ಮೈಸೂರು: 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಭಾಷೆಯ ಸವಾಲುಗಳು ಹಾಗೂ ಉಳಿವಿನ ಸಾಧ್ಯತೆಗಳನ್ನು ಕುರಿತು 600 ಪುಟದ ‘ವಿಕಾಸ ಕನ್ನಡ’ ಸಂಕಲನವನ್ನು ಹೊರತರಲಾಗುತ್ತಿದೆ.
ಕರ್ನಾಟಕದ ಏಕೀಕರಣ ಚಳವಳಿ ಕಾಲದಿಂದ ಇಂದಿನವರೆಗೆ ಕನ್ನಡದ ಉಳಿವಿನ ಪ್ರಯತ್ನದ ಬಗ್ಗೆ ಈ ಕೃತಿಯಲ್ಲಿ ಚರ್ಚೆಯಾಗಲಿದೆ. ಭಾಷೆ, ಸಾಹಿತ್ಯ, ಸಮಕಾಲೀನ ಬಿಕ್ಕಟ್ಟುಗಳು, ವಿವಿಧ ವರದಿಗಳು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕನ್ನಡ ಕುರಿತು ಕ್ಷೇತ್ರ ಪರಿಣಿತರಿಂದ ಪ್ರಬಂಧಗಳನ್ನು ರಚಿಸಿ ಕೃತಿ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
5 ವಿಭಾಗಗಳು: ಕನ್ನಡ ಸಾಹಿತ್ಯ ಪರಿಷತ್ ಹೊರತರುತ್ತಿರುವ ಈ ಕೃತಿಯಲ್ಲಿ 5 ವಿಭಾಗಗಳಿವೆ. ‘ಕನ್ನಡ ಚಳವಳಿ‘ ವಿಭಾಗದಲ್ಲಿ ಏಕೀಕರಣ ಚಳವಳಿಯಿಂದ ಹಿಡಿದು, ಕರ್ನಾಟಕದ ಉದಯವರೆಗೆ ವಿಶ್ಲೇಷಣೆ ಇರಲಿದೆ. ‘ಸಂಕಿರಣ’ ವಿಭಾಗದಲ್ಲಿ ಕನ್ನಡದ ಸಮಕಾಲೀನ ಸಮಸ್ಯೆಗಳು; ಸಂಶೋಧನೆ, ಹೊಸ ಬರಹ, ಭಾಷಾ ವೈವಿಧ್ಯತೆ ಕುರಿತು ಲೇಖನಗಳಿರಲಿವೆ. ‘ವರದಿ’ ವಿಭಾಗದಲ್ಲಿ ಗೋಕಾಕ್ ಚಳವಳಿ ಸೇರಿದಂತೆ ವಿವಿಧ ಚಳವಳಿಗಳ ಬಗ್ಗೆ ಮಾಹಿತಿ; ‘ಕಾವ್ಯ ವಿಮರ್ಶೆ’ ವಿಭಾಗದಲ್ಲಿ ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಪ್ರಮುಖರ ಕವಿತೆಗಳ ಬಗ್ಗೆ ವಿಮರ್ಶಾ ಲೇಖನಗಳು ಇರಲಿವೆ.
ಚುಟುಕಾದ ವಿಶ್ಲೇಷಣೆ: ‘ಬಹುತೇಕ ಭಾಷಾ ವರದಿಗಳು ಬೃಹತ್ ಗಾತ್ರದಲ್ಲಿ ಇರುವ ಕಾರಣ, ಸಂಪೂರ್ಣವಾಗಿ ಪ್ರಕಟಿಸಲು ಆಗದು. ಹಾಗಾಗಿ, ಸಂಕ್ಷಿಪ್ತ ಮಾಹಿತಿ ಹಾಗೂ ವಿಶ್ಲೇಷಣೆ ನೀಡಲಾಗುವುದು. ಕನ್ನಡ ಚಳವಳಿಯೂ ಸಾಕಷ್ಟು ವಿಶಾಲವಾಗಿದ್ದು, ಅದನ್ನು ಚೊಕ್ಕವಾಗಿ ಈ ಗ್ರಂಥದಲ್ಲಿ ಹಿಡಿದಿಡಲಾಗುವುದು. ಇಷ್ಟಾಗಿಯೂ ಕೃತಿಯು 600 ಪುಟ ಮೀರಲಿದೆ. ಸಮ್ಮೇಳನದ ಉದ್ಘಾಟನೆಯ ದಿನವಾದ ನ. 24ರಂದು ಕೃತಿ ಬಿಡುಗಡೆ
ಯಾಗಲಿದೆ’ ಎಂದು ಸಂಪಾದಕ ಪ್ರೊ.ಎನ್.ಎಂ.ತಳವಾರ ಅವರು ಮಾಹಿತಿ ನೀಡಿದರು.
ಕನ್ನಡ ಭಾಷೆಯ ಉಳಿವು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾಗಿರುವ ಬೆಳವಣಿಗೆ ಕುರಿತ ಪ್ರತ್ಯೇಕ ವಿಭಾಗ ಈ ಕೃತಿಯಲ್ಲಿದೆ. ಕನ್ನಡಕ್ಕಾಗಿ ರಚನೆಯಾಗಿರುವ ತಂತ್ರಾಂಶಗಳು, ಅಂತರ್ಜಾಲದಲ್ಲಿ ಕನ್ನಡವನ್ನು ಕುರಿತ ವಿಶೇಷ ಲೇಖನಗಳು ಪ್ರಕಟಗೊಳ್ಳಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.