ADVERTISEMENT

ವಿಶೇಷತೆಗಳ ಕವಿಗೋಷ್ಠಿ: ಪ್ರೇಮಕವಿತೆಗೆ ಬರ

ಹೇಮಾ ವೆಂಕಟ್
Published 3 ಫೆಬ್ರುವರಿ 2015, 19:30 IST
Last Updated 3 ಫೆಬ್ರುವರಿ 2015, 19:30 IST
ಸಮಾನಾಂತರ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿ ಸುಬ್ಬು ಹೊಲೆಯಾರ್‌ ಅಧ್ಯಕ್ಷೀಯ ಭಾಷಣ ಮಾಡಿದರು
ಸಮಾನಾಂತರ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿ ಸುಬ್ಬು ಹೊಲೆಯಾರ್‌ ಅಧ್ಯಕ್ಷೀಯ ಭಾಷಣ ಮಾಡಿದರು   

ಡಾ.ಗೊರೂರು ರಾಮಸ್ವಾಮಿ ಅಯ್ಯಂ­ಗಾರ್ ವೇದಿಕೆ (ಶ್ರವಣಬೆಳಗೊಳ): 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾನಾಂತರ ವೇದಿಕೆ­ಯಲ್ಲಿ ಮಂಗಳವಾರ ನಡೆದ ಕವಿ­ಗೋಷ್ಠಿ ಅನೇಕ ವಿಶೇಷತೆಗಳಿಗೆ ಸಾಕ್ಷಿ­ಯಾ­ಯಿತು. ಬೆಳಿಗ್ಗೆ 11.45ಕ್ಕೆ ಆರಂಭ­ಗೊಂಡ ಕವಿ­ಗೋಷ್ಠಿ 3.45ರವರೆಗೆ ಮೂರು ಗಂಟೆ­ಗಳ ಕಾಲ ನಡೆದರೂ ಸಭಾಂಗಣ ತುಂಬಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ ಸುಮಾರು 50 ಕವಿಗಳು ಕವಿತೆಗಳನ್ನು ವಾಚಿಸಿದರು.

ಎಲ್ಲ ವಯೋಮಾನದ ಕವಿಗಳೂ ಇದ್ದ ಗೋಷ್ಠಿಯಲ್ಲಿ ಓದಿದ 50 ಕವಿತೆ­ಗ­ಳಲ್ಲಿ ಪ್ರೇಮ ಕವಿತೆಗಳೇ ಇರಲಿಲ್ಲ ಎಂಬುದು ಈ ಗೋಷ್ಠಿಯ ವಿಶೇಷ. ಎಲ್ಲವೂ ಸಮಾಜದ ಕ್ರೌರ್ಯ, ರಾಜ­ಕೀಯ ಮೇಲಾಟ, ಜಾಗತೀಕರಣ, ಅಸ­ಮಾನತೆ, ಮಹಿಳಾ ದೌರ್ಜನ್ಯ, ಅಸ್ಪೃ­ಶ್ಯತೆ, ಬಡತನದ ಕರಾಳ ಮುಖವನ್ನು ತೆರೆದಿಟ್ಟ ಕವಿತೆಗಳು. ಒಂದಷ್ಟು ಕವಿತೆ­ಗಳು ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ಮಾಡಿದವು. ‘ಕವಿಗಳು ಭ್ರಮೆಯಿಂದ ಹೊರಬಂದು ಕಾಲದ ಮಹಿಮೆಗೆ ಸ್ಪಂದಿಸುತ್ತಿದ್ದಾರೆ. ಇದು ಶುಭ ಸೂಚನೆ’ ಎಂದು ಅನೇಕರು ಮಾತನಾಡಿಕೊಂಡರು.

ಕವಿಗಳ ಸಾಲಿನಲ್ಲಿ ಹೊನಕಲ್‌ನ ಬಸವ ರಮಾನಂದ ಸ್ವಾಮೀಜಿ ಕೂಡಾ ಇದ್ದು ಕವನ ವಾಚಿಸಿದರು.
‘ಉಳಿ, ಸುತ್ತಿಗೆಯಿಂದ ಮೈಮುಟ್ಟಿ ಮಾತಾಡಿಸುತ್ತಿದ್ದಂತೆ/ಕಲ್ಲು ಕರಗು­ತ್ತಿತ್ತು/ಮೆಲ್ಲನೆ ಅವಯವವನ್ನು ಕೆತ್ತು­ತ್ತಿದ್ದಂತೆ/ ತಂತಾನೆ ಅರಳುತ್ತಿತ್ತು ಮಂತ್ರ ಮೊಳಗುತ್ತಿತ್ತು /ಅಧ್ವರ್ಯುಗ­ಳಿಂದ ಧೂಪವೇಳುತ್ತಿತ್ತು ಹೋಮಾಗ್ನಿ­ಯಿಂದ/ವೇದ ಮಂತ್ರಗಳೊಡನೆ ಮೂರ್ತಿ ಗುಡಿ ಸೇರಿತು/ಕಾದ ನೆಲ ರುಚಿಯುಂಡ ಪಾದರಕ್ಷೆ ಹೊರಗುಳಿ­ಯಿತು...’ ಎಂಬ ಡಾ.ಸಿ.ಎಂ. ಗೋವಿಂದ­ರೆಡ್ಡಿ ಅವರ ಸಾಲುಗಳು ಗೊಮ್ಮಟನ ನಾಡಿನಲ್ಲಿ ನಡೆದ ಕವಿ­ಗೋಷ್ಠಿಗೆ ಉತ್ತಮ ಆರಂಭ ನೀಡಿತ್ತು.

‘ಚಿರಂತನವಾಗಲೆಂದು ನೀನು ಹುಟ್ಟು­ಹಾಕಿ ಹರಿಬಿಟ್ಟ/ಸಮತತ್ವ ಸಹ­ಬಾಳ್ವೆಯ ಜಂಗಮದ/ ಹರಿ­ಗೋಲಿಗೆ ಸರಹಗ್ಗ ಬಿಗಿದು ಜಗ್ಗಿ/ ಮತ್ತೇ ಸ್ಥಾವರದ ಗೂಟಕ್ಕೆ ಬಿಗಿಯಲಾ­ಗಿದೆ ಮನುಷ್ಯತ್ವದ ಪಂಜು ಹೊತ್ತಿಸಿ ಜಗಕ್ಕೆ ಬೆಳಕು ಹರಡಿದಾ ನೀನು/ ಏನು ತಲ್ಲಣವೋ ಮುವತ್ತರ ಅನಿವಾರ್ಯಕ್ಕೆ ಕೂಡಲ ಸಂಗಮನೊಡಲಿಗೆ ತನುವ ಲಿಂಗೈಕ್ಯಗೊಳಿಸಿದೆ/ ಈಗ ನೋಡು­ವೆಯಾ ನಿನ್ನ ಸಂಗಮದೇವನಾಂಕಿತ ಪ್ರಭೆಗೆ ಕಪ್ಪು ಕುಂಚಿಗೆಯ ಮುಸುಕು ಹೊಚ್ಚಿ/ ಬರಿ ಲಿಂಗದೇವನಿಗೆ ವಜ್ರ­ಕಿರೀಟವಿಡಲಾಗುತ್ತಿದೆ ಬಸವಣ್ಣಾ...’ ಎಂಬ ರಹಿಮಾನ್ ಮುಲ್ಲಾ ಅವರ  ‘ಪ್ರಿಯ ಅಣ್ಣನಿಗೆ’ ಕವನದ ಸಾಲುಗಳು ಜನರ ಮೆಚ್ಚುಗೆ ಗಳಿಸಿದವು.

ಸಿ. ಮಂಗಳಾ ಅವರ ‘ಅವ್ವ’ ಕವಿತೆ,  ‘ಮುಸ್ಸಂಜೆ ಹೊತ್ನಾಗ ದೀಗಿ ಮುಡ್ಸಿ/ ಒಲಿಯೊಳ್ಗ ಬೆಂಕಿ ಹೊತ್ಸಿ/ಕೈಚಾಚ್ಯಾಳ ಅವ್ವ ಮೈ ಬಾಚ್ಯಾಳ/ ಹಡೆದ ಬ್ಯಾನಿ, ಅಪ್ಪನ ಗ್ಯಾನ/ಅದೆಲ್ಲಿ ಕುಡ್ದು ಬಿದ್ದಾನೋ/ಗಳಿಗಳಿಗೀ ನಿಟ್ಟಿಸಿರಿಗೆ ಬೂದ್ಯಾ­ಗಿನ ಕೆಂಡ ನಿಗಿನಿಗಿ/ ಆಕಿ ಮನಸಿನ ತುಂಬ ದಟ್ಟ ಹೊಗಿ...’ ಸಾಲು­ಗಳು ಆಡುಭಾಷೆಯ ಜೊತೆಗೆ ಅಂತಃ­ಸತ್ವದಿಂದಲೂ ಗಮನ ಸೆಳೆಯಿತು.

‘ಕನ್ನಡದಲಿ ಕರೆದರೆ ಕ್ರಿಸ್ತ, ಅಲ್ಲಾ, ರಾಮ ಓ ಎನ್ನರೇ?/ ಕ್ರಿಸ್ತ, ಅಲ್ಲಾ, ರಾಮರಿಗೆ ಕನ್ನಡ ಬಾರದಿದ್ದರೆ ಮತ್ಯಾರಿಗದು ಬರುವುದು’ ಎನ್ನುವ ವಿಲಿಯಂ ಅವರ ‘ಕನ್ನಡದಲಿ ಕರೆದರೆ’ ಕವಿತೆ ಚಪ್ಪಾಳೆ ಗಿಟ್ಟಿಸಿಕೊಂಡಿತು. ‘ದಂಡಪಿಂಡಗಳುಂಡ ಎಂಜಲೆಲೆ ಮೇಲೆ ಹಸಿದವರ ಉರುಳಾಟ/ ಸಂಪ್ರ­ದಾಯದ ಹೆಸರಲಿ ಕತ್ತಲಾಗುವ ಮುನ್ನವೇ ಬೆತ್ತಲಾಗುವ ಪರಿಪಾಠ/ ಸಂತ ಬಾಬಾ ಸನ್ಯಾಸಿಗಳ ಹೆಣ್ಣು­ಬೆಕ್ಕು­ಗಳೊಂದಿಗಿನ ಚಕ್ಕಂದದಾಟ’ ಎಂಬ ಸಾಲುಗಳಿರುವ ಹುಸೇನ್ ಬಾಷಾ ಅವರ ‘ಪ್ರಚಲಿತ-ವಿಚಲಿತ’ ಕವಿತೆ ಶಿಳ್ಳೆ ಗಿಟ್ಟಿಸಿಕೊಂಡಿತು.

ಮಮತಾ ಅರಸೀಕೆರೆ ಅವರ, ‘ಶುಭವಾಗುತೈತಿ ದೇವನೂರರಿಂದ ಪತ್ರ ಬಂದೈತಿ/ ಎಡಗಾಲಲ್ಲಿ ಸೇರೊದ್ದು ಬಂದ ಆಂಗ್ಲಮ್ಮನ ಅಂತಸ್ತು ಕುಸಿದು/ ಬಲಗಾಲೂರಿ ಮಣ್ಣ ಆಳಕ್ಕೆ ಬೇರಿಳಿಸಿದ ಕನ್ನಡಮ್ಮ/ ನಿನ್ನ ಕೀರ್ತಿ ಪತಾಕೆ ಹಾರುತೈತಿ’ ಎಂಬ ಸಾಲುಗಳು, ಮಹೇಶ ಊಗಿನಹಳ್ಳಿ ಅವರ, ‘ನಮ್ಮದು ಮೇಕ್ ಇನ್ ಇಂಡಿಯಾ’ ಕವನದ, ‘ಆಚೆ ಮನೆ ಪುಟ್ಟಕ್ಕನ ಬಾರೆಹೊಲ ಹೈವೇ ಪಾಲಾಯ್ತು/ ಈಚೆ ಮನೆ ಕರಿ­ಯಪ್ಪನ ಗದ್ದೆ ತೋಟ ನೈಸ್ ರೋಡು, ಕಾರಿಡಾರು ತಿಂದಾಯ್ತು/ ನಮ್ಮಲ್ಲಿ ಹಳ್ಳಿ ಕೊಳೆಗೇರಿ­ಗಳೇ ಇಲ್ಲ/ ನಮ್ಮದು ಸ್ವಚ್ಛ ಭಾರತ ಸ್ವಾಮಿ’ ಎಂಬ ಸಾಲುಗಳು ಜನಮನ್ನಣೆ ಗಳಿಸಿದರು. ಉಳಿದ ಕವಿತೆ­ಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದವು.

ಬಾಹುಬಲಿಯೇ ಒಂದು ಮಹಾಕಾವ್ಯ
‘ಬಾಹುಬಲಿಯೇ ಒಂದು ಮಹಾಕಾವ್ಯ’ ಎಂದು ಕವಿ ಸುಬ್ಬು ಹೊಲೆಯಾರ್ ಹೇಳಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲ್ಲು ಕಾವ್ಯವಾಗಿದೆ. ಹೂ, ಬಳ್ಳಿಯೂ ಆಗಿದೆ. ಆದರೆ, ಜೀವವಿರುವ ಮನುಷ್ಯ ಮುಗುಳ್ನಗದಿದ್ದರೆ, ಮಾನವೀಯತೆ ಮೆರೆಯದಿದ್ದರೆ ಹೇಗೆ ಎಂಬ ಪ್ರಶ್ನೆ ಬಾಹುಬಲಿಯನ್ನು ನೋಡಿದಾಗ ಏಳುತ್ತದೆ ಎಂದು ವಿಶ್ಲೇಷಿಸಿದರು.

ಇಂಥ ಪ್ರಶ್ನೆಗಳನ್ನು ಬುದ್ಧನಿಂದ ಹಿಡಿದು ವಚನಕಾರರು, ದಾಸರಿಂದ ಹಿಡಿದು ಸಿದ್ಧಲಿಂಗಯ್ಯರವರೆಗೂ ಕೇಳುತ್ತಲೇ ಇದ್ದೇವೆ. ಆದರೂ, ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉತ್ತರ ಸಿಗು­ತ್ತದೆ ಎಂಬ ಕನಸನ್ನು ಮಾತ್ರ ನಾವು ಬಿಟ್ಟಿಲ್ಲ. ಅದ­ಕ್ಕಾ­ಗಿಯೇ  ಇಂಥ ಸಮ್ಮೇಳನಗಳು ಮುಖ್ಯವಾಗುತ್ತದೆ ಎಂದರು.

‘ವೈಯಕ್ತಿಕ ದುಃಖ ಜಾಗತಿಕ ದುಃಖವಾಗಿ ಕಾಣುತ್ತದೆ. ಜಾಗತಿಕ ದುಃಖ ವೈಯಕ್ತಿಕವಾಗಿ ದಾಖಲಾಗುತ್ತದೆ. ಪೇಶಾವರದಲ್ಲಿ ಗುಂಡಿನ ದಾಳಿಗೆ ಒಳಗಾದ ಮಕ್ಕಳ ಅಳು ಈಗಲೂ ಕೇಳಿಸುತ್ತಿದೆ. ಹಿಂಸೆ ದೂರದಿಂದ ಕಾಣುತ್ತಿರುವುದಲ್ಲ. ಅದನ್ನೇ ನಾವು ಉಸಿರಾಡುತ್ತಿದ್ದೇವೆ ಎಂಬ ಮುಜುಗರ ನಮ್ಮಲ್ಲಿದ್ದರೆ ಪರಿಹಾರ ಗೋಚರಿಸುತ್ತದೆ ಎಂದರು.

ನಮ್ಮ ದೇಶದಲ್ಲಿ ಮನೆಗೆ ವಾಪಸ್ ಬರುವುದು, ಹೋಗುವುದು ಎಂಬ ಚರ್ಚೆ ನಡೆಯುತ್ತಿದೆ. ಬುದ್ಧನಿಗೆ ತಥಾಗತ ಎಂದೂ ಕರೆಯುತ್ತಾರೆ. ಇದರ ಅರ್ಥ ಬಂದು ಹೋಗು ಎಂದು. ನಾವ್ಯಾರೂ ಇಲ್ಲಿ ಶಾಶ್ವತವಾಗಿ ಇರಲು ಬಂದಿಲ್ಲ. ಅಲ್ಲಮ ಹೇಳಿದ ಬಯಲಿನ ಅರ್ಥವೂ ಅದೇ ಆಗಿದೆ. ಸಂತ ಶರೀಫರು ಹೇಳಿದ ‘ಸೋರುತಿಹುದು ಮನೆಯ ಮಾಳಿಗೆ...’, ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ...’  ಎಂಬ ಸಾಲುಗಳು ಇದನ್ನೇ ಹೇಳಿವೆ ಎಂದರು.

ಗಾಳಿಯ ದೇಹದಿಂದ/ಮೈತ್ರಿಯ ನೀಲಾಕಾಶ­ದಿಂದ/ ಕರುಣೆಯ ಮಣ್ಣಿನಿಂದ/ಜಂಗಮ ನೀರಿನಿಂದ/ ಬೆಳಕಿನ ಮುಗುಳ್ನಗೆಯ ಮನೆ ಕಟ್ಟಿದ್ದೇವೆ/ ಅಲ್ಲಿ ನನ್ನಂಥವರ ವಾಸ/ ಅಲ್ಲಿ ಎಲ್ಲರೂ ಬಂದು ಹೋಗಬಹುದು ಎಂಬ ತಮ್ಮ ಕವಿತೆಯನ್ನು ವಾಚಿಸಿದರು.

ಪ್ರಮಾಣಪತ್ರ ನೀಡಿಲ್ಲ
ಸಾಹಿತ್ಯ ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆಯ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿ­ಸಿ­ದರು. 'ಮುಖ್ಯ ವೇದಿಕೆಯಲ್ಲಿ ಅವಕಾಶ ಬೇಕು ಎಂಬ ಚಿತ್ರರಂಗ­ದವರ ಬೇಡಿಕೆಗೆ ಕಸಾಪ ಮನ್ನಣೆ ನೀಡಿತ್ತು. ಆದರೆ, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಪ್ರಮಾಣ­ಪತ್ರವನ್ನೂ ನೀಡಿಲ್ಲ. ಈ ಕ್ರಮ ಸರಿಯಲ್ಲ' ಎಂದು ಕವಿಗಳು ಅಸಮಾಧಾನ ಹೊರಹಾಕಿದರು.

ADVERTISEMENT

ಡಾ.ವಸುಗೆ ಶ್ರದ್ಧಾಂಜಲಿ
ಕವಿಗೋಷ್ಠಿಯ ಆಶಯಭಾಷಣ ಮಾಡಬೇಕಿದ್ದ ಡಾ.ಮಳಲಿ ವಸಂತಕುಮಾರ್ ಉಪಸ್ಥಿತರಿರಲಿಲ್ಲ. ಅವರ ಬರುವಿಕೆಗಾಗಿ ಕಾದಿದ್ದ ಸಂಘಟಕರಿಗೆ ಮಳಲಿ ಅವರ ಪುತ್ರಿ ಡಾ.ವಸು ಅವರ ನಿಧನವಾರ್ತೆ ತಲುಪಿತ್ತು. ತಕ್ಷಣ ಒಂದು ನಿಮಿಷ ಮೌನಾಚರಣೆ ಮಾಡಿ ನಂತರ ಕಾರ್ಯಕ್ರಮ ಆರಂಭಿಸಲಾಯಿತು. ಅನೇಕ ಕವಿಗಳು ಕವನವಾಚನಕ್ಕೂ ಮುನ್ನ ವಸು ಅವರನ್ನು ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.