ADVERTISEMENT

ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ

ವರದಿ ಸಲ್ಲಿಸಿದ ಬೋರಲಿಂಗಯ್ಯ ಸಮಿತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 5:27 IST
Last Updated 17 ಜನವರಿ 2016, 5:27 IST
ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ
ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ   

ಬೆಂಗಳೂರು: ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು  ಹಂಪಿ ಕನ್ನಡ ವಿ.ವಿಯ ವಿಶ್ರಾಂತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ನೇತೃತ್ವದ ಸಮಿತಿ ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.

ಎಂಜಿನಿಯರಿಂಗ್‌, ವೈದ್ಯಕೀಯ, ಕಾನೂನು, ಕೃಷಿ ಇತ್ಯಾದಿ ತರಗತಿಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವ ಕುರಿತು ಅಧ್ಯಯನ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ  ಸಮಿತಿ ರಚಿಸಿತ್ತು. ಇದು ಶನಿವಾರ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ವರದಿ ಸಲ್ಲಿಸಿದ್ದು, 10 ಶಿಫಾರಸುಗಳನ್ನು ಮಾಡಿದೆ.

ನಂತರ ಮಾತನಾಡಿದ ಬೋರಲಿಂಗಯ್ಯ, ‘ನಮ್ಮ ಪದವಿ, ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಇಂಗ್ಲಿಷ್‌ ಕಡ್ಡಾಯ. ಆದರೆ, ಕನ್ನಡ ಕಡ್ಡಾಯ ಅಲ್ಲ. ವಿವಿಗಳಲ್ಲಿ, ವೃತ್ತಿ ಶಿಕ್ಷಣದಲ್ಲಿ ಕನ್ನಡ ಬೋಧನೆ ಕಡ್ಡಾಯ ಮಾಡುವ ಪ್ರಯತ್ನಗಳು ಹಿಂದೆ ನಡೆದಿದ್ದವು. ಆದರೆ, ಉನ್ನತ ಶಿಕ್ಷಣ ಇಲಾಖೆಯು ಅಧಿಕೃತವಾಗಿ ಆದೇಶ ಹೊರಡಿಸದೇ ಇದ್ದುದರಿಂದ ಜಾರಿಯಾಗಿರಲಿಲ್ಲ’ ಎಂದರು.

ಒಂದೇ ಪಠ್ಯ ಅಲ್ಲ: ‘ಎಲ್ಲ ವಿದ್ಯಾರ್ಥಿಗಳಿಗೂ ಏಕ ರೂಪದ ಪಠ್ಯ ಬೇಡ ಎಂದು ವರದಿಯಲ್ಲಿ ಹೇಳಿದ್ದೇವೆ. ಸಾಂಸ್ಕೃತಿಕ ಕನ್ನಡ, ಕ್ರಿಯಾತ್ಮಕ ಕನ್ನಡ ಎಂಬ 2 ವಿಭಾಗಗಳನ್ನು ಮಾಡಿದ್ದೇವೆ. ಕನ್ನಡ ಬಾರದವರಿಗೆ ಸರಳ ಕನ್ನಡ ಪಠ್ಯ ರೂಪಿಸಬೇಕು ಎಂದು ಸಲಹೆ ನೀಡಿದ್ದೇವೆ. ಕಡ್ಡಾಯವಾಗಿ ಪರೀಕ್ಷೆ ನಡೆಸಲೂ ಸೂಚಿಸಲಾಗಿದೆ’ ಎಂದು ಬೋರಲಿಂಗಯ್ಯ ಹೇಳಿದರು.

ಬೋರಲಿಂಗಯ್ಯ ಸಮಿತಿ ಶಿಫಾರಸುಗಳು:

* ರಾಜ್ಯದ ಸಾಂಪ್ರದಾಯಿಕ ಮತ್ತು ವೃತ್ತಿಪರ ಕೋರ್ಸ್‌ನ ಎಲ್ಲ ವಿಶ್ವವಿದ್ಯಾಲಯಗಳೂ ಸೇರಿದಂತೆ ಬೋಧನಾ ವ್ಯವಸ್ಥೆ ಇರುವ ಎಲ್ಲ ಕಡೆ ಕನ್ನಡ ಭಾಷಾ ಬೋಧನೆ ಕಡ್ಡಾಯ.

* ಪದವಿ ಪೂರ್ವ ಶಿಕ್ಷಣ ಹಂತದಿಂದ ಬಂದವರಿಗೆ 1,2, 3 ಮತ್ತು 4ನೇ ಸೆಮಿಸ್ಟರ್‌ಗಳಲ್ಲಿ ಕನ್ನಡ ಬೋಧನೆ ಕಡ್ಡಾಯ. ಬಿಎ, ಬಿಎಸ್ಸಿ, ಬಿಕಾಂ ಪದವಿಮುಗಿಸಿ 3 ವರ್ಷದ ಎಲ್‌ಎಲ್‌ಬಿಗೆ ಪ್ರವೇಶ ಪಡೆಯುವವರಿಗೆ 2 ಸೆಮಿಸ್ಟರ್‌ಗಳಲ್ಲಿ ಕಡ್ಡಾಯ ಕನ್ನಡ.

* ಕನ್ನಡ ಮಾತೃ ಭಾಷೆಯ ವಿದ್ಯಾರ್ಥಿಗಳಿಗೆ ‘ಸಾಂಸ್ಕೃತಿಕ ಕನ್ನಡ’ದ ಜೊತೆಗೆ ‘ಕ್ರಿಯಾತ್ಮಕ ಕನ್ನಡ’ ಬೋಧಿಸಬೇಕು. ಅಂದರೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿ ನಾಡು ನುಡಿಯ ಪರಂಪರೆಯನ್ನು ಬೋಧಿಸುವ ಜೊತೆಗೆ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ತಾಂತ್ರಿಕ ವಿಷಯಗಳ ಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡ ಪಠ್ಯ ರೂಪಿಸಬೇಕು.

* ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ಸ್ವರೂಪದ ಸರಳ ಪಠ್ಯ ರೂಪಿಸುವುದು ಸೂಕ್ತ.

* ಕನ್ನಡ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪಠ್ಯಕ್ರಮಗಳನ್ನು ಸಿದ್ಧಪಡಿಸಬೇಕು. ಆದರೆ, ಈ ಪಠ್ಯಗಳ ಶೇ 50ರಷ್ಟು ಭಾಗ ಎಲ್ಲ ವಿವಿಗಳಿಗೂ ಏಕರೂಪದಲ್ಲಿರಬೇಕು. ಉಳಿದರ್ಧ ಭಾಗ, ಆಯಾ ವಿವಿಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿರುವ ವಿಷಯಗಳಿಗೆ ಪೂರಕವಾಗಿರಬೇಕು.

* ಪಠ್ಯ ರಚಿಸಲು ಪ್ರತಿ ವಿವಿಯಲ್ಲೂ ಉಪಸಮಿತಿ ರಚಿಸಬೇಕು. ತಜ್ಞರನ್ನು ಸೇರಿಸುವುದು ಅಪೇಕ್ಷಿತ.

* ಶೀಘ್ರವಾಗಿ ಪಠ್ಯದ ಸಿದ್ಧತೆ ಮುಗಿಸಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ  ಕಡ್ಡಾಯವಾಗಿ ಜಾರಿಗೆ ತರಬೇಕು.

* ಕನ್ನಡ ಬೋಧನೆ, ಪಠ್ಯ ರಚನೆ ಮತ್ತು ಅಭಿವೃದ್ಧಿಗೆ ವಿವಿಯ ಅನುದಾ ನದಲ್ಲಿ ಪ್ರತ್ಯೇಕ ಮೊತ್ತ ಮೀಸಲಿಡಬೇಕು.

* ಪ್ರಸ್ತುತ ಪದವಿ ಕಾಲೇಜುಗಳಲ್ಲಿ ಜಾರಿ ಇರುವ, ಕನ್ನಡ ಭಾಷೆಗೆ ಬದಲಾಗಿ ಬೇರೆ ಯಾವುದಾದರೂ ಭಾರತೀಯ ಭಾಷೆ ಆಯ್ಕೆ ಮಾಡಬಹುದು ಎಂಬ ನೀತಿ ಕೈ ಬಿಡಬೇಕು. ಇಂಗ್ಲಿಷ್ ಭಾಷೆಯಂತೆ ಕನ್ನಡವನ್ನೂ ಕಡ್ಡಾಯಗೊಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT