ಬೆಂಗಳೂರು: ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ಪುನರುಜ್ಜೀವನ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಸದೃಢಗೊಳಿಸಲು `ಅನ್ನ ಭಾಗ್ಯ' ಯೋಜನೆಯ ಮಾದರಿಯಲ್ಲೇ `ಶಿಕ್ಷಣ ಭಾಗ್ಯ' ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕೋ.ಚೆನ್ನಬಸಪ್ಪ, ಪ್ರೊ.ಬರಗೂರು ರಾಮಚಂದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಎಲ್.ಹನುಮಂತಯ್ಯ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
`ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ನೀವು ಹಲವು ಬಾರಿ ಹೇಳಿದ್ದೀರಿ. ಆದರೆ, ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳನ್ನು ದೊಡ್ಡ ಶಾಲೆಗಳ ಜೊತೆ ವಿಲೀನ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸ್ಪಷ್ಟವಾಗಿ ಹೇಳುತ್ತಿರುವುದು ಆಘಾತ ಉಂಟುಮಾಡಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 18ರಂದು ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
`ಬಡ ಮಕ್ಕಳ ಶಾಲಾ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಶಿಕ್ಷಣ ಭಾಗ್ಯ ಯೋಜನೆ ಜಾರಿಗೆ ತರಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತದೆ. ಈ ರೀತಿಯ ನಿರ್ಧಾರ, ಸಂಕಷ್ಟದಲ್ಲಿರುವ ರೋಗಿಗೆ ಚಿಕಿತ್ಸೆ ನೀಡುವ ಬದಲಿಗೆ ದಯಾಮರಣ ನೀಡುವಂತಹ ಕ್ರೂರ ತೀರ್ಮಾನಕ್ಕೆ ಸಮನಾಗುತ್ತದೆ. ಇದರಿಂದ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಆಗುತ್ತದೆ' ಎಂದು ಉಲ್ಲೇಖಿಸಿದ್ದಾರೆ.
ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಗ್ರಾಮದ ಅಂಗನವಾಡಿ, ಪೂರ್ವ ಪ್ರಾಥಮಿಕ ಘಟಕಗಳ ಜೊತೆ ವಿಲೀನಗೊಳಿಸುವ ಬಗ್ಗೆಯೂ ಪರಿಶೀಲನೆ ನಡೆಸಬಹುದು. ವಿದ್ಯಾರ್ಥಿಗಳು ಕಡಿಮೆ ಇರುವ ಶಾಲೆಗಳನ್ನು ಏಕೋಪಾಧ್ಯಾಯ ಶಾಲೆಗಳೆಂದು ಘೋಷಿಸಿ, ಪುನರುಜ್ಜೀವನಗೊಳಿಸಬೇಕು. ಪ್ರಾಥಮಿಕ ಶಾಲೆಗಳನ್ನು `ಸಾಂಸ್ಕೃತಿಕ ಕೇಂದ್ರ' ಎಂದು ಪರಿಗಣಿಸಿಬೇಕು ಎಂದು ಸಲಹೆ ಮಾಡಿದ್ದಾರೆ.
ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ಮಾಧ್ಯಮ ಕನ್ನಡವೇ ಆಗಿರಬೇಕು. ಆದರೆ, ಇಂಗ್ಲಿಷನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸುವ ಕ್ರಮ ಜಾರಿಗೆ ಬರಬೇಕು. ಆಯಾ ಜಿಲ್ಲೆಗಳಲ್ಲಿ ಕೆಟ್ಟ ಸ್ಥಿತಿಯಲ್ಲಿ ಇರುವ ಶಾಲೆಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ತಮ್ಮ ವ್ಯಾಪ್ತಿಯಲ್ಲಿನ ಮಕ್ಕಳನ್ನು ಶಾಲೆಗಳಿಗೆ ಕರೆತರುವ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯಿತಿಗಳಿಗೂ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.