ADVERTISEMENT

ಸಮಸ್ಯೆ ಹೇಳಿದ ಜನರ ಮೇಲೆ ತಮ್ಮಣ್ಣ ಸಿಟ್ಟು

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:43 IST
Last Updated 8 ಜೂನ್ 2019, 16:43 IST
ಡಿ.ಸಿ.ತಮ್ಮಣ್ಣ
ಡಿ.ಸಿ.ತಮ್ಮಣ್ಣ   

ಮಂಡ್ಯ: ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕರ ವಿರುದ್ಧ, ಸಚಿವ ಡಿ.ಸಿ. ತಮ್ಮಣ್ಣ ಹರಿಹಾಯ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮದ್ದೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಚಿವರು ಭಾಗವಹಿಸಿದ್ದರು. ನಂತರ ಅವರನ್ನು ಕಾಣಲು ಬಂದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಂದಿಟ್ಟಿದ್ದಾರೆ.

ಈ ವೇಳೆ, ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಮ್ಮಣ್ಣ, ‘ಜೋಡೆತ್ತುಗಳು ಬರುತ್ತವೆ. ಕರೆದು ಹತ್ತಿಸಿಕೊಳ್ಳಿ. ಈಗ ಮಡೆಗಾರಿಕೆ ಮಾಡಲು ಹತ್ತಿರ ಬರುತ್ತೀರಾ? ಚುನಾವಣೆ ಸಂದರ್ಭದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೆನಪಿಸಿಕೊಂಡಿರಾ? ಈಗ ಬಂದು ಮಾತನಾಡುತ್ತೀರಾ’ ಎಂದು ಹರಿಹಾಯ್ದಿದ್ದಾರೆ. ಅವರ ಸಿಟ್ಟು ಕಂಡ ಸಾರ್ವಜನಿಕರು ಗಲಿಬಿಲಿಗೊಂಡಿದ್ದಾರೆ. ಈ ವಿಡಿಯೊ ಬಗ್ಗೆ, ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆಗಳೂ ಆರಂಭವಾಗಿವೆ.

ADVERTISEMENT

ಸಚಿವರ ಹೇಳಿಕೆಗೆ ಮಡಿಕೇರಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ, ಮಂಡ್ಯ ಸಂಸದೆ ಸುಮಲತಾ ಬೆಂಬಲಿಗ ಡಾ. ರವೀಂದ್ರ, ‘ಡಿ.ಸಿ. ತಮ್ಮಣ್ಣ ತಾವು ಒಬ್ಬ ಜನಪ್ರತಿನಿಧಿ ಎಂಬುದನ್ನು ಅರಿತು ಮಾತನಾಡಬೇಕು’ ಎಂದಿದ್ದಾರೆ.

‘ಮಂಡ್ಯ ಕ್ಷೇತ್ರದಲ್ಲಿ ನಿಖಿಲ್‌ ಸೋಲಿಗೆ ಕಾರಣ ಏನೆಂದು ಆತ್ಮಾವಲೋಕನ‌ ಮಾಡಿಕೊಳ್ಳಲಿ. ಅದನ್ನು ತಿದ್ದಿಕೊಂಡು ಬದುಕಲಿ. ತಮ್ಮ ಅಭ್ಯರ್ಥಿಗೆ ಮತ ಹಾಕದಿರುವ ಜನರೆಲ್ಲರೂ ಕೆಟ್ಟವರು ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ’ ಎಂದು ಎಚ್ಚರಿಸಿದರು.

‘ಮತ್ತೆ ಕೀಳಾಗಿ ಮಾತನಾಡಿದರೆ ಮಂಡ್ಯದ ಜನರೇ ಮತ್ತೆ ತಕ್ಕಪಾಠ ಕಲಿಸುತ್ತಾರೆ. ನಿಮ್ಮ ಅಭ್ಯರ್ಥಿ ಸೋಲಿಗೆ ಚುನಾವಣೆ ಸಂದರ್ಭದಲ್ಲಿ ಆ ಪಕ್ಷದ ಮುಖಂಡರು ಪ್ರಯೋಗಿಸಿದ ಪದಗಳೇ ಕಾರಣ. ನಾವು ಯಾವುದೇ ಹಣ, ಅಹಂಕಾರದ ಮಾತುಗಳಿಗೂ ಬಗ್ಗಲ್ಲ’ ಎಂದು ಹೇಳಿದರು.

‘8 ಮಂದಿ ಜೆಡಿಎಸ್‌ ಶಾಸಕರನ್ನೇ ಆಯ್ಕೆ ಮಾಡಿದ್ದ ಮಂಡ್ಯ ಜನರು, ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ನೀವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಜನರ ಮೇಲೆ ಹೇರುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

‘ವಿಕೃತ ಮನಸ್ಸಿನ ವ್ಯಕ್ತಿಗೆ ಜನಪ್ರತಿನಿಧಿ ಆಗಿ ಮುಂದುವರಿಯುವ ಯೋಗ್ಯತೆಯಿಲ್ಲ. ಆದರೆ, ಇವರಿಗೂ ಐದು ಲಕ್ಷ ಮಂದಿ ಮತ ಹಾಕಿದ್ದಾರೆ’ ಎಂದು ಕುಟುಕಿದರು.

ತಮ್ಮಣ್ಣ ರಾಜೀನಾಮೆ ಕೊಡಲಿ: ಸುಮಲತಾ

ಬೆಂಗಳೂರು: ಕ್ಷೇತ್ರದ ಜನರ ಕೆಲಸ ಮಾಡಿಕೊಡಲು ಆಗದೇ ಇದ್ದರೆ ಡಿ.ಸಿ.ತಮ್ಮಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಡೆಯಲಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಬೆಂಬಲ ನೀಡಿದ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳಲು ಪಕ್ಷದ ರಾಜ್ಯ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

‘ರಸ್ತೆ ಮತ್ತು ಚರಂಡಿ ನಿರ್ಮಿಸುವಂತೆ ಮನವಿ ಮಾಡಿದ ದಲಿತ ಸಮುದಾಯದವರ ಮೇಲೆ ತಮ್ಮಣ್ಣ ಕೂಗಾಡಿದ್ದಾರೆ. ಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ಸೋಲಿನ ಹಿನ್ನೆಲೆಯಲ್ಲಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಮಾಡುತ್ತಿರಬಹುದು. ಜನರ ಕೆಲಸ ಮಾಡಿಕೊಡುವುದು ಕ್ಷೇತ್ರದ ಶಾಸಕರೂ ಆಗಿರುವ ಜವಾಬ್ದಾರಿ’ ಎಂದು ಅವರು ಪ್ರತಿಪಾದಿಸಿದರು.

ದುರಹಂಕಾರ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿರುವುದರಿಂದಲೇ ಜನರು ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಿದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಲು ತಮ್ಮಣ್ಣ ಹೇಳಿಕೆ ಮತ್ತು ಧೋರಣೆಯೇ ಕಾರಣ. ಇಂತಹ ಸಚಿವರಿಗೆ ಪಕ್ಷದ ನಾಯಕರು ತಿಳಿವಳಿಕೆ ನೀಡಬೇಕು ಎಂದು ಸುಮಲತಾ ಸಲಹೆ ನೀಡಿದರು.

ಮದ್ದೂರು ತಾಲ್ಲೂಕಿನ ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ ಕಾಲೊನಿಗೆ ಚರಂಡಿ ಮತ್ತು ರಸ್ತೆ ಸಂಪರ್ಕ ಕಲ್ಪಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಆಗ, ತಮ್ಮಣ್ಣ ಸಿಟ್ಟಾಗಿ ಬೈದಿದ್ದರು ಎಂದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.