ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ. ಎಚ್. ಮಹೇಶಪ್ಪ ಮತ್ತು ಮೈಸೂರು ವಿವಿ ಕುಲಪತಿ ಪ್ರೊ. ರಂಗಪ್ಪ ವಿರುದ್ಧ ತನಿಖೆಗೆ ರಾಜ್ಯಪಾಲ ವಜುಭಾಯ್ ವಾಲಾ ಸೋಮವಾರ ಆದೇಶ ನೀಡಿದ್ದಾರೆ.
ಮಹೇಶಪ್ಪ ವಿರುದ್ಧದ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಿತ್ ಗುಂಜಾಳ ಮತ್ತು ರಂಗಪ್ಪ ವಿರುದ್ಧದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಭಕ್ತವತ್ಸಲಂ ನೇತೃತ್ವದ ಏಕ ಸದಸ್ಯ ಸಮಿತಿಯನ್ನು ರಾಜ್ಯಪಾಲರು ರಚಿಸಿದ್ದಾರೆ.
ಎರಡನೇ ಬಾರಿಗೆ ವಿಟಿಯು ಕುಲಪತಿಯಾಗಿ ನೇಮಕಗೊಂಡಿದ್ದ ಮಹೇಶಪ್ಪ ವಿರುದ್ಧ ಹಣಕಾಸಿನ ಅವ್ಯಹಾರಗಳು, 2013ರಲ್ಲಿ 168 ಬೋಧಕ ಸಿಬ್ಬಂದಿಯನ್ನು ನಿಯಮ ಉಲ್ಲಂಘಿಸಿ ನೇಮಕ ಮಾಡಿದ ಆರೋಪ ಕೇಳಿಬಂದಿತ್ತು.
ಸಿಬ್ಬಂದಿ ನೇಮಕದ ಆರೋಪದ ಕುರಿತಾಗಿ ತನಿಖೆ ನಡೆಸಿದ್ದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ವಿ. ಕೃಷ್ಣರಾವ್ ಅವರು, ಆದೇಶ ಉಲ್ಲಂಘಿಸಿ ಬೋಧಕರ ನೇಮಕ ಮಾಡಿರುವುದು ದೃಢಪಟ್ಟಿದೆ ಎಂದು ವರದಿ ನೀಡಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಶಿಫಾರಸು ಮಾಡಿದ್ದರು.
ಮೈಸೂರು ವಿವಿ ಕುಲಪತಿಯಾಗಿರುವ ಪ್ರೊ.ರಂಗಪ್ಪ ಅವರು ಈ ಹಿಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಆದೇಶ ಹಾಗೂ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಿದ, ಅನರ್ಹರಿಗೆ ಬಡ್ತಿ ನೀಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.