ADVERTISEMENT

ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 4:16 IST
Last Updated 29 ಡಿಸೆಂಬರ್ 2017, 4:16 IST
ಜೆ.ಆರ್. ಲಕ್ಷ್ಮಣರಾವ್
ಜೆ.ಆರ್. ಲಕ್ಷ್ಮಣರಾವ್   

ಮೈಸೂರು: ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ (97) ಶುಕ್ರವಾರ ಬೆಳಿಗ್ಗೆ ನಿಧನರಾದರು.

ಲಕ್ಷ್ಮಣರಾವ್ ಅವರು ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.

ವಿಜ್ಞಾನ ವಿಷಯಗಳ ಬಗ್ಗೆ ಅವರು 30ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದರು. 2016ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

ADVERTISEMENT

1921 ಜನವರಿ 21ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಲಕ್ಷಣರಾವ್‌ ಜನಿಸಿದ್ದರು. ಅವರ ತಂದೆ ರಾಘವೇಂದ್ರರಾವ್‌, ತಾಯಿ ನಾಗಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ಆಯಿತು. ದಾವಣಗೆರೆಯಲ್ಲಿ ಪ್ರೌಢಶಾಲೆ ಕಲಿತ ಅವರು ಮೈಸೂರಿನ ಇಂಟರ್ ಮೀಡಿಯೆಟ್‌ ಕಾಲೇಜ್‌ನಿಂದ (ಇಂದಿನ ಯುವರಾಜ ಕಾಲೇಜ್‌) ಇಂಟರ್ ಮೀಡಿಯೆಟ್‌ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದಿದ್ದರು.

ತುಮಕೂರಿನ ಇಂಟರ್ ಮೀಡಿಯೆಟ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಅವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಹೊರತಂದ ಇಂಗ್ಲಿಷ್‌ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ವಿಜ್ಞಾನದ ಬೋಧನೆಯ ಜೊತೆಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವುದನ್ನು ಆರಂಭಿಸಿದ ಅವರು ಬರೆದ ಮೊದಲ ಪುಸ್ತಕ ‘ಆಹಾರ’ (1944). ‘ಪರಮಾಣು ಚರಿತ್ರೆ’, ‘ಗೆಲಿಲಿಯೋ’, ‘ವಿಜ್ಞಾನವಿಚಾರ’, ‘ಲೂಯಿಪಾಸ್ತರ್’, ‘ವಿಜ್ಞಾನಿಗಳೊಡನೆ ರಸನಿಮಿಷಗಳು’ ಅವರ ಪ್ರಮುಖ ಕೃತಿಗಳು.

ಅವರಿಗೆ ಮೂವರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.