ADVERTISEMENT

ವಿಕ್ರಂ ಗೌಡ ನಕ್ಸಲ್ ನಾಯಕ

​ಪ್ರಜಾವಾಣಿ ವಾರ್ತೆ
Published 19 ಜುಲೈ 2011, 19:30 IST
Last Updated 19 ಜುಲೈ 2011, 19:30 IST

ಚಿಕ್ಕಮಗಳೂರು: ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಗೆ ಹೊಸ ನಾಯಕತ್ವ ಸಿಕ್ಕಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ನಕ್ಸಲ್ ತಂಡದ ನಾಯಕತ್ವ ಬದಲಾಗಿರುವ ಮಾಹಿತಿ ಲಭ್ಯವಾಗಿದೆ. ಇದನ್ನು ಪುಷ್ಟೀಕರಿಸುವಂತೆ ಇತ್ತೀಚೆಗೆ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಸಂಘಟನೆ ಬಲಪಡಿಸುವ ತಂತ್ರ ಅತ್ಯಂತ ರಹಸ್ಯವಾಗಿ ನಡೆಯುತ್ತಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ.

ದಕ್ಷಿಣ ಭಾರತದ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ಕಾರ್ಕಳ ತಾಲ್ಲೂಕು ಹೆಬ್ರಿಯ ವಿಕ್ರಮ್ ಗೌಡ ಹೆಗಲಿಗೆ ಬಿದ್ದಿದೆ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಕಳೆದ ತಿಂಗಳು ಮಲೆನಾಡಿನ ಕೆಲವು ಹಳ್ಳಿಗಳಲ್ಲಿ ನಕ್ಸಲರು ಕಾಣಿಸಿಕೊಂಡು, ಇಬ್ಬರು ಜಮೀನ್ದಾರರ ಮನೆಯಲ್ಲಿ ತಲಾ ರೂ. 25 ಸಾವಿರ ಸಂಗ್ರಹಿಸಿದ್ದರು. ಘಟನೆಯಾಗಿ ತಿಂಗಳು ಕಳೆಯುವುದರೊಳಗೇ  ಜುಲೈ 17ರಂದು ಸಂಜೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮಾತೋಳಿ ಭಾಗದಲ್ಲಿ ನಕ್ಸಲರು ಸಭೆ ನಡೆಸಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಸಂಘಟನೆ ಬಲಪಡಿಸುವ ಮತ್ತು ಒಕ್ಕಲೇಳುವ ಭೀತಿಯಲ್ಲಿರುವ ಅರಣ್ಯವಾಸಿಗಳಿಗೆ ಧೈರ್ಯ ತುಂಬುವ ಹಿನ್ನೆಲೆಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಆಂಧ್ರಪ್ರದೇಶ ಗಡಿಯಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಚೆರುಕುರಿ ರಾಜ್‌ಕುಮಾರ್ ಅಲಿಯಾಸ್ ಆಜಾದ್ ಬಲಿಯಾದ ನಂತರ ದಕ್ಷಿಣ ಭಾರತದ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ಕೈಗೆ ಬಂದಿದೆ. ದಕ್ಷಿಣ ಭಾರತದಲ್ಲಿ ಸಂಘಟನೆ ಬಲಪಡಿಸುವ ಸೂಚನೆ ಕೇಂದ್ರ ಸಮಿತಿಯಿಂದ ಬಂದಿದ್ದು, ಶಸ್ತ್ರ ಸಜ್ಜಿತ ಹೋರಾಟಗಾರರ ಪಡೆ ರೂಪಿಸಲು ಚುರುಕಿನ ಸಂಘಟನೆ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಆಂಧ್ರ ಮತ್ತು ಛತ್ತೀಸ್‌ಗಡ ಮೂಲದ 4-5 ಮಂದಿಯನ್ನು ಪಶ್ಚಿಮಘಟ್ಟದಲ್ಲಿ ಸಂಘಟನೆ ಚುರುಕುಗೊಳಿಸಲು ನಿಯೋಜಿಸಲಾಗಿದೆ ಎನ್ನಲಾಗಿದೆ.

2001ರಿಂದ ರಾಜ್ಯದಲ್ಲಿ ನಕ್ಸಲ್ ಸಂಘಟನೆ ಚುಕ್ಕಾಣಿ ಹಿಡಿದಿದ್ದ ಸಾಕೇತ್ ರಾಜನ್ 2005ರ ಫೆಬ್ರುವರಿ 6ರಂದು ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯದ ಬಳಿ ಪೊಲೀಸ್ ಗುಂಡಿಗೆ ಬಲಿಯಾದ ನಂತರ ನೀಲಗುಳಿ ಪದ್ಮನಾಭ್ ಸಂಘಟನೆ ಮುನ್ನಡೆಸುತ್ತಿದ್ದ. ಬರ್ಕಣ ಎನ್‌ಕೌಂಟರ್‌ನಲ್ಲಿ ಆತನೂ ಕಾಲು ಕಳೆದುಕೊಂಡ. ಇದರಿಂದಾಗಿ 2006ರಿಂದ 2011ರ ಜನವರಿವರೆಗೂ ಬಿ.ಜಿ.ಕೃಷ್ಣಮೂರ್ತಿ ಸಂಘಟನೆ ಮುನ್ನಡೆಸುತ್ತಿದ್ದ.

ಒಂದು ವರ್ಷದಿಂದ ಆತನೂ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಜತೆಗೆ ರೋಗಪೀಡಿತ ಪತ್ನಿ, ನಕ್ಸಲ್ ಹೋರಾಟಗಾರ್ತಿ ಹೊಸಗದ್ದೆ ಪ್ರಭಾಗೆ ಚಿಕಿತ್ಸೆ ಕೊಡಿಸಲು ಇಬ್ಬರೂ ಮಂಗಳೂರು, ಮಣಿಪಾಲ್, ಕೇರಳ, ತಮಿಳುನಾಡಿಗೆ ಓಡಾಡಬೇಕಾಗಿದ್ದರಿಂದ ಸಂಘಟನೆಯತ್ತ ಗಮನ ಹರಿಸಲಾಗುತ್ತಿರಲಿಲ್ಲ. ಹಾಗಾಗಿ ಒಂದು ವರ್ಷದಿಂದ ವಿಕ್ರಮ್ ಗೌಡ ಪ್ರಭಾರಿ ನಾಯಕನಾಗಿದ್ದ.

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಾಸನ, ಮಡಿಕೇರಿ ಹಾಗೂ ಚಾಮರಾಜ ನಗರಕ್ಕೆ ಚಟುವಟಿಕೆ ವಿಸ್ತರಿಸುವ ಆಲೋಚನೆ ಎಸ್‌ಡಬ್ಲ್ಯುಆರ್‌ಬಿ (ಸೌಥ್ ವೆಸ್ಟರ್ನ್ ರೀಜನಲ್ ಬ್ಯೂರೊ) ಹೊಂದಿದ್ದು, ಹೊಸ ನಾಯಕತ್ವದಡಿ ನಕ್ಸಲರು ಹುರುಪಿನಿಂದ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.

ಈ ಮಾಹಿತಿ ಗುಪ್ತ ದಳಕ್ಕೂ ಸಿಕ್ಕಿದ್ದು, 15 ದಿನಗಳ ಹಿಂದೆ ನಕ್ಸಲ್ ನಿಗ್ರಹ ದಳದ ಒಂದು ಸಾವಿರ ಸಿಬ್ಬಂದಿ ಪಶ್ಚಿಮ ಘಟ್ಟ ಅರಣ್ಯದಲ್ಲಿ ತೀವ್ರ ಶೋಧ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.