ADVERTISEMENT

ಸದಾ ಎಚ್ಚರಿಸುವ ಕಣ್ಣ ಮುಂದಿನ ಬೆಳಕು

ಎಂ.ಎಸ್.ಆಶಾದೇವಿ
Published 22 ಆಗಸ್ಟ್ 2014, 19:30 IST
Last Updated 22 ಆಗಸ್ಟ್ 2014, 19:30 IST

ಯಾವ ಅನುಮಾನವೂ ಉತ್ಪ್ರೇಕ್ಷೆಯೂ ಇಲ್ಲದೆ ಅನಂತಮೂರ್ತಿ­ಯವರು ಕನ್ನಡ, ಭಾರತ ಮಾತ್ರವಲ್ಲ, ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿ ಲೇಖಕ­ರಾದವರು ಚಿಂತಕರಾದವರು ವಹಿಸಬೇಕಾದ ವಹಿಸಬಹು­ದಾದ ಬಹು­ಪಾತ್ರಗಳ, ಅವುಗಳ ಜವಾಬ್ದಾರಿ ಮತ್ತು ಮಹತ್ವವನ್ನು ದಾರಿ, ಮಾದರಿ ಮತ್ತು ನಿಕಷವಾಗಿ ನಿಭಾಯಿಸಿ­ದವರು. ಕಾವ್ಯದ ಏಕಾಂತವನ್ನೂ ಸಮುದಾ­ಯದ ಲೋಕಾಂ­ತ­ವನ್ನೂ ತಮ್ಮ ವ್ಯಕ್ತಿತ್ವದ ಧಾತುಗಳಾಗಿ ಸತತವಾಗಿ ಉಳಿಸಿ­ಕೊಂಡ ಅನಂತಮೂರ್ತಿ­ಯವರು ಈ ಕಾರಣ­ಕ್ಕಾ­ಗಿಯೇ ಸ್ವಾತಂತ್ರ್ಯೋತ್ತರ ಭಾರತದ ಬಹು ಮುಖ್ಯ ವ್ಯಕ್ತಿತ್ವ.

ಭಾರತದಂತಹ ಬಹುಭಾಷಿಕ ಸಮುದಾಯದಲ್ಲಿ ಅನಿವಾರ್ಯವಾಗಿ ಎದುರಾಗುವ ಬಹು ಅಸ್ಮಿತೆಗಳ ಸವಾಲನ್ನು ಅದೊಂದು ಆತ್ಮ ಪರೀಕ್ಷೆಯೋ ಎನ್ನುವ ತೀವ್ರತೆಯಲ್ಲಿ ಮುಖಾಮುಖಿಯಾದವರು ಇವರು. ಕನ್ನಡ­ದವನಾಗಿದ್ದೂ ಭಾರತೀಯ­ನಾಗು­ತ್ತಲೇ ತನ್ನ ಅಸ್ಮಿತೆಯನ್ನು ಎರಡಾಗಿಯೂ ಒಂದೇ ಎಂಬಂತೆ ಕಟ್ಟಿ­ಕೊಳ್ಳಬೇಕಾದ ಕತ್ತಿಯಂಚಿನ ದಾರಿ­ಯನ್ನು ಕಟ್ಟುವ ನಿರ್ಣಾಯಕ ಪ್ರಕ್ರಿಯೆ­ಯಲ್ಲಿ ತೊಡಗಿಸಿಕೊಂಡರು. ಈ ಪ್ರಕ್ರಿಯೆ­ಯಲ್ಲಿ ತಮ್ಮ ಓರಗೆಯ  ಕನ್ನಡದ  ಲೇಖಕರು, ಇತರ ಭಾರತೀಯ ಲೇಖಕರ ಜೊತೆ ನಡೆಸಿದ ತಾತ್ವಿಕ ಸಂವಾದಕ್ಕೆ ಐತಿಹಾಸಿಕ ಮಹತ್ವವಿದೆ. ಅದು ಕೇವಲ ಸಾಹಿತ್ಯಕ್ಕೆ ಮಾತ್ರ ಸಂಬಂಧಪಟ್ಟದ್ದಲ್ಲ. ಅದಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವವೂ ಇದೆ. ಎಂತಲೇ ಅನಂತ­ಮೂರ್ತಿಯವರು ಲೇಖಕ ಎನ್ನುವ ಚೌಕಟ್ಟನ್ನು ಅನಾಯಾಸವಾಗಿ ದಾಟಿ, ಆಧುನಿಕ ಭಾರತದ ಎಲ್ಲ ಮಹತ್ವದ ಆಗು ಹೋಗುಗಳ ಜೊತೆ ಸಕ್ರಿಯ ಸಂಬಂಧವನ್ನಿಟ್ಟುಕೊಂಡ ಸಾರ್ವಜನಿಕ ವ್ಯಕ್ತಿತ್ವವೂ ಆಗಿ ಬಿಡುತ್ತಾರೆ.

ಆಧುನಿಕತೆ ಮತ್ತು ಪ್ರಗತಿಯಲ್ಲಿ ಯಾವುದನ್ನು ಆರಿಸಿ­ಕೊಳ್ಳಬೇಕು ಎನ್ನುವ ಸವಾಲಿರಬಹುದು, ಸಾಮಾನ್ಯ ಶಾಲೆ­ಗಳು ಯಾಕೆ ಬೇಕು ಎನ್ನುವ ಸಂಗತಿಯಿರಬಹದು, ಬೆತ್ತಲೆ ಪೂಜೆ ಯಾಕೆ ಕೂಡದು ಎನ್ನುವ ವಿವಾದ­ವಿರಬಹುದು. ಇಂಥ ಸಾರ್ವಜನಿಕ ಮಹತ್ವದ ಯಾವ ವಿಷಯದಲ್ಲಿಯೂ ಅನಂತಮೂರ್ತಿ ಅವರು ನೇರ ಚರ್ಚೆ ಮತ್ತು ಹೋರಾಟದಲ್ಲಿ ಪಾಲ್ಗೊಂಡ­ವರು.  ಈ ಎಲ್ಲವನ್ನೂ ಅವರು ಲೇಖಕರ ಉತ್ತರದಾಯಿತ್ವದ ನೆಲೆಯ­ಲ್ಲಿಯೇ ಪ್ರತಿಪಾದಿಸಿದರು. ಆದ್ದ­ರಿಂದಲೇ ಲೇಖಕರು ಮತ್ತು ಸಾಹಿತ್ಯದ ವ್ಯಾಖ್ಯಾನವನ್ನೇ ಇವರು ಮುರಿದು ಕಟ್ಟಿದರು ಎನಿಸುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಇವರು ಪಡೆದ ಮನ್ನಣೆಯ ಮೂಲ ಇದೇ.

ರಾಜಕೀಯ­ವಾಗಿ ತಮಗೆ ಒಪ್ಪಿಗೆಯಾಗದ ಬೆಳವಣಿಗೆ ನಡೆದಾಗ ಅದನ್ನು ಪ್ರತಿಭಟಿಸಲು ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಅವರು ದೆಹಲಿಯ ತನಕ ಹೋಗಿ ಬಂದದ್ದನ್ನು ನೆನೆದರೆ, ಅದು ಅವರ ಮಟ್ಟಿಗೆ ವೈಯಕ್ತಿಕ ಆಯ್ಕೆ ಮತ್ತು ವಿರೋಧದ ಪ್ರಶ್ನೆ ಮಾತ್ರವಾಗದೆ, ಅವರಿಗೆ ಬಹು ಪ್ರಿಯವಾದ ನಿಲುವಾದ ‘ನನ್ನದು ನನ್ನದು ಮಾತ್ರವಲ್ಲ’ ಎನ್ನುವುದರ ಅಳವಡಿಕೆಯಂತೆ ಕಾಣುತ್ತದೆ. ಈ ದೃಷ್ಟಿಯಿಂದ ಅವರೊಬ್ಬ ಅಪ್ಪಟ ಸಮಾಜವಾದಿ ಆಗಿದ್ದರು. ಜನತಂತ್ರದ ಪಾಲನೆ ಅವರಿಗೆ ಎಂದೂ  ಆಯ್ಕೆಯ ವಿಷಯವಾಗಿರಲಿಲ್ಲ.

ಅನಂತಮೂರ್ತಿ ಅವರ ಮಾತ್ರವಲ್ಲ, ನಮ್ಮ ಕಾಲದ ಶ್ರೇಷ್ಠ ಕತೆಗಳ­ಲ್ಲೊಂದಾದ ‘ಸೂರ್ಯನ ಕುದುರೆ’ ಅವರ ಒಟ್ಟೂ ಗ್ರಹಿಕೆ ಮತ್ತು ನಿಲುವಿನ ಶಾಶ್ವತ ಪ್ರತಿನಿಧಿ. ಭಾರತದಂತಹ ಮೂರನೆ ಜಗತ್ತಿನ ರಾಷ್ಟ್ರ್ಗಗಳ ಸವಾಲು, ಇಬ್ಬಂದಿತನಗಳು, ಅಸಹಾ­ಯ­ಕತೆ, ಆಮಿಷಗಳೆಲ್ಲ ಆ ಕತೆಯಲ್ಲಿ ಸಾಧಾರಣೀಕರಣಕ್ಕೆ ಒಳಗಾಗಿವೆ. ಬೇಕು ಬೇಡದ, ಆಯ್ಕೆಯ ಸ್ವಾತಂತ್ರ್ಯವೇ ಇಲ್ಲದ ಹಾಗೆ ಭಾಸವಾಗುವ ಆಧುನಿಕ ಮನುಷ್ಯರ ಬದುಕಿನ ಕ್ರಮವನ್ನು, ಅದು ಲೊಳಲೊಟ್ಟೆಯೋ ಎನ್ನುವ ಅನು­ಮಾನ, ವ್ಯಂಗ್ಯದಲ್ಲಿ ನೋಡುತ್ತಲೇ , ಅದರಿಂದ ಬಿಡಿಸಿಕೊಳ್ಳಲಾಗದ ಆಧುನಿಕತೆಯ ಆಮಿಷದ ಚಕ್ರವ್ಯೂಹ­ದಲ್ಲಿ ತಮ್ಮನ್ನು ಕೆಡವಿಕೊಂಡ ಪರಿಯನ್ನು ಈ ಕತೆ ಶೋಧಿಸುತ್ತದೆ.

ಇದಕ್ಕೆ ಎದುರಾಗಿ ಎನ್ನುವಂತೆ ಕಾಣುವ ಹಡೆವೆಂಕಟ ಸೋಲಿನ ಪರಿವೇಷ­ದಲ್ಲಿಯೇ ಅಪ್ಪಟ ಮನುಷ್ಯನಾಗುತ್ತಲೇ ಬದುಕನ್ನು ಪಳಗಿಸಿಕೊಳ್ಳುವ ಪರಿ ಗೆಲುವಿನ ದಾರಿಯಲ್ಲಿದ್ದೇನೆ ಎಂದು ತನ್ನನ್ನು ತಾನು ನಂಬಿಸಿಕೊಂಡು ಬಿಟ್ಟಿರುವ ಅನಂತುವಿನಲ್ಲಿ ಕಸಿವಿಸಿ­ಯನ್ನು ಹುಟ್ಟಿಸುತ್ತಾ ಹೋಗುತ್ತದೆ. ಅನಂತ­ಮೂರ್ತಿ ಅವರು ಉದ್ದಕ್ಕೂ ಪ್ರತಿಪಾದಿ­ಸಿದ critical insider ನ ಅಪೂರ್ವ ಪ್ರಾಮಾಣಿಕತೆಯಲ್ಲಿ ಈ ಕತೆ ಆಧುನಿಕತೆಯೊಂದಿಗಿನ ಮನುಷ್ಯನ ಕೊನೆಯಿಲ್ಲದ ಹೋರಾಟದ ರೂಪಕ­ದಂತೆ ಭಾಸವಾಗುತ್ತದೆ. ಮನುಷ್ಯ ಸಂಬಂಧಗಳ ಸುಳ್ಳು ಸತ್ಯಗಳೂ ಸೇರಿ­ದಂತೆ ಈ ಕತೆಗೆ ಇನ್ನೂ ಹಲವು ಮಹತ್ವದ ಆಯಾಮಗಳಿವೆ.

ಹೆಚ್.ಎಸ್. ವೆಂಕಟೇಶಮೂರ್ತಿ ಯವರ ‘ಪಂಪ ಭಾರತದ ಹೊಸಗನ್ನಡ ಅವತರಣಿಕೆ’ಗೆ ಬ್ಲರ್ಬ್ ಬರೆದ ಅನಂತಮೂರ್ತಿ ಅವರು ಹೊಸಗನ್ನಡದಲ್ಲಿ ಪಂಪನನ್ನು ಕಾಣಿಸುವ ತಮ್ಮ ಪ್ರಯತ್ನ­ದಲ್ಲಿಯೂ  ವೆಂಕಟೇಶಮೂರ್ತಿಯವರು ಪಂಪನ ಕಾವ್ಯದ ಕಾವ್ಯಗುಣವನ್ನು ಉಳಿಸಿ­ಕೊಂಡಿರುವುದನ್ನು ಆ ಸಣ್ಣ ಬರಹ­ದಲ್ಲಿಯೂ ಸೋದಾಹರಣವಾಗಿ ಗುರುತಿ­ಸು­ತ್ತಾರೆ.  ಕಾವ್ಯದಲ್ಲಿ ಇದು ಸಾಚಾ ಇದು ಮೋಸ ಎಂದು ನಿಖರವಾಗಿ  ಗುರುತಿಸಬಲ್ಲ ಅಪರೂಪದ ಶಕ್ತಿ ಮತ್ತು ಪ್ರತಿಭೆಯನ್ನು ಸತತೋದ್ಯೋಗದ ಪರಿಶ್ರಮದಲ್ಲಿ ಮತ್ತು ಅನುರಕ್ತಿಯಲ್ಲಿ ಉಳಿಸಿಕೊಂಡ ವ್ಯಕ್ತಿತ್ವ ಅನಂತಮೂರ್ತಿಯವರದು.

ಅದೆಂಥ ನೆನಪಿನ ಶಕ್ತಿಯಲ್ಲಿ ಅವರು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಕಾವ್ಯಭಾಗಗಳನ್ನು ಉದ್ಧರಿಸುತ್ತಿದ್ದರೆನ್ನುವುದು ಅವರ ವಿದ್ಯಾರ್ಥಿಗಳಿಗೂ ಆತ್ಮೀಯರಿಗೂ ಯಾವಾಗಲೂ ಸಂತೋಷದ ಮತ್ತು ಬೆರಗಿನ ಸಂಗತಿ. ಇತರರು ಕಾವ್ಯವನ್ನು ವಾಚಿಸುತ್ತಿದ್ದಾಗಲೂ ಅಸಾಧಾರಣ ತನ್ಮಯತೆ ಮತ್ತು ಎಚ್ಚರದಲ್ಲಿ ಅವರು ಕೇಳುತ್ತಿದ್ದದ್ದು, ಕೇಳುವ ಗಳಿಗೆಯಲ್ಲೇ ರೂಪುಗೊಳ್ಳುವ ತಮ್ಮ ಅಭಿಪ್ರಾಯಗಳನ್ನು ಆ ಕ್ಷಣದಲ್ಲೇ ಹೇಳಿಯೂ ಮತ್ತೆ ಮತ್ತೆ ಅದನ್ನು ಅವರು ಪುನರ್ ಓದಿಗೆ ಒಳಪಡಿಸುತ್ತಿದ್ದರು ಎನ್ನುವ ಅಂಶ ಕಾವ್ಯದ ಓದು ಮತ್ತು ಚರ್ಚೆ ಅವರ ಮಟ್ಟಿಗೆ ಅದೆಂಥ ನೈತಿಕ ನಿಲುವಾಗಿತ್ತು ಎನ್ನುವುದನ್ನು ಹೇಳುತ್ತದೆ.

ಅಪ್ಪಟ ಕಾವ್ಯದ ಬಗೆಗಿನ ಆಸ್ಥೆ, ನಂಬಿಕೆ ಮತ್ತು ನಿಷ್ಠೆಯಲ್ಲಿ ರಾಜಿ ಮಾಡಿಕೊಳ್ಳಬಾರದೆನ್ನುವುದನ್ನು ಕೊನೆಯವರೆಗೂ ಅವರು ಉಳಿಸಿಕೊಂಡರು. ಹಿರಿಯನಾಗಿ ತಾನು ಚೂರು ಉತ್ಪ್ರೇಕ್ಷೆ ಮಾಡಿದರೂ ನಡೆದೀತು, ಆಶೀರ್ವಾದ ಮಾಡುವ ಸ್ಥಿತಿಯಲ್ಲಿ ನಾನಿದ್ದೇನೆ, ಆದರೆ, ಈಗ ತಾನೆ ವಿಮರ್ಶೆಯಲ್ಲಿ ತೊಡಗಿಕೊಂಡವರಂತೂ ಅದನ್ನು ಮಾಡುವುದು ಅಕ್ಷಮ್ಯವೆಂದು ಅವರು ಪದೇ ಪದೇ ಹೇಳುತ್ತಿದ್ದದ್ದು ನೆನಪಾಗುತ್ತಿದೆ. ಸಾಹಿತ್ಯವೂ ರಾಜಕೀಯ, ಸಾಮಾಜಿಕ ಹೋರಾಟವೂ ಬೇರೆ ಬೇರೆಯಲ್ಲವೆಂದು ತಿಳಿದವರು ಇವರು. ಎಂತಲೇ ನಮ್ಮನ್ನು ಸದಾ ಎಚ್ಚರಿಸುವ ಮುನ್ನಡೆಸುವ ಕಣ್ಣ ಮುಂದಿನ ಬೆಳಕು ಇವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.