ಬೆಂಗಳೂರು: `ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ `ಮಂದ್ರ' ಕಾದಂಬರಿ ಸಂಗೀತದ ವಿಷಯದಲ್ಲಿ ಸಂಪೂರ್ಣ ಸೋತಿದೆ' ಎಂದು ಸಂಗೀತ ದಿಗ್ಗಜ ವಿದ್ವಾನ್ ಆರ್.ಕೆ. ಪದ್ಮನಾಭ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಆಕೃತಿ ಪುಸ್ತಕ ಮಳಿಗೆಯಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ಮಂದ್ರ ಕೃತಿಯನ್ನು ನಾನು ಮೂರು ಸಲ ಓದಿದ್ದೇನೆ. ಸಂಗೀತದ ಸತ್ವಕ್ಕಿಂತ ಭೋಗದ ಸಂಗತಿ ಕಡೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ' ಎಂದು ಹೇಳಿದರು.
`ಕಾದಂಬರಿ ನಾಯಕ ಮೋಹನಲಾಲ್ ಬಹುದೊಡ್ಡ ಸಂಗೀತಗಾರ. ತಾನ್‌ಸೇನ್ ಪ್ರಶಸ್ತಿ ಪಡೆದ ಸಾಧಕ. ಆದರೆ, ಆತನ ಸಾಧನೆಗೆ ಸಾಕ್ಷ್ಯ ಒದಗಿಸುವಂತಹ ಒಂದೇ ಒಂದು ಪ್ರಸಂಗವನ್ನೂ ವಿವರಿಸದ ಭೈರಪ್ಪ, ಆತನ ಭೋಗದ ವಿಷಯವಾಗಿ ಸಾಕಷ್ಟು ಘಟನೆಗಳನ್ನು ಹೆಣೆದಿದ್ದಾರೆ. ಮೋಹನಲಾಲ್‌ಗೆ ಹತ್ತಕ್ಕೂ ಹೆಚ್ಚು ಹೆಂಗಸರ ಜೊತೆ ಸಂಬಂಧ ಜೋಡಿಸುವ ಮೂಲಕ ಭೋಗವನ್ನೇ ಅತಿಯಾಗಿ ವಿಜೃಂಭಿಸಿದ್ದಾರೆ' ಎಂದು ವಿಶ್ಲೇಷಣೆ ಮಾಡಿದರು.
`ಸಂಗೀತದ ಔನ್ನತ್ಯವನ್ನು ಸಾರುವಂತಹ ಒಂದಾದರೂ ಪ್ರಸಂಗವನ್ನು ಭೈರಪ್ಪ ಕೃತಿಯಲ್ಲಿ ತರಬೇಕಿತ್ತು. ಆದರೆ, ಅಂತಹ ಪ್ರಯತ್ನ ಎಲ್ಲಿಯೂ ನಡೆದಿಲ್ಲ. ಸಂಗೀತ ಕಛೇರಿ ನಡೆಸಿದ ವಿವರಗಳನ್ನು ತೇಲಿಸಿ ಬರೆಯಲಾಗಿದೆ. ಹೀಗಾಗಿ ಸಂಗೀತದ ವ್ಯಾಪ್ತಿ ಇಷ್ಟಕ್ಕೇ ಸೀಮಿತವೆ, ಗುರುಸ್ಥಾನಕ್ಕೆ ಬೆಲೆ ಇಲ್ಲವೆ ಎನ್ನುವ ಪ್ರಶ್ನೆಗಳನ್ನು ಕೃತಿ ಹುಟ್ಟುಹಾಕಿದೆ' ಎಂದು ಹೇಳಿದರು.
`ಭೈರಪ್ಪನವರಿಗೆ ಮೊದಲಿನಿಂದಲೂ ಕರ್ನಾಟಕ ಸಂಗೀತದ ಮೇಲೆ ಅಷ್ಟಾಗಿ ಆಸಕ್ತಿ ಇಲ್ಲ. ಆದ್ದರಿಂದಲೇ ಕೃತಿಯಲ್ಲಿ ಅವರು ಬಳಸಿಕೊಂಡಿದ್ದು ಉತ್ತರಾದಿ ಸಂಗೀತವನ್ನು. ಆದರೆ, ಮಂದ್ರದಲ್ಲಿ ಸಂಗೀತ ಗೌಣವಾಗಿ ಸಂಬಂಧಗಳ ಜಿಜ್ಞಾಸೆಯೇ ದೊಡ್ಡದಾಗಿ ಕಾಣುತ್ತಿದೆ' ಎಂದು ಅಭಿಪ್ರಾಯಪಟ್ಟರು. `ಸಂಗೀತದಲ್ಲಿ ಇನ್ನಷ್ಟು ಆಳವಾದ ಅಧ್ಯಯನ ಮಾಡಿ ಅವರು ಬರೆಯಬೇಕಿತ್ತು' ಎಂದು ಅವರು ಅಭಿಪ್ರಾಯಪಟ್ಟರು.
`ಭೈರಪ್ಪ ಕನ್ನಡ ಸಾಹಿತ್ಯ ಪ್ರಪಂಚ ಕಂಡ ದೊಡ್ಡ ಕಾದಂಬರಿಕಾರ ಎನ್ನುವಲ್ಲಿ ಎರಡು ಮಾತಿಲ್ಲ. ಅವರ ಮೇಲೆ ನನಗೆ ಅಪಾರ ಗೌರವವೂ ಇದೆ. ಆದರೆ, ಕೃತಿ ದೋಷಗಳನ್ನು ಹೇಳಲು ಹಿಂಜರಿಕೆ ಇಲ್ಲ' .`ತರಾಸು ಅವರ `ಹಂಸಗೀತೆ' ಮತ್ತು ಅನಕೃ ಅವರ `ಸಂಧ್ಯಾರಾಗ' ಕೃತಿಗಳು ಸಂಗೀತವನ್ನೇ ಆಧಾರವಾಗಿ ಇಟ್ಟುಕೊಂಡು ರಚಿತವಾದ ಇದುವರೆಗಿನ ಶ್ರೇಷ್ಠ ಕನ್ನಡ ಕಾದಂಬರಿಗಳಾಗಿವೆ. ನನ್ನ `ಅನಂತ ನಾದ' ಕೃತಿಗೆ `ಹಂಸಗೀತೆ'ಯೇ ಪ್ರೇರಣೆಯಾಗಿದೆ' ಎಂದು ತಿಳಿಸಿದರು.
`ಹಂಸಗೀತೆಯನ್ನೇ ಆಧಾರವಾಗಿ ಇಟ್ಟುಕೊಂಡು ತೆಗೆದ ಉಪಾಸನೆ ಚಿತ್ರದ ಗೀತೆಯಲ್ಲಿ ಉತ್ತರಾದಿ ಮತ್ತು ಕರ್ನಾಟಕ ಸಂಗೀತವನ್ನು ಒಟ್ಟಾಗಿ ಬಳಸಿದ ತಂತ್ರ ಸರಿಹೊಂದಿರಲಿಲ್ಲ. ಸಂಗೀತದ ಒಳಮರ್ಮ ಬಲ್ಲವರಿಗೆ ಮಾತ್ರ ಅದು ಗೊತ್ತಾಗುತ್ತದೆ. ಆಗ ಶಿವಮೊಗ್ಗದಲ್ಲಿ ನಡೆದ ಸಂವಾದದಲ್ಲಿ ಈ ಅಭಿಪ್ರಾಯವನ್ನು ಸ್ಪಷ್ಟವಾಗಿಯೇ ತಿಳಿಸಿದ್ದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.