ADVERTISEMENT

ಸಮ್ಮೇಳನದಲ್ಲಿ ಮಂಕಾದ ಪ್ರಕಾಶನ ಮಾಫಿಯಾ!

ಕೆ.ಎಸ್.ಗಿರೀಶ್
Published 2 ಫೆಬ್ರುವರಿ 2015, 19:30 IST
Last Updated 2 ಫೆಬ್ರುವರಿ 2015, 19:30 IST

ಶ್ರವಣಬೆಳಗೊಳ: ಸರ್ಕಾರದ ಮರ್ಜಿ ಇಲ್ಲದೆಯೂ ಪುಸ್ತಕ ಪ್ರಕಾಶನದಿಂದ ಬದುಕಬಹುದು ಎಂಬುದು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಋಜುವಾತಾಯಿತು.

ಹೌದು, ಇಲ್ಲಿನ 518 ಮಳಿಗೆಗಳ ಒಂದೇ ಸೂರಿನಡಿ ಸೇರಿರುವ ಹಲವು ಪ್ರಕಾಶಕರು, ಸರ್ಕಾರದ ನೆರವನ್ನು ಸಾರಾಸಗಟಾಗಿ ತಳ್ಳಿಹಾಕಿ ಒಳ್ಳೆಯ ಪುಸ್ತಕಗಳನ್ನು ಮುದ್ರಿಸಿದರೆ ಖಂಡಿತ ಪ್ರಕಾಶನ ನಂಬಿಯೇ ಬದುಕಬಹುದು ಎಂದು ಹೇಳಿದರು.

ಇದುವರೆಗೂ ಕೇವಲ ಗ್ರಂಥಾಲ­ಯಕ್ಕಾಗಿಯೇ ಪುಸ್ತಕ ಪ್ರಕಾಶಿಸುತ್ತಿದ್ದ ಪ್ರಕಾಶನಾ ಮಾಫಿಯಾ ಮಂಕಾಗಿದೆ. ಗ್ರಂಥಾಲಯ ಇಲಾಖೆಯಿಂದ ನಿವೃತ್ತ­ರಾ­ದವರು, ಹತ್ತಾರು ಪ್ರಕಾಶನಗಳನ್ನು ವಿಭಿನ್ನ ಹೆಸರುಗಳಿಂದ ನಡೆಸುವವರು, ಪುಸ್ತಕದ ಮುಖಪುಟ, ಶೀರ್ಷಿಕೆಗಳನ್ನು ತುಸು ಬದಲಿಸಿ ಹೊಸ ಪುಸ್ತಕವೆಂದು ಹಳೆಯ ಪುಸ್ತಕಗಳನ್ನೇ ಮಾರುವವರು ಕುಗ್ಗಿ ಹೋಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರ  ಖರೀದಿಸಿದ ಪುಸ್ತಕಗಳಿಗೆ ಹಣವನ್ನೇ ನೀಡಿಲ್ಲ. ಹೀಗಾಗಿ, ಸದ್ಯ ನಡೆಯುತ್ತಿರುವ ಸಮ್ಮೇಳನದಲ್ಲಿ ಸರ್ಕಾರದ ಸಗಟು ಖರೀದಿಯನ್ನು ಆಶ್ರಯಿಸದ ಹಲವು ಪ್ರಕಾಶಕರೇ ಕಂಡುಬಂದರು.

ಯಾಜಿ ಪ್ರಕಾಶನದ ಗಣೇಶ್ ಯಾಜಿ ಮಾತನಾಡಿ, ‘ಸರ್ಕಾರದ ಗ್ರಂಥಾಲಯ­ಕ್ಕಾಗಿಯೇ ಪುಸ್ತಕ ಪ್ರಕಾಶನ ಪ್ರಾರಂಭಿಸಿಲ್ಲ.  ಎರಡು ವರ್ಷಗಳಿಂದ ಈ ವೃತ್ತಿಯಲ್ಲಿದ್ದೇನೆ. 2012ರಲ್ಲಿ ನನ್ನ ಎರಡು ಪುಸ್ತಕಗಳು ಗ್ರಂಥಾಲಯಕ್ಕಾಗಿ ಆಯ್ಕೆ ಆಗಿದ್ದೂ ಉಂಟು. ಆದರೆ, ಇನ್ನೂ ಹಣ ಬಿಡುಗಡೆಯಾಗಿಲ್ಲ. ಆ ನಂತರ ಸುಮಾರು 18 ಪುಸ್ತಕಗಳನ್ನು ಪ್ರಕಾಶನ ಮಾಡಿದ್ದೇನೆ. ಸರ್ಕಾರವನ್ನೇ ನಂಬಿದ್ದರೆ ಇದನ್ನು ಮಾಡಲಾಗುತ್ತಿ­ರಲಿಲ್ಲ. ಸರ್ಕಾರದ ವಿಳಂಬ ನೀತಿ, ಸ್ವಜನಪಕ್ಷಪಾತ, ಲಂಚಗುಳಿತನ ಬೇಸರ ತರಿಸಿದೆ' ಎಂದು ಪ್ರತಿಕ್ರಿಯಿಸಿದರು.

ಅನ್ವೇಷಣೆ ಪ್ರಕಾಶನದ ಆರ್.ಜಿ. ಹಳ್ಳಿ ನಾಗರಾಜ ಅವರು, ‘ವೈಚಾರಿಕ ಸಿದ್ಧಾಂತಗಳನ್ನು ಜನರಿಗೆ ತಲುಪಿಸ­ಲೆಂದೇ ಪ್ರಕಾಶನ ಆರಂಭಿಸಲಾಗಿದೆ. ಇದರಲ್ಲಿ  ಗ್ರಂಥಾಲಯದ ಮರ್ಜಿ ನಮಗೆ ಬೇಕಿಲ್ಲ. ಒಳ್ಳೆಯ ವಿಚಾರಗಳನ್ನು ತಿಳಿಸುವ ಪುಸ್ತಕಗಳಿಗೆ ನಿಜ ಓದುಗ ವಲಯ ಇದ್ದೇ ಇರುತ್ತದೆ. ಇವರೇ ಪ್ರಕಾಶಕರಿಗೆ ಜೀವ ತುಂಬುವವರು. ನಾವು ಈ ವಲಯದಲ್ಲಿ ಯಾರ ಕಾಲೂ ಹಿಡಿಯಬೇಕಿಲ್ಲ, ಯಾರಿಗೂ ಲಂಚ ನೀಡಬೇಕಿಲ್ಲ. ಹಾಗಾಗಿ, ನನಗೆ ಈ ಓದುಗ ವಲಯವೇ ಮುಖ್ಯ' ಎಂದರು.

ಕಳೆದ 8 ವರ್ಷಗಳಿಂದ ಪುಸ್ತಕ ಪ್ರಕಾಶನವನ್ನೇ ವೃತ್ತಿಯಾಗಿಸಿಕೊಂಡು ಬಂದಿರುವ ಬಸವರಾಜು ಸೂಳೆಭಾವಿ ಲಡಾಯಿ ಪ್ರಕಾಶನದ ಮೂಲಕ ನಾಡಿನ ಪ್ರಜ್ಞಾವಂತರಿಗೆ ಚಿರಪರಿಚಿತರು. ಇವರೂ ಸಹ, ನಿರಾಶದಾಯಕ ವಾತಾವರಣ ಪುಸ್ತಕ ಪ್ರಕಾಶನದಲ್ಲಿ ಇಲ್ಲ ಎಂದೇ ಹೇಳುತ್ತಾರೆ.

‘ಗ್ರಂಥಾಲಯ ಖರೀದಿಯನ್ನು ನೆಚ್ಚಿ­ಕೊಳ್ಳದೇ ಪುಸ್ತಕ ಪ್ರಕಾಶನದಲ್ಲಿ ಉಸಿರಾಡುವ ಅನೇಕ ಸಾಧ್ಯತೆಗಳು ಇವೆ. ಆದರೆ, ಗ್ರಂಥಾಲಯದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇ­ಕಾಗಿದೆ. ಗ್ರಂಥಾಲಯಗಳು ಜನರಿಗೆ ಬೇಕೇ ಬೇಕು. ಆದರೆ, ಸದ್ಯದ ಸಗಟು ಪುಸ್ತಕ ಖರೀದಿಯಲ್ಲಿ ‘ಕಸ'ವೇ ದೊಡ್ಡ ಪ್ರಮಾಣದಲ್ಲಿ ಗ್ರಂಥಾಲಯಗಳನ್ನು ಸೇರುತ್ತಿದೆ. ಇದರಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಐದಾರು ವರ್ಷ ಸರ್ಕಾರ ಸಗಟು ಖರೀದಿಯನ್ನು ನಿಲ್ಲಿಸಬೇಕು. ಆಗ ಮಾತ್ರ ನಿಜವಾದ ಪ್ರಕಾಶಕರು ಉಳಿಯುತ್ತಾರೆ. ಆದರೆ, ಈಗ ಮುದ್ರಿಸೋದೇ ಗ್ರಂಥಾಲಯಗಳಿಗೆ ದಬ್ಬುವುದಕ್ಕೆ ಎನ್ನುವ ಮನೋಭಾ­ವದವರೇ ಸರ್ಕಾರಿ ವಲಯದಲ್ಲಿ ತುಂಬಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಕ ಪ್ರಕಾಶನದ ವಿಷಕಂಠೇಗೌಡ ಸಹ ಇದಕ್ಕೆ ದನಿಗೂಡಿಸುತ್ತಾರೆ. ‘ಪುಸ್ತಕ ಖರೀದಿಯಲ್ಲಿ ಏಕತಾನತೆ ಮೂಡಿದೆ. ಕಮಿಷನ್ ಹಾವಳಿ ಮೊದಲಾದ ಕಾರಣಕ್ಕೆ ಒಳ್ಳೆಯ ಪುಸ್ತಕಗಳು ಗ್ರಂಥಾಲ­ಯಗಳನ್ನು ಸೇರುತ್ತಿಲ್ಲ ಎಂದರು.

ಮೂರು ವರ್ಷದಿಂದ ಬಾರದ ಹಣ!:  2012ರಲ್ಲಿ ಸರ್ಕಾರಕ್ಕೆ ಸಗಟು ಖರೀದಿಗೆ ನೀಡಿದ ಪುಸ್ತಕಗಳಿಗೆ ಹಣವೇ ಬಿಡುಗಡೆಯಾಗಿಲ್ಲ ಎಂದು ಮತ್ತಷ್ಟು ಪ್ರಕಾಶಕರು ಅಳಲು ತೋಡಿ­ಕೊಂಡರು. ಇದರಿಂದಲೇ ಅಕ್ರಮಗಳಿಗೆ ಅವಕಾಶ­ವಾ­ಗುತ್ತದೆ ಎಂದೂ ಅವರು ವಿಶ್ಲೇಷಿಸುತ್ತಾರೆ.

ಪ್ರಗತಿ ಪ್ರಕಾಶನದ ಕಾಶೀನಾಥ್ ಅಂಬಳಗಿ ಪುಸ್ತಕ ಮಾರಾಟದಲ್ಲಿ ಹೊಸ ತಂತ್ರಗಳು ಬೇಕು ಎಂದು ಹೇಳುತ್ತಾರೆ. ಅಭಿರುಚಿ ಪ್ರಕಾಶನದ ಗಣೇಶ್, ‘ಸಾಹಿತ್ಯ ವ್ಯಾಪಾರವಾಗಬಾರದು’ ಎಂದು ಹೇಳುತ್ತಾರೆ. ಲಾಭ ಸಂಪಾದನೆಗೆ ಮಾರ್ಗ ಎಂದು ತಿಳಿದರೆ ಬೇನಾಮಿ ಪ್ರಕಾಶಕರು ಹುಟ್ಟಿಕೊಳ್ಳು­ತ್ತಾರೆ. ಹೀಗಾಗಿ, ಸರ್ಕಾರದ ಮರ್ಜಿಗೆ ಒಳಪಡದೇ ಜನರಿಗಾಗಿ ಪುಸ್ತಕವನ್ನು ಮುದ್ರಿಸಬೇಕು ಎಂದು ಹೇಳಿದರು.

ಛಂದ ಪುಸ್ತಕ ಪ್ರಕಾಶನದ ವಸುಧೇಂದ್ರ, ‘ಗ್ರಂಥಾಲಯ ಕುರಿತು ಅಗೌರವ ಇಲ್ಲ. ಆದರೆ, ಗ್ರಂಥಾಲಯ ಜನರನ್ನು ತಲುಪುತ್ತಿದೆಯೇ ಎಂಬುದೇ ಅನುಮಾನ. ನಾನಂತೂ ಗ್ರಂಥಾಲ­ಯ­­ವನ್ನು ನೆಚ್ಚಿಕೊಳ್ಳದೇ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದೇನೆ. ತೃಪ್ತಿದಾಯಕವಾಗಿದೆ’ ಎಂದು ಹೇಳುತ್ತಾರೆ.

ಅಕ್ರಮ ಆರೋಪ ಸತ್ಯಕ್ಕೆ ದೂರ
2012–13ನೇ ಸಾಲಿಗಾಗಿ 4,822 ಪುಸ್ತಕಗಳನ್ನು ಖರೀದಿಸ­ಲಾ­ಗಿದೆ. ಇದರಲ್ಲಿ ಕ್ರಮಸಂಖ್ಯೆ 1ರಿಂದ 1,250ರವರೆಗೆ ಹಣವನ್ನು ನೀಡಲಾ­ಗಿದೆ. ಇನ್ನುಳಿದ 1,251­ರಿಂದ 4,822 ಪುಸ್ತಕಗಳಿಗೆ ಹಣ ನೀಡಲು ಆದೇಶ­ವಾಗಿದ್ದು, ಸರ್ಕಾರದ ಅನುದಾನಕ್ಕೆ ಕಾಯಲಾಗುತ್ತಿದೆ. ಪುಸ್ತಕ ಖರೀದಿಯಲ್ಲಿ ಲಂಚ­ಗುಳಿತನ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು. 22 ಸದಸ್ಯರಿರುವ ಪುಸ್ತಕ ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಪುಸ್ತಕಗಳನ್ನಷ್ಟೇ ನಾವು ಕೊಳ್ಳುತ್ತೇವೆ. ಖರೀದಿಯಲ್ಲಿ ಅಧಿಕಾರಿಗಳ ಪಾತ್ರ ಇಲ್ಲ. ಹಣ ಬಿಡುಗಡೆ ಮಾಡುವಾಗಲೂ ‘ಅ' ಕಾರಾದಿ ನಿಯಮವನ್ನು ಅನುಸರಿಸ­ಲಾಗುತ್ತಿರುವುದರಿಂದ ಪಾರದರ್ಶಕತೆ ಇದೆ. ಸರ್ಕಾರ ಬೇಗ ಹಣ ಬಿಡುಗಡೆ ಮಾಡಿದ್ದಷ್ಟೇ ವೇಗವಾಗಿ ಹಣವನ್ನು ಸಂಬಂಧಿಸಿದ ಪ್ರಕಾಶಕರಿಗೆ ಬಿಡುಗಡೆ ಮಾಡುತ್ತೇವೆ. ಇದಕ್ಕೆ ಸರ್ಕಾರ­ವೊಂದನ್ನೇ ದೂಷಿಸುವಂತಿಲ್ಲ. ಬೆಂಗ­ಳೂರು ಮಹಾನಗರ ಪಾಲಿಕೆಯಿಂದಲೇ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ₹ 223 ಕೋಟಿ  ಗ್ರಂಥಾಲಯ ಕರ ಪಾವತಿ­ಯಾಗಬೇಕು. ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳಿಂದ ₹ 62 ಕೋಟಿ  ಬಾಕಿ ಉಳಿದಿದೆ. ಇದು ಬೇಗ ಮರುಪಾವತಿಯಾಗಬೇಕು. ಪ್ರಸಕ್ತ ಸಾಲಿನ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಫೆ. 20 ಕೊನೆಯ ದಿನ.
–ಸತೀಶ್‌ಕುಮಾರ್ ಎಸ್. ಹೊಸಮನಿ,
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.