸ್ತವವಾಗಿ ಹಸುವಿಗಿಂತ ಕತ್ತೆ ಶ್ರೇಷ್ಠ ಪ್ರಾಣಿ. ಬ್ರಾಹ್ಮಣರು ಹಸು ಸಾಕಿದ್ದರಿಂದ ಅದು ಪೂಜನೀಯ ಸ್ಥಾನ ಪಡೆಯಿತು. ಆದರೆ ದಲಿತರು ಸಾಕಿದ ಕತ್ತೆಗೆ ಗೋವಿನಷ್ಟು ಮನ್ನಣೆ ದೊರೆಯಲಿಲ್ಲ' ಎಂದು ಮಾರ್ಮಿಕವಾಗಿ ನುಡಿದರು.
`ಕಾಲ್ಪನಿಕ ಮತ್ತು ರಂಜನೀಯ ಸಾಹಿತ್ಯ ಇಂದಿನ ಅಗತ್ಯವಲ್ಲ. ವಾಸ್ತವಿಕ ಸಂಗತಿಗಳ ನೆಲೆಗಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸಬೇಕು' ಎಂದು ಅವರು ಹೊಸ ಬರಹಗಾರರಿಗೆ ಕಿವಿಮಾತು ಹೇಳಿದರು.
`ಬಂಡಾಯ ಮನೋಭಾವ ಇಲ್ಲದವನು ಸಾಹಿತಿಯಾಗಲು ಸಾಧ್ಯವಿಲ್ಲ. ವಿಭಿನ್ನ ಭೌಗೋಳಿಕ ಸ್ಥಿತಿ, ಸಂಸ್ಕೃತಿ, ಜನಾಂಗೀಯ ಭಿನ್ನತೆಗಳನ್ನು ಹೊಂದಿರುವ ಜಗತ್ತಿನ ಎಲ್ಲಾ ದೇಶಗಳು ಅಸಮಾನತೆಯಿಂದ ಕೂಡಿದ ವ್ಯವಸ್ಥೆಯನ್ನು ಹೊಂದಿವೆ. ಕನ್ನಡ ಹಾಗೂ ಮರಾಠಿ ಸಾಹಿತ್ಯದ ಬೆಳವಣಿಗೆ ಕೂಡ ಬಂಡಾಯದಿಂದ ಹೊರತಲ್ಲ. ಕರ್ನಾಟಕದಲ್ಲಿ ಶರಣರ ವಚನಗಳು, ಮಹಾರಾಷ್ಟ್ರದಲ್ಲಿ ಭಕ್ತಿ ಪಂಥದ ಸಂತ ತುಕಾರಾಮರ ಅಭಂಗ ವಾಣಿ ಆ ಕೆಲಸ ಮಾಡಿತು' ಎಂದರು.
`ಬಂಡಾಯ ಸಾಹಿತ್ಯ ಮರುಹುಟ್ಟು ಪಡೆಯಲು ಈಗ ಕಾಲ ಪರಿಪಕ್ವವಾಗಿದೆ. ಪ್ರಭುತ್ವ ಮೆಚ್ಚಿಸುವ ಸಾಹಿತ್ಯ ರಚನೆಯಲ್ಲಿ ತೊಡಗಿ ಆಸ್ಥಾನ ವಿದ್ವಾಂಸರಾಗುವ ಕೆಲಸವನ್ನು ಬಿಟ್ಟು ಶೋಷಿತರು, ರೈತರು, ಮಹಿಳೆಯರ ಧ್ವನಿಯಾಗಿ ಲೇಖನಿಯನ್ನು ಖಡ್ಗವಾಗಿಸುವ ಕೆಲಸ ಮಾಡಬೇಕು' ಎಂದು ಅವರು ಕರೆ ನೀಡಿದರು.
ಚಿಂತಕ ಜಿ.ರಾಮಕೃಷ್ಣ ಮಾತನಾಡಿ, `ದೇಶದಲ್ಲಿ ಒಂದರ ಹಿಂದೆ ಒಂದು ಪ್ರಾಯೋಜಿತ ಸಾಹಿತ್ಯ ಸಂಭ್ರಮ ನಡೆಯುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ. ವಾದ- ವಿವಾದ, ಕೋಲಾಹಲಗಳು ಎಲ್ಲೆಡೆಯೂ ಸಾಮಾನ್ಯವಾಗಿವೆ. ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಸಾಹಿತ್ಯಕ್ಕೆ ಇಷ್ಟೊಂದು ಉಪಚಾರ ಸಿಕ್ಕಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ' ಎಂದರು.
`ಸಾಹಿತ್ಯ ಸವಿಯುವುದಷ್ಟೇ ನಿತ್ಯದ ವ್ಯಾಪಾರವಾಗಲಿ ಎಂಬ ಉದ್ದೇಶ ಇದರ ಹಿಂದೆ ಕೆಲಸ ಮಾಡುತ್ತಿದೆ. ಇದನ್ನು ಕಾರ್ಪೊರೇಟ್ ವಲಯ ವ್ಯವಸ್ಥಿತವಾಗಿ ಮಾಡುತ್ತಿದೆ. ಮಿಥ್ಯಾ ಪ್ರಜ್ಞೆಯ ಮೊದಲ ಪರಿಣಾಮ ಅಸಹಾಯತೆ, ಅಳುಕು ಮನೋಭಾವ. ಜನಸಾಹಿತ್ಯ ಸಮಾವೇಶದ ಮೂಲಕ ಮಿಥ್ಯಾ ಪ್ರಜ್ಞೆ ತೊಡೆದು ಹಾಕುವ ಕೆಲಸ ಮಾಡೋಣ' ಎಂದು ಹೇಳಿದರು.
`ಬಡರಾಷ್ಟ್ರಗಳ ಸಂಪತ್ತನ್ನು ಲೂಟಿ ಮಾಡಲು ಅಲ್ಲಿನ ಸಮುದಾಯಗಳ ಒಪ್ಪಿಗೆ ಪಡೆಯಲು ಲೇಖಕರನ್ನು ಹಾಗೂ ಸಾಂಸ್ಕೃತಿಕ ಲೋಕವನ್ನು ಮಧ್ಯವರ್ತಿಗಳಾಗಿ ಬಳಸಿಕೊಳ್ಳುವ ಕಾರ್ಪೊರೇಟ್ ಕಂಪೆನಿಗಳ ಹುನ್ನಾರದ ಮೂರ್ತ ಸ್ವರೂಪವೇ ಧಾರವಾಡ ಸೇರಿದಂತೆ ವಿವಿಧೆಡೆ ನಡೆದ ಸಾಹಿತ್ಯ ಸಂಭ್ರಮಗಳು' ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾವೇಶದ ಸಂಘಟಕ ಡಾ. ಎಂ.ಡಿ.ಒಕ್ಕುಂದ ಹೇಳಿದರು.
ಲೇಖಕಿ ಬಾನು ಮುಷ್ತಾಕ್ ಮಾತನಾಡಿದರು.
ಡಾ.ಸಂಜೀವ ಕುಲಕರ್ಣಿ ಸಂಯೋಜನೆ ಮಾಡಿದರು.
ತೆಗಳುವುದು ಬೇಡ
`ಬಂಡಾಯ ಸಾಹಿತ್ಯವೆಂದು ಹೇಳಿಕೊಂಡು ಬ್ರಾಹ್ಮಣರನ್ನು ತೆಗಳುವ ಅಗತ್ಯವಿಲ್ಲ. ಶಿವರಾಮ ಕಾರಂತ, ಅನಂತಮೂರ್ತಿ ಜಾತಿಯಲ್ಲಿ ಬ್ರಾಹ್ಮಣರಾದರೂ ಬದುಕು- ಬರಹದ ಮೂಲಕ ಮನು ಚಿಂತನೆಯನ್ನು ಸಾಧ್ಯವಾದಷ್ಟು ಬೆತ್ತಲು ಮಾಡಿದ್ದಾರೆ. ಒಳ್ಳೆಯ ಬ್ರಾಹ್ಮಣರನ್ನು ಬಂಡಾಯ ಚಳವಳಿ ಕಟ್ಟಲು ಬಳಸಿಕೊಳ್ಳೋಣ'.
ಲಕ್ಷ್ಮಣ ಗಾಯಕವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.