ಬೆಂಗಳೂರು: ‘ಶ್ರವಣಬೆಳಗೊಳದಲ್ಲಿ 567 ಶಾಸನಗಳಿವೆ. ಇವುಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸುವ ಮೂಲಕ ಹೊಸ ಅರ್ಥ ಕಂಡುಕೊಳ್ಳಬಹುದು. ಜೈನರು ತಿಳಿಸದ ಸತ್ಯಗಳನ್ನು ನಾವು ಹೇಳಬಹುದು. ಅದಕ್ಕಾಗಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ’ ಎಂದು ಇತಿಹಾಸತಜ್ಞ ಪ್ರೊ. ಷ.ಶೆಟ್ಟರ್ ಅಭಿಪ್ರಾಯಪಟ್ಟರು.
ಶ್ರವಣಬೆಳಗೊಳ ಚಿಕ್ಕಬೆಟ್ಟ ಚಂದ್ರಗಿರಿ ಮಹೋತ್ಸವ ಅಂಗವಾಗಿ ನಗರದ ಕರ್ನಾಟಕ ಜೈನ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ‘ಶಾಸನ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
‘ದಂತಕತೆಗಳಲ್ಲಿ ಅಡಕವಾಗಿರುವ ಕೆಲವು ವಿಷಯಗಳು ಸತ್ಯ. 14ನೇ ಶತಮಾನದಲ್ಲಿ ಗೊಮ್ಮಟನನ್ನು ಹಾಳು ಮಾಡಲು ತಂತ್ರಗಳು ನಡೆದವು. ಈ ಬಗ್ಗೆ ದಾಖಲೆಗಳಿವೆ. ಆಗ ಮೂರ್ತಿಯ ಸುತ್ತ ಕೋಟೆ ಕಟ್ಟಲಾಯಿತು. ಬಾಹುಬಲಿ ಮೂರ್ತಿಯನ್ನು ರಕ್ಷಿಸುವ ಕೆಲಸ ಆಗ ನಡೆಯದಿದ್ದರೆ ಈಗಿನ ಸ್ವರೂಪದಲ್ಲಿ ನಮಗೆ ಲಭಿಸುತ್ತಿರಲಿಲ್ಲವೇನೊ?’ ಎಂದು ಅವರು ನುಡಿದರು.
‘ಸಂಶೋಧನೆ ಒಂದು ಹಂತಕ್ಕೆ ಬಂದು ನಿಂತಿದೆ. ಶಾಸನಗಳ ಸಂಗ್ರಹವೂ ತೃಪ್ತಿದಾಯಕವಾಗಿದೆ. ಆದರೆ, ಅವುಗಳನ್ನು ಅರ್ಥ ಮಾಡಿಕೊಳ್ಳುವ ಕಾರ್ಯ ನಡೆಯಬೇಕಾಗಿದೆ. ಏಕೆಂದರೆ ಶಾಸನಗಳಲ್ಲಿ ಇನ್ನೂ ಹಲವು ಹೊಸ ವಿಷಯಗಳು ಅಡಕವಾಗಿವೆ’ ಎಂದರು.
ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಮುದ್ರಣಗೊಂಡ ಪುಸ್ತಕವನ್ನು ಮರುಮುದ್ರಣ ಮಾಡಬಹುದು. ಶಾಸನವೆಂದರೆ ಕಲ್ಲಿನ ಪುಸ್ತಕವಿದ್ದಂತೆ. ಅವು ಶಾಶ್ವತ. ಶಾಸನಗಳನ್ನು ರಕ್ಷಿಸುವಂಥ ಮಹತ್ವದ ಕೆಲಸ ನಡೆಯಬೇಕಾಗಿದೆ. ಅವುಗಳ ಮಹತ್ವವನ್ನು ಜಗತ್ತಿಗೆ ಸಾರಬೇಕಾಗಿದೆ’ ಎಂದರು.
‘ಚಿಕ್ಕಬೆಟ್ಟ ಚಂದ್ರಗಿರಿ, ವಿಶ್ವಕ್ಕೆ ವಿಶೇಷ ಕೊಡುಗೆ ನೀಡಿದೆ. ಇಲ್ಲಿ ಆಚರಿಸುವ ಸಲ್ಲೇಖನ ವ್ರತಕ್ಕೆ ವಿಶೇಷ ಮಹತ್ವವಿದೆ. ಆದರೆ, ಈ ವ್ರತವನ್ನು ಕೆಲವರು ಆತ್ಮಹತ್ಯೆ ಎಂದು ಟೀಕಿಸುತ್ತಾರೆ. ಇದು ತಪ್ಪು ಭಾವನೆ’ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕನ್ನಡ ಕಟ್ಟುವ ಕೆಲಸ ನಡೆದಿದೆ. ಶಾಸನಗಳ ಅಧ್ಯಯನ ನಡೆಯುತ್ತಿದೆ. ಮುಂದಿನ ತಲೆಮಾರಿಗೂ ಕನ್ನಡ ಪರಂಪರೆಯನ್ನು ಮುಟ್ಟಿಸುವ ಅನಿವಾರ್ಯವಿದೆ. ಈ ಕೆಲಸವನ್ನು ಕ್ಷೇತ್ರದವರು ಮಾಡಬೇಕು’ ಎಂದು ಹೇಳಿದರು.
ಪ್ರೊ.ಹಂಪ ನಾಗರಾಜಯ್ಯ, ‘ಕ್ಷೇತ್ರದ ಚಿಕ್ಕಬೆಟ್ಟವು ಭಾರತದ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಇಬ್ಬರು ಚಕ್ರವರ್ತಿಗಳು ಸಲ್ಲೇಖನ ವ್ರತ ಸ್ವೀಕ ರಿಸಿದ ಪುಣ್ಯ ಭೂಮಿ ಇದು’ ಎಂದು ತಿಳಿಸಿದರು.
11 ಮಂದಿ ಇತಿಹಾಸ ಸಂಶೋಧಕರಿಗೆ ‘ಶಾಸನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₨ 35,001 ಗೌರವ ಧನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ.
ಸಮಾರಂಭದ ಆರಂಭದಲ್ಲಿ ಕಲಾವಿದರು ‘ಶಿಲಾಶಾಸನ ನಮನ’ ನಾಟಕ ಪ್ರಸ್ತುತಪಡಿಸಿದರು. ಕರ್ನಾಟಕ ಜೈನ ಅಸೋಸಿಯೇಷನ್‌ನ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.