ಬೆಂಗಳೂರು: ‘ನಿಮಗೆ ಸರ್ಕಾರಿ ಕೆಲಸ ಬೇಕಾ? ಸೇವೆ ಕಾಯಂ ಆಗಬೇಕಾ? ವರ್ಗಾವಣೆ ಬಯಸುತ್ತಿದ್ದೀರಾ? ಯಾವುದೇ ಇಲಾಖೆಯಲ್ಲಿ ನೌಕರಿ ಬೇಕಿದ್ದರೂ ನನಗೆ ಕೇಳಿ. ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ಸಂಚಾಲಕ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರ ಪರಿಚಯ ನನಗಿದೆ...’
ಹೀಗೆ ಹೇಳಿಕೊಂಡೇ ವಿಧಾನಸೌಧದ ಮೊಗಸಾಲೆಯಲ್ಲಿ ತಿರುಗಾಡತ್ತ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಜೆ.ಮಂಜುನಾಥ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ರಾಜರಾಜೇಶ್ವರಿನಗರ ನಿವಾಸಿಯಾದ ಆರೋಪಿ, ಪಶುಸಂಗೋಪನೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಗಿದ್ದಾನೆ. ಸಭೆ ಸಮಾರಂಭಗಳಲ್ಲಿ ಸೋನಿಯಾ ಗಾಂಧಿ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ ಸೇರಿದಂತೆ ಹಲವು ರಾಜಕಾರಣಿಗಳ ಜತೆ ಫೋಟೊ ತೆಗೆಸಿಕೊಂಡಿದ್ದ ಈತ, ಆ ಫೋಟೋಗಳನ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಗೆ ವಂಚಿಸುತ್ತಿದ್ದ. ತಾನು ಪ್ರಭಾವಿಗಳ ಜತೆಗಿದ್ದಾಗ ಫೋಟೋ ತೆಗೆಯಲೆಂದೇ ಒಬ್ಬ ಸಹಾಯಕನನ್ನೂ ಇಟ್ಟುಕೊಂಡಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘2013ರಲ್ಲಿ ಚೆಕ್‌ಬೌನ್ಸ್ ಪ್ರಕರಣ ಒಂದರಲ್ಲಿ ನಗರದ 12ನೇ ಎಸಿಎಂಎಂ ನ್ಯಾಯಾಲಯ ಈತನಿಗೆ ₹ 15 ಸಾವಿರ ದಂಡ ಹಾಗೂ ಎರಡು ತಿಂಗಳು ಸಾದಾ ಜೈಲುಶಿಕ್ಷೆ ವಿಧಿಸಿತ್ತು. ಇನ್ನೊಂದು ಪ್ರಕರಣದಲ್ಲಿ ಚಿಂತಾಮಣಿಯ ನಾಗರಾಜ್ ರೆಡ್ಡಿ ಎಂಬುವರಿಗೆ ಪಿಡಿಒ ಕೆಲಸ ಕೊಡಿಸುವುದಾಗಿ ₹ 6 ಲಕ್ಷ ಪಡೆದು ವಂಚಿಸಿದ್ದ. ಕೊನೆಗೆ ನೌಕರಿ ಕೊಡಿಸುವುದು ಸಾಧ್ಯವಾಗದಿದ್ದಾಗ ನಾಗರಾಜ್‌ಗೆ ₹6 ಲಕ್ಷದ ಚೆಕ್ ಕೊಟ್ಟಿದ್ದ. ಅದೂ ಬೌನ್ಸ್ ಆಗಿ ಚಿಂತಾಮಣಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಯಿತು.’
‘ರಾಜು ಲಕ್ಷ್ಮಣ ಜಾಧವ ಎಂಬುವರಿಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜೊತೆಗಿರುವ ಫೋಟೋ ತೋರಿಸಿದ್ದ ಈತ, ಕೆಇಬಿಯಲ್ಲಿ ಕೆಲಸ ಕೊಡಿಸುವುದಾಗಿ ಅವರಿಂದ ₹2 ಲಕ್ಷ ಪೀಕಿದ್ದ. ಹಣ ವಾಪಸ್ ಕೇಳಲು ಹೋದಾಗ, ಸರ್ಕಾರಿ ನೌಕರರ ಸಂಘದ ಹೆಸರು ಹೇಳಿ ಬೆದರಿಸಿದ್ದ. ಈತನಿಂದ ಮೋಸ ಹೋದವರೆಲ್ಲ ಸಂಘಕ್ಕೆ ದೂರು ನೀಡಲು ಶುರು ಮಾಡಿದರು. ಆಗ ಆತನನ್ನು ಸಂಘದ ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.
ಕಾರು ಹತ್ತಿಸಲು ಯತ್ನ: ಹನುಮಂತನಗರದ ಗುಬ್ಬಿ ವೀರಣ್ಣ ರಸ್ತೆ ನಿವಾಸಿ ಲಕ್ಷ್ಮಿ ಎಂಬುವರು, ಗ್ರಂಥಾಲಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಕಾಯಂ ಮಾಡಿಸುವುದಾಗಿ ಅವರಿಗೆ ನಂಬಿಸಿದ್ದ ಮಂಜುನಾಥ್, ಇದೇ ಫೆಬ್ರುವರಿಯಲ್ಲಿ ₹ 5 ಲಕ್ಷ ಪಡೆದಿದ್ದ. ಕೆಲಸ ಕೊಡಿಸದೆ ದಿನಕ್ಕೊಂದು ನೆಪ ಹೇಳಲು ಶುರು ಮಾಡಿದ ಆತನ ವರ್ತನೆಯಿಂದ ಅನುಮಾನಗೊಂಡ ಲಕ್ಷ್ಮಿ, ತಮ್ಮ ಹಣ ವಾಪಸ್ ಕೇಳಿದ್ದರು.
‘ಇದೇ ಆಗಸ್ಟ್‌ನಲ್ಲಿ ಮಂಜುನಾಥ್ ಅವರ ಕಾರನ್ನು ವಿಕಾಸಸೌಧ ಗೇಟ್ ಬಳಿ ತಡೆದು ಹಣ ವಾಪಸ್ ಕೇಳಿದ್ದೆ. ಅದಕ್ಕೆ, ‘ನನಗೆ ದೊಡ್ಡವರ ಪರಿಚಯವಿದೆ. ನನ್ನನ್ನು ಎದುರು ಹಾಕಿಕೊಂಡರೆ ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದರು. ಕೊನೆಗೆ ಮೈಮೇಲೇ ಕಾರು ಹರಿಸಲು ಯತ್ನಿಸಿದ್ದರು’ ಎಂದು ಲಕ್ಷ್ಮಿ ಬುಧವಾರ ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದಾರೆ.
ಅಕ್ರಮಗಳಿದ್ದರೂ ಕೆಲಸಕ್ಕೆ ಕುತ್ತಿಲ್ಲ
ಹಿಂದೆ ಶೇಷಾದ್ರಿಪುರ ಪೊಲೀಸರು ಮಂಜುನಾಥ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಪುನಃ ಚಾಳಿ ಮುಂದುವರಿಸಿದ್ದ. ಇಷ್ಟೊಂದು ಅಕ್ರಮಗಳಲ್ಲಿ ಭಾಗಿಯಾಗಿದ್ದರೂ, ಕೆಲವರ ಪ್ರಭಾವದಿಂದಾಗಿ ಈತನ ಕೆಲಸಕ್ಕೆ ಯಾವುದೇ ಕುತ್ತು ಬಂದಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.