ADVERTISEMENT

ಶಿವರಾಮೇಗೌಡ ಕೋತಿ ಇದ್ದಂತೆ: ಅಶ್ವಥ್‌ ನಾರಾಯಣ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 15:48 IST
Last Updated 26 ಅಕ್ಟೋಬರ್ 2018, 15:48 IST

ನಾಗಮಂಗಲ: ‘ವೈದ್ಯರು ಕೋತಿಯ ಮೇಲೆ ಪ್ರಯೋಗ ಮಾಡುತ್ತಾರೆ. ಅಂತೆಯೇ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮುಖಂಡರು ಎಲ್‌.ಆರ್‌.ಶಿವರಾಮೇಗೌಡರ ಮೇಲೆ ಕೋತಿಯಂತೆ ಪ್ರಯೋಗ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಅಶ್ವಥ್‌ ನಾರಾಯಣ್‌ ಶುಕ್ರವಾರ ಇಲ್ಲಿ ವ್ಯಂಗ್ಯವಾಡಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಮನುಷ್ಯರಿಗೆ ಹೊಸ ಕಾಯಿಲೆ ಬಂದಾಗ ಕೋತಿಯ ಮೇಲೆ ಪ್ರಯೋಗ ಮಾಡಿ ಔಷಧಿ ಕಂಡು ಹಿಡಿಯುತ್ತಾರೆ. ಕೋತಿ ಆ ಔಷಧಿಯನ್ನು ತಿಂದು ಬದುಕಿದರೆ ಮನುಷ್ಯರಿಗೆ ಚಿಕಿತ್ಸೆ ಕೊಡುತ್ತಾರೆ. ಹಾಗೆಯೇ ಈ ಚುನಾವಣೆಯಲ್ಲಿ ಜೆಡಿಎಸ್‌ ಮುಖಂಡರು ಶಿವರಾಮೇಗೌಡರನ್ನು ಕಣಕ್ಕಿಳಿಸಿ ಪ್ರಯೋಗ ಮಾಡುತ್ತಿದ್ದಾರೆ. ಅವರು ಗೆದ್ದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡರ ಮೊಮ್ಮಗನನ್ನು ಕಣಕ್ಕಿಳಿಸುತ್ತಾರೆ. ಇಲ್ಲಿಯ ಜನ ಬದುಕಿರುವುದು ದೇವೇಗೌಡರ ಕುಟುಂಬ ಸದಸ್ಯರನ್ನು ಗೆಲ್ಲಿಸುವುದಕ್ಕಾಗಿ ಅಲ್ಲ. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ಗೋಸುಂಬೆ ಪಕ್ಷ:ಶಾಸಕ ಸಿ.ಟಿ.ರವಿ ಮಾತನಾಡಿ ‘ಜೆಡಿಎಸ್‌ ಗೋಸುಂಬೆ ಪಕ್ಷ. ಎಚ್‌.ಡಿ.ರೇವಣ್ಣ, ಎಚ್‌.ಡಿ.ಕುಮಾರಸ್ವಾಮಿ ಅವರ ಪುಂಡಾಟ ನೋಡಿದ್ದರೂ ಎಚ್‌.ಡಿ.ದೇವೇಗೌಡರಿಗೆ ಅವರ ಮೇಲೆ ಧೃತರಾಷ್ಟ್ರ ಪ್ರೇಮ ಹೊಂದಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡ ಹೇಳಿದ್ದರು. ಆದರೆ ಮೋದಿ ಅವರು ಪ್ರಧಾನಿಯಾದ ನಂತರ ಅವರನ್ನು ಅತೀ ಹೆಚ್ಚು ಬಾರಿ ಭೇಟಿಯಾಗಿದ್ದಾರೆ. ಈಗ ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಬಂದ್‌ ಮಾಡುವುದಾಗಿ ಹೇಳುತ್ತಿದ್ದಾರೆ. ಅವರು ದಕ್ಷಿಣ ಭಾರತದ ಜನರನ್ನು ಗುತ್ತಿಗೆ ಪಡೆದಿದ್ದಾರಾ’ ಎಂದು ಪ್ರಶ್ನಿಸಿದರು.

ADVERTISEMENT

ಚಲುವರಾಯಸ್ವಾಮಿಗೆ ಜೈಕಾರ:ಬಿಜೆಪಿ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಪರ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ‘ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಅವರಿಗೆ ಅಪಮಾನವಾಗಿದ್ದು ಆ ಬಗ್ಗೆ ನನಗೆ ನೋವಿದೆ. ಅವರ ಬೆಂಬಲಿಗರು ಬಿಜೆಪಿಗೆ ಮತ ಹಾಕುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.