ADVERTISEMENT

ವಿಧಾನಸೌಧ ನಿರ್ಮಾಣ: ಮರೆಯಲಾಗದ ಇಮಾಂ ನೆನಪು

‘ಸರ್ಕಾರಿ ಕೆಲಸ ದೇವರ ಕೆಲಸ’ ಶಿರೋನಾಮೆಗೆ ಸಾಕ್ಷಿಯಾಗಿದ್ದ ಜಗಳೂರಿನ ನಾಯಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ವಿಧಾನಸೌಧ ನಿರ್ಮಾಣ: ಮರೆಯಲಾಗದ ಇಮಾಂ ನೆನಪು
ವಿಧಾನಸೌಧ ನಿರ್ಮಾಣ: ಮರೆಯಲಾಗದ ಇಮಾಂ ನೆನಪು   

ಜಗಳೂರು: ಆರು ದಶಕಗಳ ಹಿಂದೆ ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರು ಮುಂದಾದಾಗ ಕಾಂಗ್ರೆಸ್‌ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಜಗಳೂರು ಇಮಾಂ ಸಾಬ್‌ ಅವರು ಹನುಮಂತಯ್ಯ ಅವರ ಬೆಂಬಲಕ್ಕೆ ನಿಂತರು. ಪರಿಣಾಮ ದಕ್ಷಿಣ ಭಾರತದಲ್ಲೇ ಅದ್ಭುತವಾದ ವಿಧಾನಸೌಧ ತಲೆ ಎತ್ತಿದ್ದು, ಇಂದು ವಜ್ರಮಹೋತ್ಸವದ ಸಂಭ್ರಮದಲ್ಲಿದೆ.

ರಾಜಕೀಯ ಹಿನ್ನಡೆ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಸುವ ಬಗ್ಗೆ ಪಕ್ಷದೊಳಗಿನ ಒತ್ತಡದ ನಡುವೆಯೂ ಹನುಮಂತಯ್ಯ ಅವರು ವಿಧಾನಸೌಧ ನಿರ್ಮಾಣಕ್ಕೆ ಮುಂದಾದರು. ₹ 50 ಲಕ್ಷ ಅಂದಾಜು ವೆಚ್ಚದೊಂದಿಗೆ ಆರಂಭಗೊಂಡ ಕಾಮಗಾರಿಯ ಖರ್ಚು ಅಂತಿಮ ಹಂತ ತಲುಪುವ ವೇಳೆಗೆ ₹ 1.8 ಕೋಟಿ ಆಗಿತ್ತು.

ಇದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್‌ ವಿರೋಧಿಗಳು ಹನುಮಂತಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದರು. ದುಂದುವೆಚ್ಚದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಲು ಮುಖ್ಯಮಂತ್ರಿ ಕಾರಣರಾಗಿದ್ದಾರೆ ಎಂಬ ಆರೋಪ ತೀವ್ರವಾಗಿ ಕೇಳಿಬರುತ್ತಿತ್ತು. ಆಗ, ವಿಧಾನಮಂಡಲದಲ್ಲಿ ಭಾಷಣ ಮಾಡಿದ ಇಮಾಂ ಸಾಬ್‌ ಅವರು ವಿಧಾನಸೌಧ ನಿರ್ಮಾಣದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ADVERTISEMENT

ಇಮಾಂ ಅವರ ಬೆಂಬಲದಿಂದ ಹನುಮಂತಯ್ಯ ಅವರಿಗೆ ಆನೆ ಬಲ ಸಿಕ್ಕಂತಾಗಿತ್ತು. ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಅವರು ಇಮಾಂ ಜೊತೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸುತ್ತಿದ್ದರು. ಈ ಬಗ್ಗೆ ಇಮಾಂ ತಮ್ಮ ಆತ್ಮಚರಿತ್ರೆ ‘ಮೈಸೂರು ಆಗ ಮತ್ತು ಈಗ’ ಕೃತಿಯಲ್ಲಿ ದಾಖಲಿಸಿದ್ದಾರೆ.

‘ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಸುಸಜ್ಜಿತ ಆಡಳಿತ ಕಚೇರಿ ನಿರ್ಮಾಣಕ್ಕಾಗಿ ಕಬ್ಬನ್‌ ಪಾರ್ಕ್‌ನಲ್ಲಿ ₹ 15 ಲಕ್ಷ ವೆಚ್ಚದ ಕಾಮಗಾರಿಗೆ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಂದ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಕಟ್ಟಡದ ಕೆಲಸ ಆರಂಭವಾಗಲಿಲ್ಲ. ಹನುಮಂತಯ್ಯ ಮುಖ್ಯಮಂತ್ರಿ ಆದ ಕೂಡಲೇ ವಿಧಾನಸಭೆಯ ಕಾರ್ಯ ಕಲಾಪಗಳಿಗಾಗಿ ಪ್ರತ್ಯೇಕ ಸೌಧ ಕಟ್ಟಲು ತೀರ್ಮಾನಿಸಿದರು. ಅಠಾರ ಕಚೇರಿಯ ಮುಂಭಾಗದ ರೆಸಿಡೆನ್ಸಿ ಬಂಗಲೆಯ ಆವರಣದಲ್ಲಿ ₹ 50 ಲಕ್ಷ ಅಂದಾಜು ವೆಚ್ಚದ ವಿಧಾನಸೌಧ ನಿರ್ಮಾಣ ಕಾಮಗಾರಿ ಶುರುವಾಯಿತು. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲೇ ಸುಂದರವಾದ ಭವನವು ಮೈಸೂರಿನ ಹೆಮ್ಮೆಯಾಗಿ ಪ್ರಕಾಶಿಸಿತು’ ಎಂದು ಇಮಾಂ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

‘ಒಂದು ದಿನ ಹನುಮಂತಯ್ಯ ಮತ್ತು ನಾನು ಕಟ್ಟಡ ಪರಿಶೀಲನೆಗೆ ತೆರಳಿದ್ದೆವು. ಮುಖ್ಯದ್ವಾರದ ಮೇಲ್ಭಾಗದಲ್ಲಿ ನೀತಿ ಬೋಧಕ ವಾಕ್ಯವನ್ನು ಕೆತ್ತಿಸಬೇಕು ಎಂದು ಅವರು ಹೇಳಿದರು. ನಾವಿಬ್ಬರೂ ಯೋಚಿಸಿ, ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ವಾಕ್ಯ ಅರ್ಥಪೂರ್ಣವಾಗಿದೆ ಎಂಬ ತೀರ್ಮಾನಕ್ಕೆ ಬಂದೆವು. ಈ ವಾಕ್ಯ ಕೆತ್ತುವಂತೆ ಮುಖ್ಯ ಎಂಜಿನಿಯರ್‌ ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು’ ಎಂದು ಇಮಾಂ ವಿಧಾನಸೌಧ ನಿರ್ಮಾಣದ ಘಟನಾವಳಿಯನ್ನು ದಾಖಲಿಸಿದ್ದಾರೆ.

ಇಮಾಂ ಪರಿಚಯ:

ಎಲ್ಲೆಡೆ ಕಾಂಗ್ರೆಸ್‌ ಸಮೂಹಸನ್ನಿ ಆವರಿಸಿಕೊಂಡಿದ್ದ ಕಾಲಘಟ್ಟ ಅದು. 1947ರಿಂದ 1957ರವರೆಗೆ ಕೆ.ಸಿ.ರೆಡ್ಡಿ ಮತ್ತು ಕೆಂಗಲ್‌ ಹನುಮಂತಯ್ಯ ಅವರ ಅವಧಿಯಲ್ಲಿ ಕಿಸಾನ್‌ ಮಜ್ದೂರ್‌ ಪಾರ್ಟಿಯ 10 ಸದಸ್ಯರ ಪುಟ್ಟ ಗುಂಪಿನೊಂದಿಗೆ ಇಮಾಂ ಅವರು ಪ್ರತಿಪಕ್ಷದ ನಾಯಕರಾಗಿದ್ದರು.

1957ರಿಂದ 1967ರವರೆಗೆ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಚಿತ್ರದುರ್ಗ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದ ಅವರು, ನೆಹರೂ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ ಹಂಗಾಮಿ ಲೋಕಸಭಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಮಹಾರಾಜರ ಮಂತ್ರಿಮಂಡಲದಲ್ಲಿ ಖಾಸಗಿ ಮಂತ್ರಿಯಾಗಿ ರೈಲ್ವೆ, ನೀರಾವರಿ, ಶಿಕ್ಷಣ, ಪೊಲೀಸ್‌, ಕೈಗಾರಿಕೆ ಸೇರಿ 24 ಖಾತೆಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.

ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅವರು 1983ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.

– ಡಿ.ಶ್ರೀನಿವಾಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.