ADVERTISEMENT

ಸಂಕ್ರಾಂತಿ; ನಾಟಕ ಸವಿದ ರಂಗಪ್ರೇಮಿ

ಸಾಂಸ್ಕೃತಿಕ ಸಂಚಲನ ಮೂಡಿಸಿದ ಬಹುರೂಪಿ; ‘ಜೂಲಿಯಸ್ ಸೀಸರ್’ ನಾಟಕಕ್ಕೆ ಮುಗಿಬಿದ್ದ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 10:13 IST
Last Updated 16 ಜನವರಿ 2016, 10:13 IST
ಮೈಸೂರಿನ ರಂಗಾಯಣದ ವನರಂಗದಲ್ಲಿ ಶುಕ್ರವಾರ ಪ್ರದರ್ಶನಗೊಂಡ ‘ಜೂಲಿಯಸ್‌ ಸೀಸರ್‌’ ನಾಟಕದ ಒಂದು ದೃಶ್ಯ
ಮೈಸೂರಿನ ರಂಗಾಯಣದ ವನರಂಗದಲ್ಲಿ ಶುಕ್ರವಾರ ಪ್ರದರ್ಶನಗೊಂಡ ‘ಜೂಲಿಯಸ್‌ ಸೀಸರ್‌’ ನಾಟಕದ ಒಂದು ದೃಶ್ಯ   

ಮೈಸೂರು: ‘ಟಿಕೆಟ್‌ ಇಲ್ಲದವರು ವಾಪಸ್ ಹೋಗಿ’ ಎಂದು ಪೊಲೀಸರು ವನರಂಗದ ಬಳಿ ಹೇಳುತ್ತಿದ್ದರೆ, ‘ದಯವಿಟ್ಟು ಟಿಕೆಟ್‌ ಇದ್ದವರು ಮಾತ್ರ ಬನ್ನಿ. ನಾಟಕ ಮತ್ತೆ ವಾರಾಂತ್ಯದಲ್ಲಿ ಆಡಲಾಗುತ್ತದೆ’ ಎಂದು ಕಲಾವಿದ ರಾಮನಾಥ್‌ ಕೂಗಿ ಹೇಳುತ್ತಿದ್ದರು.

ಇದು ರಂಗಾಯಣದ ಆವರಣದಲ್ಲಿ ಶುಕ್ರವಾರ ಸಂಜೆ ಕಂಡ ದೃಶ್ಯ. ‘ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವ’ ಅಂಗವಾಗಿ ಆಯೋಜಿಸಿದ್ದ ಮೊದಲ ರಂಗಾಯಣದ ಮಹತ್ವದ ನಾಟಕ ‘ಜೂಲಿಯಸ್‌ ಸೀಸರ್‌’ ನಾಟಕದ ಪ್ರಯೋಗಕ್ಕೆ ಅದಾಗಲೇ 350 ಟಿಕೆಟು ಗಳು ಮಾರಾಟವಾಗಿದ್ದವು. ಆದರೂ ಅನೇಕ ಆಸಕ್ತರು ಟಿಕೆಟ್‌ ಸಿಗದೆ ನಿರಾಸೆಯಾಗಿದ್ದರು.

ಅಲ್ಲದೆ, ವನರಂಗ ಬಳಿ ನಿಂತು ಕೊನೆಯ ಗಳಿಗೆಯಲ್ಲಿ ಒಳಹೋಗಬಹುದು ಎಂದು ಕಾಯುತ್ತಿ ದ್ದರು. ಆದರೆ, ಸೀಟುಗಳಿಲ್ಲದ ಕಾರಣ ಒಳಬಿಡಲಾಗುತ್ತಿರಲಿಲ್ಲ. ಅನೇಕರು ನಿರಾಸೆಗೊಂಡು ಕಲಾಮಂದಿರದತ್ತ ಹೆಜ್ಜೆ ಹಾಕಿದರು. ಕಲಾಮಂದಿರದಲ್ಲಿ ಬೆಂಗಳೂರಿನ ರಂಗ ನಿರಂತರ ತಂಡದಿಂದ ‘ಸಹದೇವ’ ನಾಟಕ ಪ್ರದರ್ಶನಗೊಂಡಿತು.

‘ಜೂಲಿಯಸ್‌ ಸೀಸರ್‌’ ನಾಟಕ ನೋಡಲು ಬಂದಿದ್ದೆ. ಟಿಕೆಟ್‌ ಸಿಗದೆ ನಿರಾಸೆಯಾಯಿತು. ಮತ್ತೆ ಪ್ರದರ್ಶನ ಗೊಂಡರೆ ನೋಡಲು ಸಾಧ್ಯವಾಗುತ್ತದೆ’ ಎಂದು ನಂಜನಗೂಡಿನ ಬಿಇಒ ಕಚೇರಿ ಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಧುರದಾಸ್ ಹೇಳಿದರು.

ಸರಸ್ವತಿಪುರಂನ ನಿವಾಸಿಯಾದ ರೇಖಾ ಪ್ರಿಯದರ್ಶಿನಿ, ಜೂಲಿಯಸ್‌ ಸೀಸರ್‌ ನಾಟಕ ನೋಡಲು ಬಂದೆ. ಟಿಕೆಟ್‌ ಸಿಗಲಿಲ್ಲ. ಹೆಚ್ಚು ಬೇಡಿಕೆ ಇರುವ ನಾಟಕಗಳಿಗೆ ಸೀಟುಗಳ ಸಂಖ್ಯೆಯನ್ನು ಜಾಸ್ತಿ ಮಾಡಬೇಕಿತ್ತು ಎಂದು ಸಲಹೆ ನೀಡಿದರು.

ಸರಸ್ವತಿಪುರಂನ ಸಿಂಡಿಕೇಟ್‌ ಬ್ಯಾಂಕಿನ ವ್ಯವಸ್ಥಾಪಕ ಪುಟ್ಟಸ್ವಾಮಯ್ಯ ಅವರು, ಈ ಬಹುರೂಪಿ ನೋಡಿದರೆ ಚಿಕ್ಕವರಾಗಿದ್ದಾಗ ನೋಡುತ್ತಿದ್ದ ಜಾತ್ರೆ ನೆನಪಾಗುತ್ತದೆ. ಇದು ಜಾತ್ರೆ, ಉತ್ಸವ ಹಾಗೆ ಕಳೆಗಟ್ಟಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ನಂಜನಗೂಡಿನ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಡಾ.ಮಾದೇವ ಭರಣಿ ಅವರು, ಬಹುರೂಪಿಯಿಂದ ಸಾಂಸ್ಕೃತಿಕ ಸಂಚಲನ ಉಂಟಾಗುತ್ತಿದೆ. ನಾಡಿನ ಎಲ್ಲ ಕಡೆಯಿಂದ ಆಸಕ್ತರು ಬರುತ್ತಾರೆ. ನಮ್ಮ ಮನಸ್ಸಿಗೆ ಒತ್ತುಕೊಡುವ ಹಾಗೆ ರಂಗಾಯಣ ಹಾಗೂ ಬಹುರೂಪಿ ಇರುತ್ತದೆ. ಪ್ರತಿ ವರ್ಷ ಬಹುರೂಪಿಗೆ ಬರದಿದ್ದರೆ ಏನೋ ಕಳೆದುಕೊಂಡ ಹಾಗಾಗುತ್ತದೆ’ ಎಂದು ತಿಳಿಸಿದರು.

ಕುವೆಂಪುನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಎಚ್‌.ಪಿ. ಗೀತಾ ಅವರು, ಪ್ರತಿ ವರ್ಷ ಬಹುರೂಪಿ ಉದ್ಘಾ ಟನೆ ಆಕರ್ಷಕವಾಗಿರುತ್ತದೆ. ಕೇವಲ ಆಕರ್ಷಣೆಯಲ್ಲ, ಸಂತೋಷ ಕೊಡು ತ್ತದೆ. ಭಿನ್ನವಾಗಿರುತ್ತದೆ. ಕನ್ನಡ ಅಲ್ಲದೆ ಬೇರೆ ಬೇರೆ ಭಾಷೆಯ ನಾಟಕಗಳನ್ನು ನೋಡಲು ಸಾಧ್ಯವಾಗುತ್ತಿದೆ.

ಕಳೆದ ವರ್ಷ ಹಣತೆಯ ದೀಪಗಳನ್ನು ಹಚ್ಚಿ ಬಹುರೂಪಿ ಉದ್ಘಾಟಿಸಲಾಯಿತು. ಪ್ರೇಕ್ಷಕರು ಕೂಡಾ ಒಂದೊಂದು ದೀಪ ಹಚ್ಚಿದಾಗ ಎಳ್ಳು–ಬೆಲ್ಲ ಕೊಟ್ಟಿದ್ದರು. ನಮ್ಮಂಥ ರಂಗಾಸಕ್ತರಿಗೆ ನಾಟಕದ ಮೂಲಕ ಸಂಕ್ರಾಂತಿಯ ಸವಿ ಸಿಗುತ್ತಿದೆ ಎಂದರು.

ಬಹುರೂಪಿಗೆ ಸಾಂಕೇತಿಕವಾಗಿ ಬೃಹತ್ ರಂಗಪ್ರದರ್ಶನವನ್ನು ಅದರಲ್ಲೂ ಅಭಿವ್ಯಕ್ತಿಗೆ ಪೂರಕವಾಗಿ ರಂಗಾಯಣ ಕಲಾವಿದರ ಮೂಲಕ ‘ಜೂಲಿಯಸ್‌ ಸೀಸರ್‌’ ನಾಟಕ ಪ್ರದರ್ಶನಗೊಂಡಿತು. 3 ದಿನಗಳ ಹಿಂದೆಯೇ ನಾಟಕದ ಟಿಕೆಟುಗಳು ಮಾರಾಟ ಆಗಿದ್ದವು.

ಹೀಗಾಗಿ, ಸ್ಥಳೀಯ ಪ್ರೇಕ್ಷಕರ ಮನವೊಲಿಸಿ, ಬೆಂಗಳೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಬಂದ ನೂರಾರು ಕಲಾಭಿಮಾನಿಗಳಿಗೆ ಸ್ಥಳಾವಕಾಶ ನೀಡಲಾಯಿತು. ಸ್ಥಳೀಯ ಪ್ರೇಕ್ಷಕರಿಗೆ ವಾರಾಂತ್ಯ ನಾಟಕವಾಗಿ ಏರ್ಪಡಿಸಲಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಎಚ್‌. ಜನಾರ್ದನ್‌ ತಿಳಿಸಿದರು.

ಇದಕ್ಕೂ ಮೊದಲು ಮಧ್ಯಾಹ್ನ ಹುಬ್ಬಳ್ಳಿಯ ಸಂಸ್ಕೃತಿ ಕಾಲೇಜಿನ ತಂಡದಿಂದ ‘ಮೂರು ಕಾಸಿನ ಸಂಗೀತ ನಾಟಕ’ ಪ್ರದರ್ಶನಗೊಂಡಿತು. ಬರ್ಟೋಲ್ಟ್‌ ಬ್ರೆಕ್ಟ್‌ನ ‘ನೆರೇಟಿವ್‌ ರಿಯಲಿಸಂ ಅಂಡ್ ನಾನ್‌ ಆರ್ಟಿಸ್ಟೊ ಟೆಲಿಯನ್‌ ಪ್ರೊಡಕ್ಷನ್‌’ ನಾಟಕವನ್ನು ಕೆ.ವಿ. ಸುಬ್ಬಣ್ಣ ಕನ್ನಡಕ್ಕೆ ಅನುವಾದಿ ಸಿದ್ದು, ಪ್ರದರ್ಶನ ಪಠ್ಯ, ವಿನ್ಯಾಸ ಹಾಗೂ ನಿರ್ದೇಶನ ನಟರಾಜ್‌ ಹೊನ್ನವಳ್ಳಿ ಅವರದು.

ಸಂಜೆ ರಂಗಾಯಣದತ್ತ ಬಂದ ಆಸಕ್ತರಿಗೆ ಬೀದಿರಂಗದಲ್ಲಿ ಬಾಗಲ ಕೋಟೆಯ ವೆಂಕಪ್ಪ ಅಂಬಾಜಿ ಸುಬತೇಕರ ಹಾಗೂ ತಂಡದಿಂದ ಗೊಂದಲಿಗರ ಮೇಳ ಕಂಡು ಖುಷಿ ಪಟ್ಟರು. ನಂತರ ಸಂಕ್ರಾಂತಿ ಶುಭಾಶಯ ಕೋರಿದರು. ತಿಂಡಿ ತಿಂದು, ಕರಕುಶಲ ವಸ್ತು, ಪುಸ್ತಕ ಕೊಂಡು ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.