ಬೆಂಗಳೂರು: ಕನ್ನಡದ ವಿಕಿಪೀಡಿಯ ಎಂದೇ ಗುರುತಿಸಲಾಗುವ ‘ಕಣಜ’ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸುವಂತೆ ಸಚಿವೆ ಉಮಾಶ್ರೀ ಆದೇಶಿಸಿದ್ದಾರೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ವಿಕಿಪೀಡಿಯ ಮಾದರಿಯಲ್ಲಿ ಮಾಹಿತಿ ನೀಡಲು ಕಣಜ ಪೋರ್ಟಲ್ ರಚಿಸಲಾಗಿತ್ತು. ಇದುವರೆಗೆ ಕಣಜವನ್ನು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿಬಿ) ನಿರ್ವಹಿಸುತ್ತಿತ್ತು.
‘ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವಾಗುವಂತೆ ಜುಲೈ ಒಂದ ರಿಂದ ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಲಾಗಿದೆ’ ಎಂದು ಸಚಿವೆ ತಿಳಿಸಿದ್ದಾರೆ.
‘ಕಣಜದ ನಿರ್ವಹಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹ 2 ಕೋಟಿ ಮೀಸಲಿಟ್ಟಿದೆ. ನೂತನ ಕಣಜ ಸಮಿತಿ ರಚಿಸಲಾಗಿದೆ’ ಎಂದು ಹೇಳಿದ್ದಾರೆ.
‘ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ. ಗುರುಮೂರ್ತಿ ಹೆಗಡೆ, ಐಐಐಟಿಬಿ ಅಧ್ಯಕ್ಷ ಪ್ರೊ.ಎಸ್. ರಾಜಗೋಪಾಲನ್, ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಈ ಕ್ಷೇತ್ರದ ಮೂವರು ತಜ್ಞರನ್ನು ಕೊ-ಆಪ್ಟ್ ಮೂಲಕ ಸದಸ್ಯರನ್ನಾಗಿಸಲು ಅವಕಾಶವಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.