ADVERTISEMENT

ಶ್ರೀಮಂತಿಕೆ ಕಳೆದುಕೊಂಡ ಕನ್ನಡ: ವಿಷಾದ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2013, 19:59 IST
Last Updated 29 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಕನ್ನಡ ಭಾಷೆ ಶ್ರೀಮಂತಿಕೆ ಕಳೆದು­ಕೊಂಡಿದೆ. ಕನ್ನಡದ ಶೇ 90ರಷ್ಟು ಭಾಗ  ಸತ್ತೇ ಹೋಗಿದೆ’ ಎಂದು ಹಿರಿಯ ಸಂಶೋಧಕ ಡಾ.ಟಿ.ವಿ.­ವೆಂಕಟಾಚಲ ಶಾಸ್ತ್ರಿ ನೋವಿನಿಂದ ನುಡಿದರು. ನಗರದಲ್ಲಿ ಭಾನುವಾರ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಕನ್ನಡ ಮೂಲದ ಮರು­ವ್ಯಾಖ್ಯಾನ’ ಗೋಷ್ಠಿಯಲ್ಲಿ ಮಾತನಾಡಿದರು.

‘ಹಳಗನ್ನಡ ಸವಿಯಾದುದು. ಮಹಾಕಾವ್ಯಗಳು ನಿತ್ಯ ನೂತನ. ಆದರೆ, ಇಂದು ಹಳಗನ್ನಡವನ್ನು ತಪ್ಪು ತಪ್ಪಾಗಿ ಓದಲಾಗುತ್ತಿದೆ. ಪ್ರಾಧ್ಯಾಪಕರು ಅವುಗಳ ಶಬ್ದ, ವಾಕ್ಯರಚನೆಯ, ಭಾವದ ಸಂಪತ್ತನ್ನು ಹೇಳಿ­ಕೊಡುತ್ತಿಲ್ಲ. ಹಳಗನ್ನಡ ಕಾವ್ಯದ ಸೌಖ್ಯವನ್ನು ವಿದ್ಯಾರ್ಥಿ­ಗಳಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಪ್ರಾಚೀನ ಸಾಹಿತ್ಯ ಅಭ್ಯಸಿಸಲು ಒಂದು ಕ್ರಮ ಇದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಕುವೆಂಪು ಅವರು ಭಾಷೆ ಮರ್ಮವನ್ನು, ಶಕ್ತಿಯನ್ನು ಪೀಠಿಕೆ ರೂಪ­ದಲ್ಲಿ ಓದು­ತ್ತಿದ್ದರು. ಬಳಿಕ ವಿದ್ಯಾರ್ಥಿಗಳಿಗೇ ಓದಲು ಅನುವು ಮಾಡಿ­ಕೊಡುತ್ತಿದ್ದರು. ಈಗಿನ ವಿದ್ಯಾರ್ಥಿಗಳಿಗೆ ಹಳ­ಗನ್ನಡವನ್ನು ಸರಿಯಾಗಿ ಓದುವ ಕ್ರಮ ಹಾಗೂ ಅರ್ಥವಾಗುವ ಕ್ರಮ ಹೇಳಿಕೊಡಬೇಕು. ಉಳಿದು­ದನ್ನು ವಿದ್ಯಾರ್ಥಿಗಳೇ ಕಲಿಯುತ್ತಾರೆ’ ಎಂದು ಹೇಳಿದರು.

ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ‘ಹಳಗನ್ನಡದ ಅಧ್ಯಯನದ ಸ್ಥಿತಿ ಕರುಣಾಜನಕವಾಗಿದೆ. ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಹಳಗನ್ನಡ­ವನ್ನು ಸರಿಯಾಗಿ ಹೇಳಿ ಕೊಡುತ್ತಿಲ್ಲ. ಈಗ ಕನ್ನಡ ಪ್ರಾಧ್ಯಾಪಕರು ಜಾನಪದ ವಿದ್ವಾಂಸರಾಗಿ ಪರಿವರ್ತನೆ ಹೊಂದಿದ್ದಾರೆ. ಜಾನಪದ ವಿದ್ವಾಂಸರಾಗಲು ಕಡಿಮೆ ಶ್ರಮ ಪಟ್ಟರೆ ಸಾಕು’ ಎಂದು ಟೀಕಿಸಿದರು.

‘ನಮಗೆಲ್ಲ ಹಳಗನ್ನಡ ಮೋಹ ಹುಟ್ಟಲು ನಮ್ಮ ಶಿಕ್ಷಕರೇ ಕಾರಣ. ಅಷ್ಟು ಚೆನ್ನಾಗಿ ಹಳಗನ್ನಡವನ್ನು ಹೇಳಿ ಕೊಡುತ್ತಿದ್ದರು. ಪರಿಣಾಮಕಾರಿಯಾಗಿ ಪದ್ಯ ಓದುವ ಪ್ರಾಧ್ಯಾಪಕರ ಕೊರತೆ ಇಂದು ಇದೆ. ಹಳಗನ್ನಡವನ್ನು ಚೆನ್ನಾಗಿ ಬೋಧಿಸಿದರೆ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟುತ್ತದೆ’ ಎಂದು ಅವರು ವಿಶ್ಲೇಷಿಸಿದರು.

ಶಾಸನಗಳ ಸಮಗ್ರ ಸಮೀಕ್ಷೆ ಆಗಿಲ್ಲ: ‘ಕನ್ನಡ ಶಾಸನಗಳ ಬಗ್ಗೆ ಸಮಗ್ರ ಸಮೀಕ್ಷೆ ಈವರೆಗೆ ಆಗಿಲ್ಲ. ವಿದ್ವಾಂಸರು ಆಗಾಗ ಈ ಕೆಲಸ ಮಾಡಿದ್ದಾರೆ. ಸಮಗ್ರವಾಗಿ ಶೋಧಿ­ಸಿ­ದರೆ ಪ್ರಾಚೀನ ಹಲ್ಮಿಡಿ ಶಾಸನಕ್ಕಿಂತ ಪೂರ್ವದ ಶಾಸನಗಳು ದೊರಕಲಿವೆ’ ಎಂದರು.
‘ತಮಿಳರಿಗೆ ಪ್ರಾಚೀನತೆಯ ಮೋಹ ಇದೆ.

ಆದರೆ, ನಮಗೆ ಅಂತಹ ಮೋಹ ಇಲ್ಲ. ಕನ್ನಡ ಭಾಷೆ ಎಲ್ಲಿ ಹುಟ್ಟಿತು, ಹೇಗೆ ಹುಟ್ಟಿತು ಎಂಬ ಬಗ್ಗೆ ಶೋಧ ಆಗಬೇಕು. ಕನ್ನಡ ಭಾಷೆ ನರ್ಮದಾ ತೀರದಲ್ಲಿ ಹುಟ್ಟಿ ಸಂಸ್ಕೃತ ಪ್ರಭಾವದಿಂದ ಬೇರೆ ಬೇರೆ ರೂಪ ಪಡೆದಿರುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು. ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್‌, ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಕನ್ನಡ ಭಾಷೆಯ ಪ್ರಾಚೀನತೆಯ ಅಧ್ಯಯನದಲ್ಲಿ ಸಾಕಷ್ಟು ಕೆಲಸ ಮಾಡಿದರು. ಅವರು ಕನ್ನಡ ಇತಿಹಾಸ ಹುಡುಕಲು ಅನೇಕ ಭಾಷೆ ಕಲಿತರು. ಆದರೆ, ಆಧುನಿಕ ವಿದ್ವಾಂಸರು ಈ ಕೊರತೆ ಇದೆ’ ಎಂದು ಹೇಳಿದರು.

‘ಮೇಣದ ಬಸದಿ ಅಲ್ಲ’

ADVERTISEMENT

‘ರಾಜ್ಯದಲ್ಲಿ ಕೆಲವು ಬೌದ್ಧ ಸ್ಮಾರಕಗಳು, ಗುಹೆಗಳು ಇವೆ. ಬಾದಾಮಿಯಲ್ಲಿರುವುದು ಮೇಣದ ಬಸದಿ ಅಲ್ಲ, ಅದು ಲಯನ ಬಸದಿ’ ಎಂದು ಎಂ.ಎಂ. ಕಲಬುರ್ಗಿ ಹೇಳಿದರು. ‘ಬೌದ್ಧ ಗುಹೆ ಲಯನ ಗುಹೆ ಆಗಿತ್ತು. ಅದು ಅರ್ಥ ಕಳೆದುಕೊಂಡು ಮೇಣದ ಬಸದಿ ಆಯಿತು’ ಎಂದು ಅವರು ವಿಶ್ಲೇಷಿಸಿದರು.

‘ಕನ್ನಡ ಭಾಷೆ ಪ್ರಾಚೀನತೆ ಬಗ್ಗೆ ಶಂಭಾ ಜೋಷಿ ಅವರ ಅಭಿಪ್ರಾಯ ಒಪ್ಪಲು ಸಾಧ್ಯ ಇಲ್ಲ. ಭಾಷೆ­ಯನ್ನು ಆಧಾರವಾಗಿಟ್ಟುಕೊಂಡು ಅವರು ಪ್ರಾಚೀ­ನತೆ ಬಗ್ಗೆ ಹೇಳಿದರು. ಆದರೆ, ಭಾಷೆ ಪರಿ­ವರ್ತನಾ ಶೀಲ ವಸ್ತು. ಅವರು ಅನೇಕ ಸಲ ಕಾಲ್ಪನಿಕ ವಿಚಾರ­ಗ­ಳನ್ನು ಮಂಡಿಸಿದರು. ಅವರ ವಿಧಾನವನ್ನು ಒಪ್ಪಿ­ಕೊಳ್ಳ­ಬಹುದು, ಫಲಿತಾಂಶ ಒಪ್ಪಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.